ದಾವಣಗೆರೆ
ಮಹಿಳೆಯರು ಪುರೋಹಿತಶಾಹಿ ವ್ಯವಸ್ಥೆ ನಿರ್ಮಿಸಿರುವ ಮೌಢ್ಯದ ಆಚರಣೆಗಳನ್ನು ಬಿಟ್ಟು ಹೊರಗೆ ಬರಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶರಣ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು ಅಭಿಪ್ರಾಯಪಟ್ಟರು
ಅವರು ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳದಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಬಸವಣ್ಣನವರು ದೇವರು, ಧರ್ಮದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ, ಹಾಗಾಗಿ ವಚನ ಸಾಹಿತ್ಯ ಓದಿದರೆ ಪುರೋಹಿತರ ಕಪಿಮುಷ್ಠಿಯಿಂದ ಹೊರಗೆ ಬರಲು ಸಹಾಯವಾಗುತ್ತದೆ.
ನಾಳೆ ನಿಮ್ಮ ನಿಮ್ಮ ಊರುಗಳಲ್ಲಿ ನಡೆಯುವ ನಾಗರ ಪಂಚಮಿ ಹಬ್ಬದ ದಿನ ಹಾವಿಗೆ ಹಾಲು ಹಾಕುವ ಸಂಪ್ರದಾಯ ಅತ್ಯಂತ ಅವೈಜ್ಞಾನಿಕವಾದ ಆಚರಣೆ. ಇಂಥಹ ಮೌಢ್ಯದ ವಿರುದ್ಧ ಹೋರಾಟ ಮಾಡಿದವರು ಬಸವಣ್ಣನವರು. ಅವರ ನೆರಳಿನಂತೆ ಬಸವಣ್ಣನವರ ಎಲ್ಲಾ ಕಾರ್ಯಗಳಿಗೆ ಬೆಂಬಲವಾಗಿ ನಿಂತವರು ಹಡಪದ ಅಪ್ಪಣ್ಣನವರು ಮತ್ತು ಲಿಂಗಮ್ಮ ತಾಯಿಯವರು ಎಂದು ತಿಳಿಸಿದರು.

ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಗ್ರಾಮದ ಹಿರಿಯರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆದ ಶರಣ ಕೆ. ಜಿ. ಬಸವನಗೌಡರು, ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಹಾಗಾಗಿ ಎಲ್ಲರನ್ನೂ ನಾವು ಗೌರವದಿಂದ ಮಾತನಾಡಿಸಿದರೆ ಈ ಜಗತ್ತಿನಲ್ಲಿ ಯಾವ ಸಮಸ್ಯೆಗಳೂ ಇರುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮಪಂಚಾಯತ್ ಅಧ್ಯಕ್ಷರಾದ ಶರಣೆ ಆಶಾ ಸಿದ್ದೇಶ್ ಅವರು ಮಾತನಾಡಿ, ಬಸವಣ್ಣನವರು ನಮ್ಮೆಲ್ಲರಿಗೂ ಆದರ್ಶ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮದ ಮುಖಂಡರಾದ ಶರಣ ಕೆ. ಜಿ. ಮಹಾಂತೇಶ ಅವರು ಮಕ್ಕಳಿಗೆ ಸಚ್ಚಾರಿತ್ರ್ಯ ಮುಖ್ಯ ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಶರಣ ಹನುಮಂತಪ್ಪ ಅವರು ಮಕ್ಕಳಿಗೆ ವಚನಗಳನ್ನು ಹೇಳಿಕೊಟ್ಟು, ವಚನ ಪ್ರಾರ್ಥನೆ ಮಾಡಿದರು.

ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಗೋಪನಾಳ್ ರುದ್ರೇಗೌಡ, ಪದಾಧಿಕಾರಿಗಳಾದ ಟಿ.ಎಂ. ಶಿವಮೂರ್ತಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಅಲ್ಲಿನ ವಸತಿ ನಿಲಯದ ಮೇಲ್ವಿಚಾರಕರಾದ ಶರಣೆ ಕವಿತಾ ಪೋರಮ್ಮನವರ್ ಅವರು ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಷಯ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
ಕೊನೆಯಲ್ಲಿ ಎಲ್ಲರಿಗೂ ಶರಣು ಸಮರ್ಪಣೆ ಮಾಡಿ ಮಾತನಾಡಿದ ಶರಣ ಕಲಿವೀರ ಕಳ್ಳಿಮನಿ ಅವರು, ವಿಜ್ಞಾನ ಸತ್ಯ ಅಂತಹ ಸತ್ಯವನ್ನು ಅರಿತು ಮೂಢನಂಬಿಕೆಯನ್ನು ಬಿಡಬೇಕು ಎಂದು ತಿಳಿಸಿದರು.
ಶರಣ ಪ್ರಕಾಶ ಅವರು ಸ್ವಾಗತಿಸಿದರು. ಶರಣ ನಾಗರಾಜ ಕಕ್ಕರಗೊಳ್ಳ ಅವರು ನಿರೂಪಣೆ ಮಾಡಿದರು.