ಶರಣೆಯರ ಬಳಗದಿಂದ ದಿನಕೊಬ್ಬ ಶರಣರ ಸಾಧನೆಯ ಚಿಂತನೆ

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಬೀದರ

ಚಂದ್ರನ ಬೆಳಗಿನಿಂದ ಚಂದಿರನನ್ನು ಕಾಣುವಂತೆ, ದೀಪದ ಬೆಳಗಿನಿಂದ ದೀಪ ಕಾಣುವಂತೆ, ಸೂರ್ಯನ ಬೆಳಗಿನಿಂದ ಸೂರ್ಯನ ಕಾಣುವಂತೆ, ತನ್ನ ಅಂತರಂಗದ ಬೆಳಗಿನಿಂದ ತನ್ನ ತಾ ಕಾಣಬೇಕು ಎಂದು ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಹೇಳಿದರು.

ಲಿಂಗಾಯತ ಮಹಾಮಠ ಗೋರ್ಟಾ (ಬಿ) ಶ್ರಾವಣ ಮಾಸದ ‘ಶರಣರ ಜೀವನ ದರ್ಶನ’ ಚಿಂತನೆ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಜಗತ್ತನ್ನು ನೋಡುವ ಕಣ್ಣು ತನ್ನ ತಾ ಕಾಣಬೇಕಾದರೆ ಕನ್ನಡಿಯ ಸಹಾಯ ಬೇಕು. ಏನ ಕಂಡಡೇನು ತನ್ನ ತಾ ಕಾಣದಾತ ಕುರುಡ ಎನ್ನುತ್ತಾರೆ ಶರಣರು. ಅರಿವಿನಿಂದ ಬದುಕಿದರೆ ಜೀವನ ಆನಂದಮಯ, ಅರಿವು ತೋರುವ ಗುರು ದೊರೆತಾಗ ಮಾತ್ರ ಅರಿವಾಗಲು ಸಾಧ್ಯ. ತನ್ನ ಅರಿಯುವುದೇ ನಿಜವಾದ ಅರಿವು. ಅರಿತ ಜ್ಞಾನಿ ಸಮಾಜದಲ್ಲಿ ಒಳ್ಳೆಯ ಚಿಂತನೆಗಳನ್ನು ಬಿತ್ತುತ್ತಾ ಸಮಾಜವನ್ನು ಸದೃಢವಾಗಿ ಮುನ್ನಡೆಸುತ್ತಾನೆ.

ಅರಿವು ನಮಗಾಗಲೆಂದೇ ಶರಣರು ನಮಗೆ ವಚನಗಳು ಹಾಗೂ ಇಷ್ಟಲಿಂಗವನ್ನು ಕೊಟ್ಟಿದ್ದಾರೆ. ಇಷ್ಟಲಿಂಗ ಅರಿವಿನ ಕುರುಹು, ವಚನಗಳು ಬದುಕಿನ ದಾರಿದೀಪ. ವಚನಗಳು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಅದಕ್ಕಾಗಿ ಶರಣರ ಜೀವನ ದರ್ಶನವನ್ನು ಒಂದು ತಿಂಗಳ ಪರ್ಯಂತ ಚಿಂತನೆ ಮಾಡುವ ಉದ್ದೇಶದಿಂದ ಲಿಂಗಾಯತ ಮಹಾಮಠ ಗೋರ್ಟಾದಲ್ಲಿ ನೀಲಮ್ಮನ ಬಳಗಕ್ಕೆ ಚಿಂತನೆಯನ್ನು ವಹಿಸಿಕೊಡಲಾಗಿದೆ. ದಿನಕೊಬ್ಬ ಶರಣರ ಜೀವನ ಮತ್ತು ವಚನ ಸಂದೇಶಗಳು ನಡೆಯಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಚನ್ನಬಸಪ್ಪ ಪತಂಗೆ ಮಾತನಾಡಿ, ನಮ್ಮ ಶ್ರೀಮಠವು ಕರ್ನಾಟಕಕ್ಕೆ ಮಾದರಿ. ಎಲ್ಲಾ ಕಡೆ ಶ್ರಾವಣ ಮಾಸದಲ್ಲಿ ಪ್ರವಚನಕಾರರನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಗುರುಗಳು ನೀಲಮ್ಮನ ಬಳಗದ ತಾಯಂದಿರಿಂದ ಚಿಂತನೆ ಮಾಡುವುದಕ್ಕೆ ಅವಕಾಶ ಕೊಟ್ಟು ಮಾದರಿಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಮಾಸಿಕ ಶರಣ ಸಂಗಮ, ಮಕ್ಕಳಿಗಾಗಿ ವೇದಿಕೆ, ಶರಣೆಯರಿಂದ ಚಿಂತನೆ, ವಾರದ ಪ್ರಾರ್ಥನೆ ಮಾಡಿಸುವುದರ ಮುಖಾಂತರವಾಗಿ ಎಲ್ಲರಲ್ಲಿ ಪರಿವರ್ತನೆ ತರುತ್ತಿದ್ದಾರೆ. ಇಂಥ ಗುರುಗಳು ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಹೇಳಿದರು.

ಕಾರ್ಯಕ್ರಮದ ಮೊದಲನೇ ದಿನ ಶಿವಶರಣ ಚಂದಿಮರಸರ ಚಿಂತನೆಯನ್ನು ಮಾಡಿರುವ ಸಂಗೀತ ಬಸವರಾಜ ಕಣಜೆಯವರು ಮಾತನಾಡಿ, ಚಂದಿಮರಸರು ಕೆಂಭಾವಿಯ ಅರಸರಾಗಿದ್ದರು. ಶರಣ ಬೊಗಣ್ಣನವರು ಅದೇ ಗ್ರಾಮದ ಶಿವಭಕ್ತರು. ಅಸ್ಪ್ರೃಶ್ಯರ ಮನೆಯಲ್ಲಿ ಪ್ರಸಾದ ಸ್ವೀಕರಿಸಿದ ಭೋಗಣ್ಣನವರಿಗೆ ಚಂದಿಮರಸರು ಗ್ರಾಮದಿಂದ ಬಹಿಷ್ಕಾರ ಹಾಕಿ ಗ್ರಾಮ ಬಿಟ್ಟು ತೊಲಗುವಂತೆ ಆದೇಶ ಮಾಡಿದರು. ಭೋಗಣ್ಣನವರು ಗ್ರಾಮ ಬಿಟ್ಟು ಹೊರ ನಡೆದಾಗ ಊರಲ್ಲಿರುವ ಎಲ್ಲಾ ಲಿಂಗಗಳು ಬೋಗಣ್ಣನವರ ಜೊತೆ ಊರು ಬಿಟ್ಟು ತೊಲಗಿದವು. ವಿಷಯ ತಿಳಿದ ಚಂದಿಮರಸರು ಭೋಗಣ್ಣನವರು ಶಿವಶರಣರು ಎಂದು ಅರಿತು ಬೋಗಣ್ಣನವರಲ್ಲಿ ಕ್ಷಮೆಯನ್ನು ಕೇಳಿ ಗ್ರಾಮಕ್ಕೆ ಬರಮಾಡಿಕೊಂಡರು.

ನಂತರ ಕಲ್ಯಾಣದ ಶರಣರ ತತ್ವವನ್ನು ಅರಿತು ಬಸವ ಪರಂಪರೆಯ ಶಿವಶರಣರಾದರು. ಸುಮಾರು 157 ವಚನಗಳು ಬರೆದಿರುವ ಚಂದಿಮರಸರ ವಚನಗಳಲ್ಲಿ ಸಮಾಜಕ್ಕೆ ದಾರಿದೀಪವಾಗುವ, ಮೌಡ್ಯತೆಯನ್ನು ಖಂಡಿಸುವ, ತನ್ನ ತಾ ಅರಿಯುವ ಅರ್ಥಗಳನ್ನು ಹೊಂದಿವೆ. ವಚನಗಳನ್ನು ಓದುತ್ತಾ ನಾವು ಶರಣರ ಮಾರ್ಗದಲ್ಲಿ ಮುನ್ನಡೆಯೋಣ ಎಂದು ತಿಳಿಸಿದರು.

ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣವನ್ನು ಮಲ್ಲಮ್ಮ ಸುಭಾಷ ಪತಂಗೆ ನೆರವೇರಿಸಿದರು. ಉದ್ಘಾಟನೆಯನ್ನು ನಿವೃತ್ತ ಶಿಕ್ಷಕರಾದ ಬಸವರಾಜ ಮಾಶೆಟ್ಟಿ ಅವರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಲಿಂಗಾಯತ ಮಹಾಮಠದ ಗೋದಾವರಿ ತಾಯಿ, ವಿಮಲಾಬಾಯಿ ಪೊಲೀಸಪಾಟೀಲ,
ಸುರೇಖಾ ವೀರಶೆಟ್ಟಿ ರಾಜೋಳೆ ಉಪಸ್ಥಿತರಿದ್ದರು. ಪ್ರಜ್ವಲ್ ರಾಜೋಳೆ ಸ್ವಾಗತಿಸಿದರು. ಪ್ರಜ್ವಲ್ ಪತಂಗೆ ನಿರೂಪಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನೀಲಮ್ಮನ ಬಳಗದ ತಾಯಂದಿರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
1 Comment
  • Very nice ree pooyare… ಶರಣು ಶರಣಾರ್ಥಿಗಳು ರೀ💐💐 🙏🙏

Leave a Reply

Your email address will not be published. Required fields are marked *