ರಾಯಚೂರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ನಗರದ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಜಿಲ್ಲೆಯ ಎಲ್ಲಾ ತಾಲೂಕಿನ ಹಡಪದ ಅಪ್ಪಣ್ಣ ಸಮಾಜದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸಮಾಜದ ಸರಕಾರಿ ನೌಕರರ ಸಂಘದವರು ಮತ್ತು ಸಮಾಜದ ಬಾಂಧವರು ವಾಹನಗಳ ಮೂಲಕ ಸಾವಿರಾರು ಜನರು ಅಗಮಿಸಿದ್ದರು.
ಸಭೆ ಎಲ್ಲರೂ ಎದ್ದುನಿಂತು ಕುವೆಂಪು ರಚಿತ ನಾಡಗೀತೆ ಹಾಡುವ ಮೂಲಕ ಆರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ರಾಯಚೂರು ಮಹಾನಗರ ಸಭೆಯ ಪ್ರಭಾರಿ ಅಧ್ಯಕ್ಷರಾದ ಸಜ್ಜದ ಅವರು ವಹಿಸಿದ್ದರು. ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಮಹಾಬಲೇಶಪ್ಪ, ಅಧ್ಯಕ್ಷ ಗದ್ದಪ್ಪನವರು, ತಿರುಪತಿಯವರು ಮತ್ತು ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜದ ಹಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕಮಲಾಬಾಯಿ ಅವರು ಹನ್ನೆರಡನೆಯ ಶತಮಾನದಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಮೊಸಬಿನಹಾಳ ಗ್ರಾಮದಲ್ಲಿ ಜನಿಸಿದ ಶರಣ ಹಡಪದ ಅಪ್ಪಣ್ಣನವರ ಜೀವನ, ಕಾಯಕ ಕುರಿತು ಉಪನ್ಯಾಸ ಮಾಡಿದರು.

ಒಂದು ದಿನ ಬಿಜ್ಜಳನ ಒಡ್ಡೋಲಗಕ್ಕೆ ಬಸವಣ್ಣ ಒಬ್ಬರೆ ಹೋದರು. ಸಭೆಯಲ್ಲಿ ಕುಹಕಿಗಳು ಏಕೆ ತಾಂಬೂಲ ಮೆಲ್ಲಲು ಅಪ್ಪಣ್ಣ ಬರಲಿಲ್ಲವೆ? ಎಂದು ಕುಹಕವಾಡಿದರು. ಅದಕ್ಕೆ ಬಸವಣ್ಣ ಶಾಂತವಾಗಿ ಓಹ್ ಮರೆತುಹೋಯ್ತು. ಎಂದು ವೀಳ್ಯೆ ಕೊಟ್ಟು ಅಪ್ಪಣ್ಣನವರಿಗೆ ಕೊಡಲು ಯಾರನ್ನೊ ಮಹಾಮನೆಗೆ ಕಳಿಸಿದರು. ಅಲ್ಲಿ ಅಪ್ಪಣ್ಣನವರು ತಮ್ಮ ರುಂಡವನ್ನು ಕೋಯ್ದು ಆ ತಟ್ಟೆಯಲ್ಲಿಟ್ಟು ಕಳಿಸಿದರು. ತಟ್ಟೆಯಲ್ಲಿದ್ದ ರುಂಡ ತಾಂಬೂಲ ಮೆಲ್ಲುವುದನ್ನು ಕಂಡು ಸಭೆ ಬೆಕ್ಕಸ ಬೆರಗಾಯಿತಂತೆ. ಅಂದಿನಿಂದ ಅಪ್ಪಣ್ಣನವರ ಬಗ್ಗೆ ಕುಹಕವಾಡುವುದು ನಿಂತಿತೆಂಬ ಮಿತ್ತನ್ನು ಹೇಳಿದರು.
ಅಂದು ವರ್ಣಾಶ್ರಮ ಪದ್ಧತಿ ಜೀವಂತವಿದ್ದಾಗ ಶೂದ್ರರಿಗೆ ಶಿಕ್ಷಣ ಲಭ್ಯವಿಲ್ಲದ ಕಾಲದಲ್ಲಿ ಅಪ್ಪಣ್ಣನಂಥವರು ಬಸವಣ್ಣನವರ ಬೆಂಬಲ, ಮಾರ್ಗದರ್ಶನದಲ್ಲಿ ಕಾಯಕ ದಾಸೋಹದ ಮೂಲಕ ಪ್ರಧಾನಿ ಬಸವಣ್ಣನವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಅವರ ಧರ್ಮಪತ್ನಿ ಲಿಂಗಮ್ಮನವರು ಸಹ ಮಹಿಳೆಯರಿಗೆ ಶಿಕ್ಷಣ ಕೊಡದ ಸಂದರ್ಭದಲ್ಲಿ ನೂರಾ ಹದಿನೆಂಟು ವಚನಗಳ ರಚಿಸಿದರು ಎಂದ್ಹೇಳಿ ಲಿಂಗಮ್ಮರ ಒಂದೆರಡು ವಚನಗಳನ್ನು ಉದಾಹರಿಸಿದರು.

ಇಂದು ನಮ್ಮ ಸಮಾಜಕ್ಕೆ ಏನಾಗಿದೆ. ಬಸವಣ್ಣ, ಅಪ್ಪಣ್ಣ ಮುಂತಾದ ಶರಣರ ಕಾಯಕ ಮಾರ್ಗ ಅನುಸರಿಸಿ, ಮಕ್ಕಳಿಗೆ ಚನ್ನಾಗಿ ವಿದ್ಯಾಭ್ಯಾಸ ಕೊಡಿಸಿರಿ. ನಮ್ಮ ಸಮಾಜದ ಬಾಂಧವರ ಇತಿಹಾಸ ಮಕ್ಕಳಿಗೆ ತಿಳಿಸಿ, ಕುಟುಂಬವನ್ನು ಗೌರವಿಸಿ, ಕಾಯಕ ಮರೆತು ಕುಡಿದು ತಿಂದು ಮಕ್ಕಳ ಭವಿಷ್ಯ ಹಾಳುಮಾಡಬೇಡಿ ಎಂದರು.
ನಂತರ ಸಮಾಜದ PUC ಮತ್ತು SSLC ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮಕ್ಕಳನ್ನು ಮತ್ತು ಸಮಾಜದ ನಿವೃತ್ತ ಸರಕಾರಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊನೆಯಲ್ಲಿ ವಚನ ಮಂಗಲ, ಪ್ರಸಾದ ವಿತರಣೆಯೊಂದಿಗೆ ಸಭೆ ಮುಕ್ತಾಯವಾಯಿತು.