ಮೈಸೂರು
ಮೈಸೂರು ಕದಳಿ ಮಹಿಳಾ ವೇದಿಕೆಯ 25ರ ರಜತ ಮಹೋತ್ಸವ ಸಮಾರಂಭದ ಅಂಗವಾಗಿ ‘ಕದಳಿ ಶ್ರೀ’ ಪ್ರಶಸ್ತಿ ಪ್ರಧಾನ, ‘ಸಾಮೂಹಿಕ ವಚನ ಗಾಯನ’ ಕಾರ್ಯಕ್ರಮಗಳು ಈಚೆಗೆ ಕರ್ನಾಟಕ ಕಲಾ ಮಂದಿರದಲ್ಲಿ ಅದ್ದೂರಿಯಾಗಿ ನಡೆದವು.
ಕಲ್ಬುರ್ಗಿಯ ಪದ್ಮಶ್ರೀ ಪುರಸ್ಕೃತರು, ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರಿಗೆ “ಕದಳಿ ಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು.


ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದೆ ಶೈಲಾ ಸಿದ್ಧರಾಮಪ್ಪ ಅವರ ನೇತೃತ್ವದಲ್ಲಿ ‘ಸಾಮೂಹಿಕ ವಚನ ಗಾಯನ’ ಕಾರ್ಯಕ್ರಮ ನಡೆಯಿತು.
ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೈಸೂರು, ಪೂಜ್ಯ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಗದಗ, ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಶಿವಮೊಗ್ಗ, ನಾಡೋಜ ಗೊ.ರು. ಚನ್ನಬಸಪ್ಪ, ಡಾ. ಸಿ. ಸೋಮಶೇಖರ, ವಿಜಯಲಕ್ಷ್ಮಿ ದೇಶಮಾನೆ, ಡಾ. ಹೆಳವರಹುಂಡಿ ಸಿದ್ದಪ್ಪ, ಶಾರದಾ ಶಿವಲಿಂಗಸ್ವಾಮಿ, ಡಾ. ಎಂ. ಮೋಹನ ಆಳ್ವಾ, ಜಯಾಗೌಡ, ಸುಧಾ ಮೃತ್ಯುಂಜಯಪ್ಪ, ರಾಜೇಶ್ವರಿ ಮಲ್ಲಿಕಾರ್ಜುನಪ್ಪ, ವಾಗ್ದೇವಿ, ಶೈಲಾ ಸಿದ್ದರಾಮಪ್ಪ, ಸುಮಾ ಪ್ರಕಾಶ, ಉಮಾ ಮಹಾದೇವಸ್ವಾಮಿ, ನೀಲಾಂಬಿಕ ಎಂ.ಎ, ಶಶಿಕಲಾ ಸುಬ್ಬಣ್ಣ ಮತ್ತು 21 ವೇದಿಕೆ ಬಳಗಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ಮೈಸೂರಿನ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಬಸವ ಮೀಡಿಯಾದೊಂದಿಗೆ ಮಾತನಾಡಿದರು.
1) ಸಾಮೂಹಿಕ ವಚನ ಗಾಯನ ನಡೆದದ್ದು ಇದೇ ಮೊದಲ?

ಹಿಂದೆ ಜೆಪಿ ನಗರದ ರಸ್ತೆಗಳಲ್ಲಿ 150ಕ್ಕಿಂತ ಹೆಚ್ಚು ಮಹಿಳೆಯರು ರಸ್ತೆಗಳಲ್ಲಿ ವಚನಗಳನ್ನು ಹಾಡ್ತಾ ಹೋಗಿದ್ದೆವು. ಅದಕ್ಕೆ ‘ಕದಳಿ ಯಾತ್ರೆ’ ಎಂದು ಹೆಸರು ಕೊಟ್ಟಿದ್ದೆವು.
ಅದರ ಮುಂದುವರಿದ ಭಾಗವಾಗಿ ಈ ಸಾರಿ ಈ ಬೆಳ್ಳಿ ಹಬ್ಬದ ಪ್ರಯುಕ್ತ ಕಲಾಮಂದಿರದ ಮುಂಭಾಗದಲ್ಲಿ ಸಾಮೂಹಿಕ ವಚನ ಗಾಯನ ನಡೆಸಿದೆವು.
2) ಗಾಯಕರು ಎಲ್ಲ ಮೈಸೂರಿನವರ?
ಮೈಸೂರಿನ ಕದಳಿ ಮಹಿಳಾ ವೇದಿಕೆ ಜೊತೆಯಲ್ಲಿ 21 ಬಳಗಗಳು ಇವೆ. ಅವೆಲ್ಲ ಒಟ್ಟುಗೂಡಿ ಕದಳಿ ವೇದಿಕೆ ಆಗಿದೆ. ಮಹಿಳಾ ಬಳಗಗಳ ಸಂಘಟನೆಯೇ ಕದಳಿ ವೇದಿಕೆ. ಈ ರೀತಿ ಮೈಸೂರಲ್ಲಿ ಬಿಟ್ರೆ ರಾಜ್ಯದಲ್ಲಿ ಎಲ್ಲೂ ಇಲ್ಲ. ಈ 21 ಬಳಗಗಳು ಸೇರಿ ಒಟ್ಟಿಗೆ ಮಾಡಿದಂತ ಕಾರ್ಯಕ್ರಮ ಈ ವಚನ ಗಾಯನ.
3) ಹೇಗೆ ತಯಾರಿ ನಡೆಯಿತು?
ನಮ್ಮೊಳಗೆ ಆಕಾಶವಾಣಿ ಕಲಾವಿದೆ ಶೈಲಾ ಸಿದ್ದರಾಮಪ್ಪ ಎನ್ನುವವರು ಇದ್ದಾರೆ. ಕದಳಿ ಯಾತ್ರೆ ನಡೆಸಿದಾಗಲೂ ಅವರೇ ವಚನ ಹೇಳಿಕೊಟ್ಟಿದ್ದರು. ಆವಾಗ್ಗೆ ಒಂದು ತಿಂಗಳು ಪ್ರಾಕ್ಟೀಸ್ ನಡೆಸಿದ್ದರು.
ಈ ಸಲ 15 ದಿನಗಳ ಕಾಲ ಜೆಎಸ್ಎಸ್ ಕಾಲೇಜ್ ಕುವೆಂಪು ನಗರ ಮತ್ತು ಬಸವ ಭವನ ಸಿದ್ಧಾರ್ಥ ಲೇಔಟಲ್ಲಿ 15 – 20 ದಿನಗಳ ಕಾಲ ತರಬೇತಿ ನೀಡಿದರು.
4) ಯಾವ ಯಾವ ವಚನ ಹಾಡಿದಿರಿ?
1 ಗುರು ಬ್ರಹ್ಮ ಗುರು ವಿಷ್ಣು
2 ತುಂಬಿದುದು ತುಳುಕದು ನೋಡ
3 ಸ್ವಾಮಿ ನೀನು ಶಾಶ್ವತ ನೀನು
4 ಕದಳಿ ಎಂಬುದು ತನು ಕದಳಿ ಎಂಬುದು ಮನ
5 ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ್ದ
6 ಎಲ್ಲಾ ಎಲ್ಲವ ಅರಿತು ಫಲವೇನಯ್ಯ
7 ಎತ್ತೆತ್ತ ನೋಡಿದತ್ತ ನೀನೇ ದೇವಾ
8 ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು
9 ನೆಚ್ಚುಗೆ ಮನ ನಿಮ್ಮಲ್ಲಿ ಮೆಚ್ಚುಗೆ ಮನ ನಿಮ್ಮಲ್ಲಿ
10 ಬೆಟ್ಟದ ಮೇಲೊಂದು ಮನೆಯ ಮಾಡಿ
5) ಬೆಳ್ಳಿ ಹಬ್ಬವನ್ನು ಹೇಗೆ ಆಚರಿಸಿದಿರಿ
ಬೆಳ್ಳಿ ಹಬ್ಬದವನ್ನು ವರ್ಷಪೂರ್ತಿ ಆಚರಿಸಿದ್ವಿ. 24 ವರ್ಷ ತುಂಬಿ 25ಕ್ಕೆ ಕಾಲಿಟ್ಟಾದ ಮೇಲೆ ಒಂದು ಕಾರ್ಯಕ್ರಮ ಮಾಡಿದೆವು. ಈಗ 25 ತುಂಬಿದ ಮೇಲೆ ದೊಡ್ಡದಾದ ಬೆಳ್ಳಿ ಹಬ್ಬದ ಸಮಾರಂಭವನ್ನು ನಡೆಸಿದೆವು.
ನಿರಂತರ 25 ಮನೆಗಳಲ್ಲಿ 25 ಉಪನ್ಯಾಸಕರನ್ನು ಕರೆಸಿ 25 ಶರಣರ ಕುರಿತು ಉಪನ್ಯಾಸ ಮಾಡಿಸಿದ್ದೀವ್ರಿ. ನಾವು ಬೆಳ್ಳಿ ಹಬ್ಬಕ್ಕೆ ಕಾಲಿಟ್ಟಾಗ ಅದರಂಗವಾಗಿ ನಾವು ಹಮ್ಮಿಕೊಂಡ ಮೊದಲನೆಯದು ಈ ಉಪನ್ಯಾಸ ಕಾರ್ಯಕ್ರಮ.
ಆನಂತರದಲ್ಲಿ ಶಾಲಾ-ಕಾಲೇಜು, ವಿವಿ, ಕಾನೂನು ವಿದ್ಯಾಲಯ, ಕಾರಾಗೃಹಗಳಲ್ಲೂ ‘ವಚನಗಳ ಚಿತ್ತ ಕಾರಾಗೃಹದತ್ತ’ ಎಂದು, ‘ಮನೋರಂಜನೆಯಿಂದ ಮನ ಪರಿವರ್ತನೆ’ ಎಂಬ ಹೆಡ್ಡಿಂಗ್ ಹಾಕ್ಕೊಡು, ಮೈಸೂರು ಕಾರಾಗೃಹದಲ್ಲೂ ಒಂದು ಕಾರ್ಯಕ್ರಮ ಮಾಡಿದೆವು.

ಹೊರ ರಾಜ್ಯದಲ್ಲೂ ಕಾರ್ಯಕ್ರಮ. ಮಠಗಳ ಸಂದರ್ಶನ ಮಾಡಿದ್ದೇವೆ. ಶಾಲಾ ಕಾಲೇಜು ಮಕ್ಕಳನ್ನು ಹೆಚ್ಚು ಕೇಂದ್ರವಾಗಿಟ್ಟುಕೊಂಡು ಅವರಿಗೆ ವಚನ ಸಾಹಿತ್ಯದ ಬಗ್ಗೆನೇ ವ್ಯಾಖ್ಯಾನ, ಕಂಠಪಾಠ, ಭಾಷಣ, ರಸಪ್ರಶ್ನೆ ಹಮ್ಮಿಕೊಂಡಿದ್ದೆವು. ಎರಡು ಕೃತಿಗಳನ್ನು ಬಿಡುಗಡೆ ಮಾಡಿದ್ದೇವೆ. ಅಕ್ಕ ಮಹಾದೇವಿ ಕುರಿತಾದ ಚಿತ್ರ ಬರೆಸಿ ಒಂದು ಪುಸ್ತಕ ಬಿಡುಗಡೆ ಮಾಡಿದೆವು. ದಾಖಲೆಗಾಗಿ ಒಂದು ‘ಬೆಳದಿಂಗಳು’ ಎಂಬ ಸ್ಮರಣ ಸಂಚಿಕೆ ತಂದಿದ್ದೇವೆ.


ಬಸವಾದಿ ಶರಣರು ಬಿಟ್ಟು ಹೋದ ಸಾಹಿತ್ಯವನ್ನು ಕಾಪಾಡಿ ಅದರ ಪ್ರಸಾರ, ಪ್ರಚಾರ ಮಾಡಬೇಕು, ಅದನ್ನು ಆಚರಣೆಗೆ ತರಬೇಕು. ಅದರಲ್ಲೂ ಮಕ್ಕಳನ್ನು ಆ ರೀತಿ ತಯಾರು ಮಾಡಬೇಕು. ಶರಣ ಸಾಹಿತ್ಯ ಪರಿಷತ್ತಿನ ಈ ಕಾರ್ಯವನ್ನು ಮುಂದುವರಿಸಬೇಕು.
ಅದ್ಭುತವಾಗಿ ಮಹಿಳೆಯರ ಸಂಘಟನೆ ಮಾಡಿದ್ದಾರೆ. ಅಭಿನಂದನೆಗಳು. ಶರಣು ಶರಣಾರ್ಥಿಗಳು