ಪಂಚಮಸಾಲಿ ಪೀಠಕ್ಕೆ ಪರ್ಯಾಯ ಗುರುಗಳ ನೇಮಿಸಲು ಚರ್ಚೆ: ಕಾಶಪ್ಪನವರ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

“ಸಮಾಜದ ಮುಖಂಡರು ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಗುರುಗಳ ನೇಮಕದ ಬಗ್ಗೆ ಚರ್ಚಿಸಿದ್ದಾರೆ. ಆ ಕುರಿತು ವ್ಯವಸ್ಥೆ ಸಹ ನಡೆಯುತ್ತಿದೆ,” ಎಂದು ಅಖಿಲ ಭಾರತ ಲಿಂಗಯತ ಪಂಚಮಸಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಶನಿವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ‘ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವರ್ತನೆಯಿಂದ ಜನರು ಬೇಸತ್ತಿದ್ದಾರೆ. ಆದರೆ ಅವರನ್ನು ಮಠ ಬಿಟ್ಟು ಹೋಗಿ ಎಂದು ನಾವಾಗಿಯೇ ಹೇಳುವುದಿಲ್ಲ‌. ಅವರಾಗಿಯೇ ಹೋದರೆ ಸಂತೋಷ’ ಎಂದು ಹೇಳಿದರು.

‘ಟ್ರಸ್ಟ್ ಬೈಲಾ ಪ್ರಕಾರ ಸ್ವಾಮೀಜಿ ಸ್ವಂತ ಆಸ್ತಿ ಹೊಂದುವಂತಿಲ್ಲ. ಅದರೆ, ಬೆಳಗಾವಿಯಲ್ಲಿ ಎರಡು ಮನೆ, ಹುಬ್ಬಳ್ಳಿ-ಬೆಂಗಳೂರಲ್ಲಿ ತಲಾ ಒಂದೊಂದು ಮನೆ ಅವರ ಹೆಸರಲ್ಲಿ ಇವೆ,’ ಎಂದು ಆರೋಪಿಸಿದರು.

ಬಸವತತ್ವ ಪ್ರಚಾರ ಹಾಗೂ ಸಮಾಜದ ಏಳ್ಗೆಗೆ ಶ್ರಮಿಸಬೇಕಿದ್ದ ಸ್ವಾಮೀಜಿ ಮೂಲ ಉದ್ದೇಶ ಮರೆತು, ರಾಜಕೀಯ‌ ಪಕ್ಷದ ಬ್ಯಾನರ್ ಅಡಿ ಕುಳ್ಳುವುದು, ವರ್ಗಾವಣೆಗೆ ಶಿಫಾರಸ್ಸು ಮಾಡುವುದು, ಯಾವುದೋ ಒಬ್ಬ ವ್ಯಕ್ತಿ ಪರ ಮಾತನಾಡುವುದು ಮಾಡುತ್ತಿದ್ದಾರೆ,’ ಎಂದು ಹೇಳಿದರು.

‘2008ರಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಲಿಂಗಾಯತ ಪಂಚಮಸಾಲಿ ಮಠಕ್ಕೆ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಅವರ ನಡುವಳಿಕೆಯಲ್ಲಿ ತೀವ್ರ ಬದಲಾವಣೆಗಳು ಕಂಡುಬಂದವು. ಮಠದಲ್ಲಿ ಇದ್ದು ಬಸವತತ್ವ ಪ್ರಚಾರ ಮಾಡದೆ, ಊರೂರು ಅಡ್ಡಾಡುತ್ತ, ಪ್ರಚಾರದ ಹಿಂದೆ ಬಿದ್ದಿದ್ದಾರೆ,’ ಎಂದು ಆರೋಪಿಸಿದರು.

‘ಸ್ವಾಮೀಜಿ ಟ್ರಸ್ಟ್ ವಿರುದ್ಧವಾಗಿ ನಡೆದುಕೊಂಡಾಗ 2019ರಲ್ಲಿ ನೋಟಿಸ್ ನೀಡಲಾಗಿತ್ತು. ಆಗ ತಪ್ಪು ತಿದ್ದಿಕೊಳ್ಳುತೇನೆ ಎಂದು ಅವರು ಪತ್ರ ಕೊಟ್ಟಿದ್ದರು. ಆದರೂ, ಅವರು ಮಠದಲ್ಲಿ ಸರಿಯಾಗಿ ಇರುತ್ತಿರಲಿಲ್ಲ, ಭಕ್ತರಿಗೆ ಸ್ವಾಮೀಜಿ ದರ್ಶನವಾಗುತ್ತಿರಲಿಲ್ಲ. ಆಗಾಗ, ಮಠಕ್ಕೆ ಕೆಲವು ನರಿ, ನಾಯಿಗಳು ಬರುತ್ತಿದ್ದವು. ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಮಠದ ರಕ್ಷಣೆಗೆ ನಾನೇ ಗೇಟ್ ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ’ ಎಂದು ಹೇಳಿದರು.

ಸ್ವಾಮೀಜಿ ಆಸ್ಪತ್ರೆಗೆ ದಾಖಲು

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ. ತಲೆನೋವು, ವಾಂತಿ, ಎದೆನೋವು ತೊಂದರೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಆಹಾರದಲ್ಲಿ ವ್ಯತ್ಯಾಸವಾಗಿದೆ, ಆತಂಕ ಪಡುವ ವಿಷಯವಿಲ್ಲ,’ ಎಂದು ಪಂಚಮಸಾಲಿ ಸಮಾಜದ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಪಾಟೀಲ ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
1 Comment
  • ಸ್ವಾಮೀಜಿ ಸ್ವಂತ ಆಸ್ತಿ ಮಾಡಿದ್ದಾರೆ ಎನ್ನುವುದು ಸತ್ಯವಾದರೆ ದಾಖಲೆ, ಆಧಾರ ಕೊಡಲಿ. ಇಲ್ಲ ಸುಮ್ಮನಿರಲಿ.

Leave a Reply

Your email address will not be published. Required fields are marked *