ಗುಳೇದಗುಡ್ಡದಲ್ಲಿ ಕಲ್ಲ ನಾಗರ ಕಂಡಡೆ… ವಚನ ನಿರ್ವಚನ

ಗುಳೇದಗುಡ್ಡ

ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ತಿಪ್ಪಾ ಪೇಟೆಯ ಶಿವವ್ವ ಈರಪ್ಪ ತಿಪ್ಪಾ ಅವರ ಮನೆಯಲ್ಲಿ ಜರುಗಿತು.

ಚಿಂತನೆಗಾಗಿ ಆಯ್ದುಕೊಂಡ ವಚನ –

ಕಲ್ಲ ನಾಗರ ಕಂಡಡೆ ಹಾಲುನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದಡೆ
ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ.

ಕುಮಾರಿ ವಚನ ಶೇಖಾ ಹಾಗೂ ಸಂಗಡಿಗರಿಂದ ಸಾಮೂಹಿಕ ವಚನ ಪ್ರಾರ್ಥನೆ ನಡೆಯಿತು. ಮೊದಲಿಗೆ ವಚನಕಾರರಾದ ಬಸವ ತಂದೆಗಳ ಬದುಕಿನ ಬಗ್ಗೆ ಪ್ರೊ. ಶ್ರೀಕಾಂತ ಗಡೇದ ಅವರು ಪರಿಚಯಿಸುತ್ತಾ ವಚನ ನಿರ್ವಚನಗೈದರು. ಅವರು ವಿಶ್ವಕ್ಕೆ ಸರ್ವಸಮಾನತೆಯನ್ನು ಸಾರಿ ಮನುಜರೆಲ್ಲರೂ ಒಂದೇ ಎಂದು ಹೇಳಿದವರು ಅಪ್ಪ ಬಸವತಂದೆಗಳು. ಪೂಜೆಯನ್ನು ಕಾಯಕದ ರೂಪದಲ್ಲಿ ಜಾರಿಗೆ ತಂದವರು ಬಸವತಂದೆಗಳು.

ಕಾಯಕದಿಂದ ನಾವಷ್ಟೇ ಬದುಕುವುದು ಅಷ್ಟೇ ಅಲ್ಲ ಸಮಾಜದೊಂದಿಗೆ ಬದುಕಬೇಕು. ಅದಕ್ಕಾಗಿ ಜಂಗಮ ದಾಸೋಹವನ್ನು ಕಡ್ಡಾಯಗೊಳಿಸಿದರು. ಸಮಾಜದ ಆರ್ಥಿಕ ಸಮತೋಲವನ್ನು ಕಾಪಾಡಲು ಜಂಗಮ ದಾಸೋಹ ಅತ್ಯಗತ್ಯ. ಅದನ್ನು ಕಟ್ಟುನಿಟ್ಟಾಗಿ ಸ್ವತಃ ಪಾಲಿಸಿದವರು ಬಸವ ತಂದೆಗಳು. ನಾವೆಲ್ಲ ಅನುಸರಿಸಲು ಮಾದರಿಯಾದವರು. ವಚನದ ಕುರಿತಾಗಿ ಮಾತನಾಡುತ್ತ, ಮೌಢ್ಯಗಳನ್ನು ನಂಬಿ ಕಾಯಕದ ಫಲವನ್ನು ವ್ಯರ್ಥವಾಗಿ ಹಾಳು ಮಾಡಿಕೊಳ್ಳುತ್ತೇವೆ. ಅಂತರಂಗದ ಅರಿವು ಬಹಿರಂಗದಲ್ಲಿ ಕಾಣದಿರುವುದನ್ನು ಈ ವಚನದ ಮೂಲಕ ಬಸವಣ್ಣನವರು ತೋರಿಸುತ್ತಾ, ನಿಜಾಚರಣೆ ಮಾಡಬೇಕೆಂದು, ಶರಣರ ಮಾತುಗಳನ್ನು ನಿರ್ಲಕ್ಷಿಸಿದರೆ ಸಂಕಟ ಎದುರಾಗುವುದು ಖಚಿತ ಎಂದು ನುಡಿದರು.

ಮಹಾಂತೇಶ ಸಿಂದಗಿಯವರು ಮಾತನಾಡುತ್ತ, ಅರಿವು ಆಚರಣೆಯಾಗದಿರುವುದಕ್ಕೆ ನಮ್ಮಗೆಲ್ಲ ಜೀವ ಭಯವೇ ಕಾರಣ. ಜೀವ ಕಾರುಣ್ಯವಾಗಿರುವ ಪಡಿಪದಾರ್ಥಗಳು ಹಾಳಾಗಲು ನಮ್ಮಲ್ಲಿಯ ಮೌಢ್ಯ, ಅಜ್ಞಾನ ಕಾರಣ. ಹಾವಿಗೆ ಹಲ್ಲಿನಲ್ಲಿ ಮಾತ್ರ ವಿಷವಿದೆ. ಆದರೆ ಅರಿಷಡ್ವರ್ಗಗಳ ತಾಣವಾಗಿರುವ ನಮ್ಮಲ್ಲಿ ಮೈ ತುಂಬಾ ವಿಷವಿದೆ. ಅದಕ್ಕಾಗಿ ನಮ್ಮ ಅವಗುಣವನ್ನು ಹೊಂದಿರುವ ನಮ್ಮ ಮನವನ್ನು ಹಾವಿಗೆ ಹೋಲಿಸಿದ್ದಾರೆ.

ಈ ನಾಗರ ಪಂಚಮಿಯ ಆಚರಣೆಯಲ್ಲಿ ಸ್ಥಾವರ/ನಿಜನಾಗರಕ್ಕೆ ಹಾಲನ್ನು ಎರೆಯುವ ಪದ್ಧತಿ ರೂಢಿಯಲ್ಲಿದೆ. ಆದರೆ ಈ ಆಚರಣೆಯ ಹಿನ್ನೆಲೆಯು ಹಾವಿನ ವಿಷದಂತಿರುವ ನಮ್ಮ ಮನಸ್ಸಿಗೆ ಒಳ್ಳೆಯ ಸಂಸ್ಕಾರಗಳನ್ನು ಕೊಡುವುದರ ಪ್ರತೀಕವಾಗಿ ಹಾಲು ಎರೆಯುವದು ರೂಢಿಯಲ್ಲಿರಬಹುದು. ನಮ್ಮಲ್ಲಿಯ ಅರಿಷಡ್ವರ್ಗಗಳನ್ನು ಕಳೆದುಕೊಳ್ಳುವುದು ಮನದಲ್ಲಿರುವ ವಿಷವನ್ನು ಕಳೆದುಕೊಂಡಂತೆ. ವಚನಗಳನ್ನು ಅನುಸರಿಸಿ ಮನಸ್ಸಿಗೆ ಸ್ವಾಂತನ ಹೇಳಿಕೊಳ್ಳಬೇಕು. ವಚನಗಳು ಮನೋಬಲವನ್ನು ಹೆಚ್ಚಿಸುತ್ತವೆ. ಅಮೃತದಂತಿರುವ ವಚನಗಳ ಅರಿವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅಮೃತ ಸಾಗರದ ದಂಡೆಯಲ್ಲಿ ಬೇರೆ (ಅನ್ಯ ಮಾರ್ಗವನ್ನು ಅನುಸರಿಸಿದರೆ) ಬಾವಿಯನ್ನು ತೋಡಿದರೆ ಉಪ್ಪ ನೀರನ್ನು ಉಂಡಂತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಕೊನೆಯದಾಗಿ ಮಾತನಾಡಿದ ಪ್ರೊ. ಸುರೇಶ ರಾಜನಾಳ ಅವರು ಈ ಕಾಲದಲ್ಲಿ ವಚನಗಳು ಪ್ರಸ್ತುತಕ್ಕೆ ಕಾರಣ ಅವುಗಳಲ್ಲಿಯ ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತಿರುವ ಅಧ್ಯಾತ್ಮಿಕ ಚಿಂತನೆಯ ವಿಚಾರಗಳು. ಇಂತಹ ಆಧುನಿಕ ತಾಂತ್ರಿಕ ಶಿಕ್ಷಣದ ಕಾಲದಲ್ಲಿಯೂ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಎ.ಐ.ಸಿ.ಟಿ.ಇ.ಯು ಬಸವಾದಿ ಶರಣರ ಅನುಭಾವದ ಮೌಲ್ಯಗಳಾಗಿರುವ ವಚನಗಳ ಕುರಿತು ಅರಿವು, ಸಂಶೋಧನೆ ಮಾಡಬೇಕೆಂದು ತನ್ನ ತಾಂತ್ರಿಕ ವಿದ್ಯಾರ್ಥಿಗಳಿಗೆ ಕರೆಕೊಡುವುದರ ಜೊತೆಗೆ ಅದನ್ನು ಅನುಸರಿಸಲು ಮಾರ್ಗಸೂಚಿಯನ್ನು ಕೊಟ್ಟಿದೆ. ಸ್ಥಾವರ ವಸ್ತುಗಳಿಗೆ ಯಾವುದೇ ದ್ರವ್ಯವನ್ನು ಹಾಕಿದರೆ ಅವು ಹೀರಿಕೊಳ್ಳುವುದಿಲ್ಲ. ಅದು ನಿಷ್ಪಲ. ಅದನ್ನು ಹಾಳಾಗದಂತೆ ನೋಡಿಕೊಳ್ಳಬೇಕು.

ಹಾಲು ಹಾವಿನ ಆಹಾರವು ಅಲ್ಲ. ನಾವೆಲ್ಲ ವಚನಗಳಲ್ಲಿಯ ಮಾನವೀಯ ಮೌಲ್ಯಗಳನ್ನು ಅನುಸರಿಸಲಾರದೆ ವಿಚಾರಹೀನ ಆಚರಣೆಗಳನ್ನು ಅನುಸರಿಸುತ್ತಾ ಇದ್ದೇವೆ. ದಾರ್ಶನಿಕರು ತೋರಿಸಿದ ಮೌಲ್ಯಯುತವಾದ ಮಾರ್ಗಗಳನ್ನು ಕಡೆಗಣಿಸುತ್ತಾ ಇದ್ದೇವೆ. ಈ ಪ್ರಕ್ರಿಯೆ ಸತ್ಯ ಮತ್ತು ಸುಳ್ಳಿನ ಕಥೆಯಂತಾಗಿದೆ. ಸುಳ್ಳು (ಅಜ್ಞಾನ)ನ್ನು ಸರಳವಾಗಿ ಯಾವುದನ್ನು ಪ್ರಶ್ನಿಸದೇ ನಂಬಿ ಬಿಡುತ್ತಿದ್ದೇವೆ. ಆದರೆ ಸತ್ಯವನ್ನು (ನಿಜಾಚರಣೆ) ನಂಬಲು ನೂರು ಸಾರಿ ವಿಚಾರ ಮಾಡುತ್ತೇವೆ. ಅನುಸರಿಸಲು ಭಯ ಪಡುತ್ತೇವೆ. ಶರಣರ ವಚನಗಳನ್ನು ನಂಬಿ ಅವುಗಳು ತೋರಿಸುವ ಮಾರ್ಗದಲ್ಲಿ ನಡೆಯುವ ಮನ ನಮ್ಮದಾಗಲಿ ಎಂದು ಹೇಳಿದರು.

ಕೊನೆಗೆ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಮಹಾಮನೆಯಲ್ಲಿ ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವಕೇಂದ್ರದ ಸದಸ್ಯರಾದ ಚಂದ್ರಶೇಖರ ತೆಗ್ಗಿ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಹುಚ್ಚಪ್ಪ ಯಂಡಿಗೇರಿ, ಮಹಾಲಿಂಗಪ್ಪ ಕರನಂದಿ, ರೇವಣಸಿದ್ಧೇಶ್ವರಮಠ, ಸುರೇಶ ರಾಜನಾಳ, ಕಂಬಾಳಿಮಠ ಸರ್, ದಾಕ್ಷಾಯಣಿ ತೆಗ್ಗಿ, ಶ್ರೀದೇವಿ ಶೇಖಾ, ಸುರೇಖಾ ಗೆದ್ದಲಮರಿ ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *