ದಾಸೋಹದಲ್ಲಿ ದೇವರನ್ನು ಕಂಡ ಶರಣರು: ಗುರುಮಹಾಂತ ಶ್ರೀ

ಇಳಕಲ್ಲ:

‘ಬೀಜದೊಳಗಿನ ವೃಕ್ಷದಂತೆ ನಮ್ಮೊಳಗಿನ ಅವ್ಯಕ್ತ ದೇವರನ್ನು ಇಷ್ಟಲಿಂಗದಲ್ಲಿ ಶ್ರದ್ಧೆ ಇಟ್ಟು, ಸತ್ಯ ಶುದ್ಧ ಕಾಯಕ, ದಾಸೋಹದ ಮೂಲಕ ಕಂಡುಕೊಳ್ಳಬೇಕು’ ಎಂದು ಪೂಜ್ಯ ಗುರುಮಹಾಂತ ಶ್ರೀ ಹೇಳಿದರು.

ಇಲ್ಲಿಯ ಜೋಶಿಗಲ್ಲಿಯ ಉದ್ಯಾನದಲ್ಲಿ ಸೋಮವಾರ ಅಕ್ಕನ ಬಳಗ ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವಾದಿ ಶರಣರ‌ ವಿಚಾರಗಳನ್ನು ಮನೆ ಮನೆಗಳಿಗೆ, ಪ್ರತಿಯೊಬ್ಬರ ಮನಗಳಿಗೆ ತಲುಪಿಸಲು ಅಕ್ಕನ ಬಳಗ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಸವಾದಿ ಶರಣರು ಸಕಲ ಜೀವಿಗಳಿಗೆ ಲೇಸು ಬಯಸಿದ ದಾರ್ಶನಿಕರು’ ಎಂದು ಅಭಿಪ್ರಾಯಪಟ್ಟರು.

ರಾಮನಗೌಡ ಸಂದಿಮನಿ ಮಾತನಾಡಿ, ‘ದೇವರ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುತ್ತಿದ್ದ, ಮೌಢ್ಯ ಹರಡುತ್ತಿದ್ದ ಅಂದಿನ ವ್ಯವಸ್ಥೆಯನ್ನು ಸರಿಪಡಿಸಲು ಬಸವಾದಿ ಶರಣರು ಜನರ ಆಡುನುಡಿಯಲ್ಲಿ ಅಧ್ಯಾತ್ಮ ನೀಡಿದರು. ಸತ್ಯ ಮತ್ತು ಸದಾಚಾರದಲ್ಲಿ ದೇವರಿದ್ದಾನೆ’ ಎಂದರು.‌

ಬೀದರನ ಮಾತೋಶ್ರೀ ವಚನಶ್ರೀ ಅವರು ಮಾತನಾಡಿದರು. ಆರ್.ಆರ್. ಸಂದಿಮನಿ, ಬಸವರಾಜ ಹುಂಡೇಕಾರ, ರೇಣುಕಾ ದಿನ್ನಿ, ನಗರಸಭೆ ಸದಸ್ಯ ಮೌಲೇಶ ಬಂಡಿವಡ್ಡರ ಅವರನ್ನು ಸನ್ಮಾನಿಸಲಾಯಿತು.

ಅಕ್ಕನಬಳಗದ ಅಧ್ಯಕ್ಷೆ ಸವಿತಾ ಮಾಟೂರ, ಕಾರ್ಯದರ್ಶಿ ಪ್ರತಿಭಾ ಅಲೇಗಾವಿ, ಖಜಾಂಚಿ ಶಾಂತಾ ಸಜ್ಜನ ಅಕ್ಕನ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *