ಬೆಂಗಳೂರು
ಕರ್ನಾಟಕದಲ್ಲಿನ ಅನೇಕ ಗುರಮಠ-ಪೀಠಾಧೀಶರು ಗುರು-ಭಕ್ತ ಎಂಬ ಭೇಧವನ್ನು ಯಾವ ಮುಲಾಜಿಲ್ಲದೆ ಮಾಡುತ್ತಾರೆ. “ಗುರು-ಭಕ್ತ” ಭೇಧವೆಣಿಸುವ ಇವರು ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಯನ್ನು ವಿರೋಧಿಸುತ್ತಾರೆ.
ಲಿಂಗಾಯತ ಧರ್ಮದ ಸ್ವತಂತ್ರ ಅಲ್ಪಸಂಖ್ಯಾತ ಸ್ಥಾನಮಾನದ ಚಳುವಳಿಯ ಬಗ್ಗೆ ಕೆಂಡಮಂಡಲರಾಗುತ್ತಾರೆ. ಈ ಬೇಡಿಕೆಯನ್ನು ಧರ್ಮವನ್ನು ಒಡೆಯುವ ಹುನ್ನಾರ ಎನ್ನುತ್ತಾರೆ.
ಇವರದು ವಿಭಜನಾತ್ಮಕ ಹುನ್ನಾರ. ತಮ್ಮ ವಿಭಜನಾತ್ಮಕ ಪ್ರಣಾಳಿಕೆಯನ್ನು ಮುಚ್ಚಿಟ್ಟುಕೊಂಡು ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಯನ್ನು ಧರ್ಮ ಒಡೆಯುವ ಹುನ್ನಾರ ಎನ್ನುತ್ತಾರೆ.
ಸದ್ಯ ಬಸವ ಕಲ್ಯಾಣದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಶ್ರೀ ರಂಭಾಪುರಿ ಸ್ವಾಮಿಗಳು ಸಿದ್ಧರಾಗಿದ್ದಾರೆ. ಆದರೆ ಅದಕ್ಕೆ ಬಂದ ವಿರೋಧವನ್ನು ಗಮನಿಸಿ ಅವರು ತಮ್ಮ ನಡೆಯನ್ನು ಬದಲಾಯಿಸಿ “ವಾಹನದ ಮೇಲೆ ಪಲ್ಲಕ್ಕಿ” ಉತ್ಸವಕ್ಕೆ ಸಮ್ಮತಿ ನೀಡಿದ್ದಾರೆ. ನೆಲ್ಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ನಾಣ್ಣುಡಿಗೆ ಇದು ನಿದರ್ಶವಾಗಬಲ್ಲದು. ಗುರು-ಭಕ್ತ ಎಂಬ ಭೇದ ಪ್ರಣಾಳಿಕೆಯೇ ಬಸವ ಪ್ರಣೀತ ಲಿಂಗಾಯತ ಧರ್ಮಕ್ಕೂ ಮತ್ತು ಹಿಂದುತ್ವ ಪ್ರಣೀತ ವೀರಶೈವಕ್ಕೂ ಇರುವ ಭಿನ್ನತೆಯಾಗಿದೆ. ಇಲ್ಲಿ ನಡೆ-ನುಡಿ ಭಿನ್ನವಾಗಿದೆ ಮತ್ತು ಮೆರೆದಾಟವೇ ಮುಂಚೂಣಿಯಲ್ಲಿದೆ.
ಇಂತಹ ಗುರುಗಳನ್ನು ಗಮನಿಸಯೇ ಅಂಬಿಗರ ಚೌಡಯ್ಯನವರು ೯೦೦ ವರ್ಷಗಳ ಹಿಂದೆಯೇ ಹೀಗೆ ನುಡಿದಿದ್ದಾರೆ.
ಈಶ ಲಾಂಛನವ ತೊಟ್ಟು ಮನ್ಮಥವೇಶ ಲಾಂಛನವ ತೊಡಲೇತಕ್ಕೆ?
ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ?
ಅಂದಳ, ಛತ್ರ, ಆಭರಣ, ಕರಿತುರಗಂಗಳ ಗೊಂದಣವೇತಕ್ಕೆ?
ಅದು ಘನ ಲಿಂಗದ ಮೆಚ್ಚಲ್ಲ, ಎಂದನಂಬಿಗ ಚೌಡಯ್ಯ.
ಚೌಡಯ್ಯನವರು ಅತ್ಯಂತ ಮಾರ್ಮಿಕವಾಗಿ ದರ್ಶನ ಸ್ವರೂಪದ ವಚನವನ್ನು ೧೨ ನೆಯ ಶತಮಾನದಲ್ಲಿ ನುಡಿದಿದ್ದಾರೆ. ಈ ಅಂದಣ(ಪಲ್ಲಕ್ಕಿ) ಸೇವೆಯನ್ನು ಪಡೆಯುವವರ ನಡೆ-ನುಡಿಗಳ ನಡುವೆ ಅಂತರವನ್ನು ಚೌಡಯ್ಯನವರು ಗುರುತಿಸಿದ್ದಾರೆ. ಇಂತಹ ವಚನಗಳಿಂದ ಇಂದಿನ ಗುರುಪೀಠಾಧೀಶರು ಪಾಠ ಕಲಿತಂತೆ ಕಾಣುವುದಿಲ್ಲ.
ಈ ಅಡ್ಡಪಲ್ಲಕ್ಕಿ ಸೇವೆಯನ್ನು ಪಡೆಯುವ ಗುರುಗಳ ಕಿರೀಟವೇನು, ಆಭರಣಗಳೇನು, ಆನೆ-ಕುದುರೆಗಳ ಮೇರೆದಾಟವೇನು! ಅಡ್ಡ ಪಲ್ಲಕ್ಕಿ ಸೇವೆಯನ್ನು “ಘನಲಿಂಗ” ಮೆಚ್ಚುವುದಿಲ್ಲ ಎಂಬುದನ್ನು ಚೌಡಯ್ಯನವರು ವಚನದಲ್ಲಿ ಹೇಳುತ್ತಿದ್ದಾರೆ. ಜನರು ಹೊರುವ ಅಡ್ಡಪಲಕ್ಕಿಯಾಗಲಿ, ವಾಹನದ ಮೇಲೆ ಪಲ್ಲಿಕ್ಕಿಯ ಮೆರವಣಿಗೆಯಾಗಲಿ ಅದು ಇಂದು ಅಸಂಗತ.
ಈಗಲಾದರೂ ಗುರುಪೀಠವು ಲಿಂಗಾಯತದ ಬಗ್ಗೆ, ಬಸವಣ್ಣನ ಬಗ್ಗೆ ನಕಾರಾತ್ಮಕ ಮನೋಭಾವನ್ನು ಬಿಟ್ಟು ಲಿಂಗಾಯತವನ್ನು ಒಪ್ಪಿಕೊಳ್ಳುವುದು ವಿವೇಕ.
ಪಂಚಪೀಠಾಧೀಶರು ಪ್ರತಿಪಾದಿಸುವುದು ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಅವರ ಘೋಷ ವಾಕ್ಯವಾಗಿದೆ ಆದರೆ ಅವರು ಪ್ರತಿಪಾದಿಸುವುದು ವೀರಶೈವ ಧರ್ಮ ಇಲ್ಲಿ ನಮಗೆ ಸಂಶಯ ಬರುವುದು ಮಾನವ ಧರ್ಮ ಯಾವುದು ಮತ್ತು ವೀರಶೈವ ಧರ್ಮ ಯಾವುದು ಒಂದು ವೇಳೆ ವೀರಶೈವ ಧರ್ಮದ ತತ್ವ ಮಾನವ ಧರ್ಮಕ್ಕೇನೇ ಜಯವಾಗಲಿ ಎಂಬುದಾಗಿದ್ದರೆ ಮಾನವನ ಮೇಲೆ ಅಡ್ಡ ಪಲ್ಲಕ್ಕಿ ಸವಾರಿಯನ್ನು ಇವರು ಮಾಡುವುದು ಎಷ್ಟು ಸೂಕ್ತ ಇದನ್ನು ಭಕ್ತಾದಿಗಳು ಪ್ರಶ್ನೆ ತಾವು ಮಾಡಿಕೊಂಡು ಇದರಿಂದ ದೂರ ಸರಿಯಬೇಕು