ಬೀದರ
ಕನ್ನಡ ನಾಡು, ನುಡಿ ಹಾಗೂ ವಚನ ಸಾಹಿತ್ಯಕ್ಕೆ ಡಾ. ಫ.ಗು. ಹಳಕಟ್ಟಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಸಾಹಿತಿ ರಮೇಶ ಮಠಪತಿ ಹೇಳಿದರು.
ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ 265ನೇ ಮಾಸಿಕ ಶರಣ ಸಂಗಮ ಹಾಗೂ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಹಳಕಟ್ಟಿ ಸರಳ ಜೀವನ-ಉದಾತ್ತ ಚಿಂತನೆ-ಅದ್ಭುತ ಕಾರ್ಯಗಳ ತ್ರಿವೇಣಿ ಸಂಗಮವಾಗಿದ್ದರು. ಬಸವಣ್ಣನವರ ಪ್ರಾಣವಾಗಿದ್ದ ವಚನಗಳ ಸಂಶೋಧನೆ, ಸಂಸ್ಕರಣೆ ಹಾಗೂ ಮುದ್ರಣವೇ ಅವರ ಉಸಿರಾಗಿತ್ತು ಎಂದು ತಿಳಿಸಿದರು.

ಕೈತುಂಬಾ ಆದಾಯ ತಂದುಕೊಡುತ್ತಿದ್ದ ವಕೀಲ ವೃತ್ತಿ ತೊರೆದು, ತಮ್ಮನ್ನು ವಚನ ಸಂರಕ್ಷಣೆ ಕಾಯಕಕ್ಕೆ ಸಮರ್ಪಿಸಿಕೊಂಡರು. ಬೇರೆ ಮುದ್ರಣಾಲಯದವರು ಅನುಭಾವದ ರಸಘಟ್ಟಿಯಾದ ವಚನಗಳ ಮುದ್ರಣಕ್ಕೆ ಒಪ್ಪದಿದ್ದಾಗ, ಮನೆ ಮಾರಿ ‘ಹಿತ ಚಿಂತಕ’ ಮುದ್ರಣಾಲಯ ಸ್ಥಾಪಿಸಿದ ತ್ಯಾಗಿಯಾಗಿದ್ದರು ಎಂದು ಹೇಳಿದರು.
ವಚನಗಳ ಪ್ರಸಾರಕ್ಕಾಗಿ ‘ಶಿವಾನುಭವ’ ಮಾಸ ಪತ್ರಿಕೆ ಹಾಗೂ ಕರ್ನಾಟಕ ಏಕೀಕರಣದ ಮಹತ್ವ ಸಾರಲು ‘ನವ ಕರ್ನಾಟಕ’ ಪತ್ರಿಕೆ ಹೊರ ತಂದರು. ಕನ್ನಡ ಮತ್ತು ವಚನ ಅವರ ಎರಡು ಕಣ್ಣುಗಳಾಗಿದ್ದವು. ಒಂದು ವಿಶ್ವವಿದ್ಯಾಲಯ ಮಾಡದ ಕಾರ್ಯವನ್ನು ಅವರು ಮಾಡಿದ್ದರು ಎಂದು ಬಣ್ಣಿಸಿದರು.
ಶಿವಾನುಭವ ಪತ್ರಿಕೆ ಮೂಲಕ 15 ಸಾವಿರ ಪುಟಗಳ ಸಾಹಿತ್ಯ ಹೊರ ತಂದರು. 200 ಶರಣ-ಶರಣೆಯರ ಜೀವನ ಚರಿತ್ರೆ ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ತಾವು ಬಡತನ ಅಪ್ಪಿಕೊಂಡು ಕನ್ನಡ ಹಾಗೂ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಳಕಟ್ಟಿ ಅವರ ‘ನಮ್ಮ ಉಳಿದ ಸಂಪತ್ತನ್ನು ರಕ್ಷಿಸುವಂತೆ ವಚನಗಳನ್ನು ರಕ್ಷಿಸಿ, ನಮಗೆ ಹೊಗಳುವುದಕ್ಕಿಂತ ಶಿವಶರಣರನ್ನು ಹೊಗಳಿರಿ’ ಎಂಬ ಸಂದೇಶವನ್ನು ಅನುಸರಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಮನಸ್ಸು ಮಾಡಿದರೆ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಬಹುದಾಗಿದ್ದ ಫಕಿರಪ್ಪ ಹಳಕಟ್ಟಿ ಅವರು ಕಲ್ಯಾಣ ಕ್ರಾಂತಿಯ ನಂತರ ಭೂಗತವಾಗಿದ್ದ ವಚನ ಸಾಹಿತ್ಯ ಸಂಶೋಧಿಸಿ ಕೊಟ್ಟು ಮಹದುಪಕಾರ ಮಾಡಿದ್ದನ್ನು ಕನ್ನಡಿಗರು ಎಂದೆಂದೂ ಮರೆಯಲಾರರು ಎಂದು ನುಡಿದರು.

ಶ್ರಾವಣ ಮಾಸ ಶುರುವಾಗಲಿದ್ದು, ಹಳಕಟ್ಟಿ ಮತ್ತು ಅಕ್ಕ ಅನ್ನಪೂರ್ಣತಾಯಿ ಅವರ ಆಶಯದಂತೆ ವಚನ ಪಠಣ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಬೇಕು. ಶ್ರಾವಣ ಮಾಸದಲ್ಲಿ ಪ್ರತಿ ದಿನ 101 ವಚನ ಪಠಣ ಮಾಡಬೇಕು ಎಂದು ತಿಳಿಸಿದರು.
ಬರುವ ಬಸವ ಪಂಚಮಿಯಂದು ಹಸಿದವರಿಗೆ ಹಾಲು ಉಣಿಸೋಣ, ಮೂಢ ನಂಬಿಕೆ, ಮೂಢ ಆಚಾರಕ್ಕೆ ತಿಲಾಂಜಲಿ ಇಡೋಣ. ಅಂದು ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಹಾಲು-ಹಣ್ಣು ನೀಡುವ ಮೂಲಕ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿ, ವೈಚಾರಿಕತೆಯನ್ನು ಮೆರೆಯೋಣ ಎಂದು ಹೇಳಿದರು.
ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಡಾ. ಜ್ಞಾನಗಂಗಾ ಪಾಟೀಲ ಅವರು, ಫ.ಗು. ಹಳಕಟ್ಟಿ ಅವರ ಜೀವನ ಚರಿತ್ರೆಯನ್ನು ವಿವರಿಸಿದರು.
ಜಿಲ್ಲಾ ಪಂಚಾಯಿತಿ ವ್ಯವಸ್ಥಾಪಕ ಹುದ್ದೆಯಿಂದ ನಿವೃತ್ತರಾದ ಉಮೇಶ ಪಾಟೀಲ ಹಾಗೂ ಬೀರೇಶ್ವರ ಸೌಹಾರ್ದ ಸಹಕಾರಿಯಿಂದ ಸ್ವಯಂ ನಿವೃತ್ತಿ ಪಡೆದ ಲಾವಣ್ಯ ಚನ್ನಬಸಪ್ಪ ಹಂಗರಗಿ ಅವರನ್ನು ಶಾಲು ಹೊದಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ ಹಾಗೂ ಶ್ಯಾಮಲಾ ಎಲಿ ವಚನ ಗಾಯನ ನಡೆಸಿಕೊಟ್ಟರು. ಪರುಷ ಕಟ್ಟೆ ಚನ್ನಬಸವಣ್ಣ ಹಾಗೂ ಚನ್ನಬಸಪ್ಪ ಹಂಗರಗಿ ಪ್ರಾರ್ಥನೆಗೈದರು. ಡಾ. ಪ್ರಿಯಾ ಎಲಿ ಸ್ವಾಗತಿಸಿದರು. ಲಿಂಗಾನಂದ ಹಂಗರಗಿ ನಿರೂಪಿಸಿದರು.