ಗದಗ ವಚನ ಶ್ರಾವಣದಲ್ಲಿ ಶರಣ ಸೊಡ್ಡಳ ಬಾಚರಸರ ವಚನ ನಿರ್ವಚನ

ಗದಗ

ಶರಣ ಸೊಡ್ಡಳ ಬಾಚರಸರು ಬಸವಣ್ಣನವರ ಹಿರಿಯ ಸಮಕಾಲಿನರು. ಹರಿಹರ ಕವಿ ಕೂಡಾ ಅವರನ್ನು ನೆನೆದಿದ್ದಾನೆ. ಅವರು ಶಿವಭಕ್ತರಾಗಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಧಾನ್ಯ ಅಳೆದು ಕೊಡುವವರಾಗಿದ್ದರು. ಬಸವಣ್ಣನವರಿಂದ ಪ್ರಭಾವಿತರಾಗಿದ್ದ ಅವರು ಬಲು ನಿಷ್ಠೆಯುಳ್ಳವರು.

ಇವರ ಬಗ್ಗೆ ಬಸವ ಪುರಾಣ, ಬಸವೇಶ್ವರ ಕಾವ್ಯ ಭೈರವೇಶ್ವರ ಕಾವ್ಯದ ಕಥಾಮಣಿ, ಸೂತ್ರರತ್ನಾಕರ ಮುಂತಾದ ಕೃತಿಗಳಲ್ಲಿ ಇವರ ಜೀವನದ ಅನೇಕ ಅಂಶಗಳು ಕಂಡುಬರುತ್ತವೆ. ಇವರ ವಚನಗಳಲ್ಲಿ ನೀತಿಯ ಬೋಧೆ, ಭಕ್ತಿ, ದೈವನಿಷ್ಠೆ, ಶರಣರ ಸಂಗ ಇವುಗಳು ಎದ್ದು ಕಾಣಿಸುತ್ತವೆ. ಇವರ ಕಾಯಕದ ಸೇವಾನಿಷ್ಠೆ ಮಹತ್ವದ್ದಾಗಿತ್ತೆಂದು ಶರಣ ಸೊಡ್ಡಳ ಬಾಚರಸರ ಪರಿಚಯವನ್ನು ಉಪನ್ಯಾಸಕಿ ಶ್ರೀಮತಿ ಡಾ. ಗಿರಿಜಾ ಹಸಬಿಯವರು ಮಾಡಿದರು.

ಅವರು ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಗಂಗಾಧರ ಸಿದ್ಧಲಿಂಗಪ್ಪ ಮೇಲಗಿರಿ ಅವರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ ವಚನ ಶ್ರಾವಣ-೨೦೨೫’ದ ಎರಡನೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಭಕ್ತರಲ್ಲದವರೊಡನೆ ಆಡದಿರು, ಆಡದಿರು. ಅರ್ಥದಾಸೆಗೆ ದುರ್ಜನರ ಸಂಗವ ಮಾಡದಿರು, ಮಾಡದಿರು, ಉತ್ತಮರ ಕೆಡೆನುಡಿಯದಿರು, ನುಡಿಯದಿರು ಮುಂದೆ ಹೊತ್ತ ಹೊರೆ ದಿಮ್ಮಿತ್ತಹುದು. ನಿತ್ಯವಲ್ಲದ ದೈವಕ್ಕೆರಗದಿರು, ಎರಗದಿರು. ಕರ್ತು ಸೊಡ್ಡಳನ ನೆರೆ ನಂಬು, ಡಂಬಕ ಬೇಡ.”

ಈ ವಚನ ನಿರ್ವಚನಗೈಯುತ್ತಾ, ವಚನಕಾರ ಸೊಡ್ಡಳ ಬಾಚರಸರು ತಮ್ಮ ಈ ವಚನದಲ್ಲಿ ಭಕ್ತರೆಂದರೆ ಸದಾಚಾರಿಗಳು, ನಡೆನುಡಿ ಶುದ್ಧವಿದ್ದವರು, ಶಿವಶರಣರಲ್ಲಿ ನಿಷ್ಠೆಯಿಂದ ಒಡಗೂಡಿ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವರಾಗಿರಬೇಕು. ಭಕ್ತರಲ್ಲದವರು ಎಂದರೆ ಇವರು ದುರಾಚಾರಿ, ದುರ್ವ್ಯಸನಿ, ದುರ್ನಡೆಯುಳ್ಳವರು, ಇಂಥವರೊಡನೆ ಆಡದಿರಬೇಕು.

ಅವರ ಸಂಗತಿಯಿಂದ ನಮಗೆ ದೊಡ್ಡ ಹಣ ಗಳಿಕೆಗೆ ದುರಾಸೆ ಪಡಬಾರದು, ದುರ್ಮಾರ್ಗದಿಂದ ಬಂದ ಹಣ ನಮಗೆ ಶಾಂತಿ ನೀಡಲಾರದು.

ಜ್ಞಾನಿಗಳ, ಒಳ್ಳೆಯವರ, ಸಜ್ಜನರ ಬಗ್ಗೆ ಯಾವುದೆ ನಿಂದೆ ಮಾತನಾಡಬೇಡ, ಅದಕ್ಕೂ ಮಿಕ್ಕಿ ದುರ್ಮಾರ್ಗಿಯಾದರೆ ಮುಂದೆ ದೊಡ್ಡ ಕಷ್ಟನಷ್ಟಗಳ ಬಾದೆಗೊಳಗಾಗುವೆವು, ಎಂದು ಹೇಳುತ್ತ ಅದೇ ಶರಣರಲ್ಲಿ ದೇವರ ಬಗ್ಗೆ ಒಂದು ಸ್ಪಷ್ಟವಾದ ಕಲ್ಪನೆಯಿತ್ತು. ಅದು ಏಕೀಶ್ವರ ನಿಷ್ಠೆ. ನಿತ್ಯವಲ್ಲದ ದೈವಗಳೆಂದರೆ ಕಲ್ಲು, ಮಣ್ಣು, ಕಟ್ಟಿಗೆ, ತಾಮ್ರ, ಹಿತ್ತಾಳೆಯಂತಹ ಲೋಹಗಳ ದೇವರನ್ನು ಪೂಜಿಸದಿರೆಂದು ಹೇಳುವರು. ಕರ್ತೃ ಎಂಬ ಪದದ ಅರ್ಥ ನಿರಾಕಾರ ಈ ಜಗದ ಮೂಲ ಸ್ವರೂಪವಾಗಿದೆ, ಅದನ್ನೇ ನಂಬೆಂದು ವಚನಕಾರರು ಹೇಳುವರು. ಡಂಬಕ ಎಂಬ ಶಬ್ದವನ್ನು ಇಲ್ಲಿ ಶರಣರು ಅರ್ಥಪೂರ್ಣವಾಗಿ ಬಳಸಿದ್ದಾರೆ. ಡಂಬಕ ಮನದ ಹೋಯ್ದಾಟ, ಚಂಚಲತೆಯಿಂದ ಮುಕ್ತನಾಗಿರೆಂದು ಹೇಳುವರು. ಭಕ್ತಿಯಿಂದ, ನಿಷ್ಠೆಯಿಂದ, ದೃಢವಾಗಿ ನಂಬಬೇಕೆಂದು ವಚನಕಾರ ಸೊಡ್ಡಳ ಬಾಚರಸರು ಹೇಳುವರು ಎಂದು ಹಸಬಿ ನಿರ್ವಚಿಸಿದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ, ಪ್ರಶ್ನೆಗಳಿಗೆ ಉತ್ತರವಾಗಿ ಶರಣರಾದ ಎಸ್. ಎ. ಮುಗದರವರು ನಿರಾಕಾರವಾದ ಚೈತನ್ಯವೇ ಪರಮಾತ್ಮವಾಗಿದೆ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂಬ ಶರಣರ ನಿಜದ ತತ್ವ ಬಸವ ಧರ್ಮದ ಜೀವಾಳವಾಗಿದೆ ಎಂದರು. ಉಳಿದೆಲ್ಲವು ಶಾಶ್ವತವಲ್ಲ, ಅವನ್ನೆಲ್ಲ ನಂಬಬಾರದೆಂದರು.

ಬಸವದಳದ ಶರಣೆಯರಿಂದ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗಾಧರ ಎಸ್. ಮೇಲಗಿರಿ ಸ್ವಾಗತಿಸಿದರು. ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಕೆ.ಎಸ್. ಚಟ್ಟಿಯವರು ವಚನ ಶ್ರಾವಣದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ವಚನ ಓದುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ನಿರೂಪಣೆ ಎಸ್. ಎ. ಮುಗದ ಶರಣರಿಂದ ಜರುಗಿತು. ಶರಣು ಸಮರ್ಪಣೆಯನ್ನು ಶೇಕಣ್ಣ ಕವಳಿಕಾಯಿವರು ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಬಸವದಳದ ಕಾರ್ಯಕರ್ತರು, ಬಡಾವಣೆಯ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *