‘ ರಂಭಾಪುರಿ ಶ್ರೀ ಹೇಳಿಕೆ ಸುಳ್ಳು, ಬಸವಣ್ಣ ವೀರಶೈವ ಧರ್ಮ ಸ್ವೀಕರಿಸಿರಲಿಲ್ಲ’

ಬಸವ ಮೀಡಿಯಾ
ಬಸವ ಮೀಡಿಯಾ

ಇದು ಜನರ ದಿಕ್ಕು ತಪ್ಪಿಸುವ ಹೇಳಿಕೆ: ಸಿದ್ಧರಾಮೇಶ್ವರ ಶ್ರೀ

ಬೀದರ

ಬಸವಣ್ಣ ವೀರಶೈವ ಧರ್ಮ ಸ್ವೀಕರಿಸಿರಲಿಲ್ಲ. ಪಂಚಾಚಾರ್ಯರ ತತ್ವಗಳಿಗೆ ಮಾರು ಹೋಗಿ ವೀರಶೈವ ಧರ್ಮ ಸ್ವೀಕರಿಸಿದ್ದರೆಂಬ ರಂಭಾಪುರಿ ಶ್ರೀಗಳ ಹೇಳಿಕೆ ಶುದ್ಧ ಸುಳ್ಳು ಹಾಗೂ ಖಂಡನೀಯ ಎಂದು ಬಸವಕಲ್ಯಾಣದ ಬಸವ ಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಮಾಸಿಕ ವಚನ ಮಂಟಪ ಹಾಗೂ ಬಸವ ಸಂಸ್ಕೃತಿ-ವಿಶ್ವಶೇಷ್ಠ ಸಂಸ್ಕೃತಿ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗದಲ್ಲಿ ಈ ಕುರಿತು ಹೇಳಿಕೆ ಕೊಟ್ಟಿರುವ ರಂಭಾಪುರಿ ಶ್ರೀಗಳು, 12ನೇ ಶತಮಾನದಲ್ಲಿ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದನ್ನು ನೋಡಿದ್ದಾರೆಯೇ? ಇದು ಜನರ ದಿಕ್ಕು ತಪ್ಪಿಸುವ ಹೇಳಿಕೆ ಎಂದು ತಿಳಿಸಿದರು.

ಬಸವಣ್ಣ ಅಡ್ಡಪಲ್ಲಕ್ಕಿಯಂತಹ ಕೊಳಕು ಆಚರಣೆಯ ಧರ್ಮವನ್ನು ಯಾವತ್ತೂ ಸ್ವೀಕರಿಸಿರಲಿಲ್ಲ. ಅನಿಷ್ಟ, ದುಷ್ಟ ಆಚರಣೆಗಳ ನಿರ್ಮೂಲನೆಗಾಗಿಯೇ ವೈಜ್ಞಾನಿಕ, ಸತ್ಯ, ಸರಳ, ಪ್ರಗತಿಪರ ಲಿಂಗಾಯತ ಧರ್ಮವನ್ನು ಕೊಟ್ಟರು ಎಂದು ಹೇಳಿದರು.

ಪಂಚಪೀಠಗಳು ಬಸವ ತತ್ವ ಪ್ರಚಾರ ಮಾಡುತ್ತಿವೆ ಎಂಬುದು ಅಪ್ಪಟ ಸುಳ್ಳು. ಬದಲಾಗಿ, ಪ್ರಚಾರದ ಹೆಸರಲ್ಲಿ ಬಸವಣ್ಣ, ಬಸವತತ್ವದ ಅಪಪ್ರಚಾರ ಮಾಡುತ್ತಿವೆ. ಶಿಷ್ಯರ ತಲೆ ಮೇಲೆ ಹಾಗೂ ಲಿಂಗದ ಮೇಲೆ ಅಂಗಾಲು ಇಟ್ಟು, ವಿಕೃತವಾಗಿ ಪಾದಪೂಜೆ ಮಾಡುವುದು, ಆಶೀರ್ವಾದ ನೀಡುವುದು, ಬಹುದೇವೋಪಾಸನೆ, ಅಡ್ಡಪಲ್ಲಕ್ಕಿ, ಪಂಚಾಂಗ ನೋಡುವುದು, ವಾಸ್ತು ಜ್ಯೋತಿಷ್ಯದ ನೆಪದಲ್ಲಿ ಮನೆ ಕೆಡುವುದು ಇವೆಲ್ಲ ಬಸವಣ್ಣನವರ ತತ್ವಗಳೇ ಎಂದು ಪ್ರಶ್ನಿಸಿದರು.

ಅವರವರ ಅನುಯಾಯಿಗಳಿಗೆ ಅವರವರ ಆಚಾರ್ಯರೇ ಶ್ರೇಷ್ಠ. ಪಂಚಪೀಠಗಳಿಗೆ ಹೊರತಾದ ಬಸವ ಧರ್ಮದ, ತತ್ವದ ಯಾವುದೇ ಮಠಗಳು ಹಾಗೂ ಬಸವಾನುಯಾಯಿಗಳು, ಪಂಚಾಚಾರ್ಯರು, ಶೈವ ಪ್ರಣೀತ ವೀರಶೈವ ಮತಕ್ಕೆ ಮಹತ್ವ ಹಾಗೂ ಪಾವಿತ್ರ್ಯ ಕೊಡುವ ಅಗತ್ಯವೇ ಇಲ್ಲ ಎಂದು ಹೇಳಿದರು.

ಬಸವತತ್ವ ಪಾಲನೆ ಮಾಡುತ್ತಿರುವ ಕೆಲ ಮಠಾಧೀಶರು ಸಮುದಾಯದಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು, ಬಸವತತ್ವ ಪಾಲನೆ ಮಾಡುವ ಯಾವುದೇ ಮಠವಾಗಲಿ, ಪಂಚಾಚಾರ್ಯ ಶೈವ ಮತದ ಪೀಠಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಬಸವತತ್ವ ಪಾಲನೆ ಮಾಡುವ ಮಠಗಳನ್ನು ಪಂಚಾಚಾರ್ಯರು ಎಂದಿಗೂ ಸಮೀಪಿಸಲು ಆಗದಷ್ಟು ಕಂದಕ ಸೃಷ್ಟಿಸಬೇಕು. ಆಗಲೇ ಬಸವಣ್ಣನವರು ನೀಡಿದ ಶ್ರೇಷ್ಠ ಲಿಂಗಾಯತ ಧರ್ಮ ಉಳಿಯುತ್ತದೆ, ಬೆಳೆಯುತ್ತದೆ ಎಂದು ನುಡಿದರು.

ಉದ್ಘಾಟನೆ ನೆರವೇರಿಸಿದ ಮಹಾಸಭಾ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ, ಬಸವ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ಅದನ್ನು ಅರಿತು ಆಚರಿಸಿದರೆ ಜೀವನ ಸುಂದರವಾಗುತ್ತದೆ ಎಂದು ತಿಳಿಸಿದರು.

ಇಷ್ಟಲಿಂಗ ಬಸವ ಸಂಸ್ಕೃತಿಯ ಜೀವಾಳವಾಗಿದೆ. ಸಮಾನತೆಯ ಸಂಕೇತವೂ ಆಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಸೆ. 3 ರಂದು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಬಸವ ಸಂಸ್ಕೃತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಅಭಿಯಾನ ಅಂಗವಾಗಿ ನಗರದಲ್ಲಿ ಪಥ ಸಂಚಲನ ಜರುಗಲಿದೆ. ಪಥ ಸಂಚಲನದಲ್ಲಿ ವಚನ ವಡಪು, ಡೊಳ್ಳು, ಕೋಲಾಟ, ಬಸವ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಬೃಹತ್ ಗಾತ್ರದ ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ ಪ್ರಮುಖ ಆಕರ್ಷಣೆ ಆಗಲಿವೆ ಎಂದು ಹೇಳಿದರು.

ಸಾವಿರ ಹೆಣ್ಣುಮಕ್ಕಳು ಸಾಂಪ್ರದಾಯಿಕ ಇಳಕಲ್ ಸೀರೆ ಹಾಗೂ ಸಾವಿರ ಪುರುಷರು ಧೋತರ-ಅಂಗಿ-ಟೊಪ್ಪಿಗೆ ಧರಿಸಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಶಿಕ್ಷಕ ಡಾ. ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು. ಖ್ಯಾತ ಚಿತ್ರ ಕಲಾವಿದ ಸಿ.ಬಿ. ಸೋಮಶೆಟ್ಟಿ, ಪಿಎಚ್‍ಡಿ ಪಡೆದ ಶಿವಲಿಂಗ ಹೇಡೆ, ರೋಟರಿ ಕ್ಲಬ್ ಬೀದರ್ ಕ್ವೀನ್ಸ್ ಅಧ್ಯಕ್ಷೆ ಡಾ. ಸುಲೋಚನಾ ಪಾಟೀಲ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸುನೈನಾ ಗುತ್ತಿ ಅವರನ್ನು ಸನ್ಮಾನಿಸಲಾಯಿತು.

ಬಸವದೇವರು ಸಮ್ಮುಖ ವಹಿಸಿದ್ದರು. ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ನಿವೃತ್ತ ಎಂಜಿನಿಯರ್ ಪ್ರಕಾಶ ಮಠಪತಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಸಂತಾಜಿ, ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಕೋಶಾಧ್ಯಕ್ಷೆ ನಿರ್ಮಲಾ ಮಸೂದಿ, ಸುವರ್ಣಾ ಧನ್ನೂರ, ಲಾವಣ್ಯ ಹಂಗರಗಿ, ಸಾಹಿತಿ ಸುರೇಖಾ ಹುಲಸೂರು ಇದ್ದರು.

ರೇಖಾ ಲಿಂಗದಳ್ಳಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಜ್ಞಾನದೇವಿ ಬಬಚೇಡಿ ಸ್ವಾಗತಿಸಿದರು. ಕರುಣಾ ಶೆಟಕಾರ್ ನಿರೂಪಿಸಿದರು. ವಚನ ವೈಭವ ಸಮಿತಿ ಅಧ್ಯಕ್ಷ ರೇವಣಪ್ಪ ಮೂಲಗೆ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *