ಗಾಂಧಿ ಕೊಂದವರು ಕಲಬುರ್ಗಿಯನ್ನು ಶಿಲುಬೆಗೇರಿಸಿದರು: ಅಶೋಕ ಬರಗುಂಡಿ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ ತನಿಖೆಯ ವೈಫಲ್ಯ ಪ್ರಶ್ನಿಸುವ ಹಕ್ಕು ಲಿಂಗಾಯತರಿಗಿದೆ

ಬೆಂಗಳೂರು

“12ನೇ ಶತಮಾನದಲ್ಲಿ ಶರಣರ ನರಮೇಧ ಮಾಡಿದವರು, ನಂಜನಗೂಡಿನಲ್ಲಿ ಜಂಗಮರ ಕೊಂದವರು, ಮಹಾತ್ಮ ಗಾಂಧಿಯನ್ನು ಹತ್ಯೆಮಾಡಿದವರು ಕಲಬುರ್ಗಿಯನ್ನು ಶಿಲುಬೆಗೇರಿಸಿದರು,” ಎಂದು ಹಿರಿಯ ಶರಣ ಚಿಂತಕ ಅಶೋಕ ಬರಗುಂಡಿ ಹೇಳಿದರು.

ಸತ್ಯಶೋಧಕ ಸಂಶೋಧಕ ಎಂ. ಎಂ. ಕಲಬುರ್ಗಿಯವರ ಹತ್ಯೆಯ ಹತ್ತನೇ ವರ್ಷದ ಸಂದರ್ಭದಲ್ಲಿ ಭಾನುವಾರ ನಗರದಲ್ಲಿ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹತ್ತು ವರ್ಷ ಸಂದರೂ ಕಲಬುರ್ಗಿ ಹಂತಕರಿಗೆ ಶಿಕ್ಷೆಯಾಗುತ್ತಿಲ್ಲ, ಅದನ್ನು ಪ್ರಶ್ನಿಸುವ ಹಕ್ಕು ಕಲಬುರ್ಗಿ ಶಿಷ್ಯರಿಗಿದೆ, ಲಿಂಗಾಯತ ಸಮಾಜಕ್ಕಿದೆ, ಎಂದು ಆಕ್ರೋಶ ವ್ಯಕ್ತಪಡಿಸಿ ಬರಗುಂಡಿ ಖ್ಯಾತ ಸಂಶೋಧಕರ ಹತ್ಯೆಯ ಹಿಂದಿನ ಕಾರಣಗಳನ್ನು ವಿಶ್ಲೇಷಿಸಿದರು.

ಸಂಶೋಧನೆಗೆ ಸೀಮಿತವಾಗದೆ, ಶರಣರ ಸತ್ಯವನ್ನು ಜನಮಾನಸಕ್ಕೆ ತಲುಪಿಸಲು ಹೊರಟ್ಟಿದ್ದು ಕಲಬುರ್ಗಿ ಅವರಿಗೆ ಮುಳುವಾಯಿತು. ವಚನ ನಿರ್ವಚನ ಮಾಡಲು ಕಲಿಸಿದರು, ನಮ್ಮ ಮನೆಗಳಲ್ಲಿ ಮಹಾಮನೆ ಕಾರ್ಯಕ್ರಮಕ್ಕೆ ಬಂದರು. ಶರಣರದು ಇಡೀ ಜೀವಜಗತ್ತಿನ ವಿಶ್ವ ಧರ್ಮ, ಮಹಾಲಿಂಗದ ಅಂಶಗಳಾದ ನಾವು ಒಂದೇ ಮನೆಯ ಒಡವೆಗಳು ಎಂದು ಕಲಬುರ್ಗಿ ತಿಳಿಸಿದರು.

ಯಾವಾಗ ಜನಮಾನಸದ ಮನಸ್ಸಿನಲ್ಲಿ, ಪ್ರತಿಯೊಬ್ಬರ ಮನೆಗಳಲ್ಲಿ ವಚನ ಚಿಂತನೆ ಶುರುವಾಯ್ತೋ, ಯಾವಾಗ ವಚನ ಚಿಂತನೆ ವಿವಿಧ ರೀತಿಗಳಲ್ಲಿ ವಿದ್ವಾಂಸರ ಮೂಲಕ, ಜನಜನರ ಮೂಲಕ ಹರಡಲು ಶುರುವಾಯ್ತೋ ಆಗ ಸನಾತನ ಬೆಚ್ಚಿ ಅವರನ್ನು ಹತ್ಯೆ ಮಾಡಿತು.

ಇಂದು ಕಲ್ಬುರ್ಗಿ ವ್ಯಕ್ತಿಯಾಗಿ ಉಳಿದಿಲ್ಲ, ಬಸವ ಶಕ್ತಿಯಾಗಿ ಬೆಳೆದಿದ್ದಾರೆ. ಖಡ್ಗದ ಕಸಿ ಮತ್ತು ಲೇಖನಿಯ ಮಸಿಯ ಮೂಲಕ ಬಸವ ತತ್ವವನ್ನು ಅಪಮೌಲ್ಯ, ಅಪವಿತ್ರಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅಂದರೆ ಮತ್ತೆ ಮತ್ತೆ ಕಲ್ಬುರ್ಗಿಯವರ ಕೊಲೆಯಾಗುತ್ತಿದೆ, ಎಂದು ಬರಗುಂಡಿ ಹೇಳಿದರು.

ನಮ್ಮಲ್ಲಿ ನಾವು ಈಗ ಕಲಬುರ್ಗಿಯವರನ್ನು ಮತ್ತೆ ಮತ್ತೆ ಹುಟ್ಟಿಸಿಕೊಳ್ಳಬೇಕು. ಅವರು ಕಲಿಸಿದ ತತ್ವಗಳನ್ನು ರೂಡಿಸಿಕೊಳ್ಳಬೇಕು, ನಮ್ಮ ನೋಟ ತಿದ್ದಿಕೊಳ್ಳಬೇಕು, ಪರಸ್ಪರ ದ್ವೇಷ, ಅಸೂಯೆ ಬಿಟ್ಟು ಸಂಘಟನೆಯಲ್ಲಿ ಮುನ್ನುಗ್ಗಬೇಕು. ಬಸವ ಮೀಡಿಯಾ ಕಲಬುರ್ಗಿಯ ಚಿಂತನೆಯ ಮಾರ್ಗದಲ್ಲಿ, ಲಿಂಗಾಯತದ ಅಸ್ಮಿತೆಯನ್ನು ಕಂಡುಕೊಳ್ಳುವ ದಾರಿಯಲ್ಲಿ ಮುಂದುವರೆಯಬೇಕು ಎಂದು ಹೇಳಿದರು.

ಕಲಬುರ್ಗಿ ಈ ಕೆಲಸವನ್ನು (ಬಸವ ತತ್ವದ ಪ್ರಚಾರ) ಬಸವ ಸಮಿತಿ, ಸುತ್ತೂರು, ಸಿದ್ದಗಂಗಾ ಮಠಗಳಂತಹ ಸಂಸ್ಥೆಗಳು ಮಾಡಬೇಕೆಂದು ನೇರವಾಗಿ ಹೇಳುತ್ತಿದ್ದರು. ಆದರೆ ಅವರೇ ಆ ಕೆಲಸಕ್ಕೆ ಕೈ ಹಾಕಿ ಹುತಾತ್ಮರಾಗುವ ಅನಿವಾರ್ಯತೆ ಬಂದಿತು. ಈ ಹಿನ್ನಲೆಯನ್ನು ಖಾಯಂ ಆಗಿ ಮನಸ್ಸಿನಲ್ಲಿಟ್ಟುಕೊಂಡು ಕಲಬುರ್ಗಿಯವರನ್ನು ಉಳಿಸಿಕೊಳ್ಳೋಣ, ಎಂದು ಬರಗುಂಡಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ವಾಂಸ ಕೆ ರವೀಂದ್ರನಾಥ್ ಕಲಬುರ್ಗಿಯವರ ಬದುಕು ಮತ್ತು ಬರಹ ಪರಿಚಯ ಮಾಡಿಕೊಟ್ಟರು. ಬರಗುಂಡಿ ಅಧ್ಯಕ್ಷತೆ ವಹಿಸಿದ್ದರು.

ಅಶೋಕ ಬರಗುಂಡಿ ಬಸವ ಮೀಡಿಯಾದ ಸಲಹಾ ಮಂಡಳಿಯ ಸದಸ್ಯರಾಗಿ ಮಾಧ್ಯಮದ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಬಸವ ಸಂಜೆಯಲ್ಲಿ ಅಶೋಕ ಬರಗುಂಡಿ ಪೂರ್ಣ ಭಾಷಣ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
3 Comments
  • ಎಲ್ಲರೂ ಒಪ್ಪುವಂತ ಮಾತು. ಲಿಂಗಾಯತ ಮಠಗಳು, ಸಂಘಟನೆಗಳು ತಮ್ಮ ಕೆಲಸ ಮಾಡಿದ್ದರೆ ಕಲಬುರ್ಗಿಯವರಿಗೆ ಹುತಾತ್ಮರಾಗುವ ಅನಿವಾರ್ಯತೆ ಬರುತ್ತಿರಲಿಲ್ಲ. ಮುಖ್ಯವಾಗಿ ವೀರಶೈವ ಮಹಾಸಭಾ ಮತ್ತು ಅನೇಕ ಮಠಗಳು ಕೆಲವು ಕುಟುಂಬಗಳ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡುತ್ತದೆ ವಿನಃ ಒಂದು ದಿನವಾದರೂ ಬಸವಣ್ಣನ ಅಥವಾ ಜನರ ವಿಷಯ ಕೇಳಿದೆಯಾ. ಇವರಿಗೆ ಧಿಕ್ಕಾರವಿರಲಿ. ಇವರಿಗೆ ಸಮಾಜವನ್ನು ಪ್ರತಿನಿಧಿಸುವ ಹಕ್ಕಿಲ್ಲ.

  • ಹುತಾತ್ಮ ಕಲಬುರ್ಗಿಯವರ ಮೇಲೆ ಬಂದಿರುವ ಬಹಳ ಒಳ್ಳೆ ಚಿಂತನೆ. ಅಶೋಕ ಬರಗುಂಡಿಯವರಿಗೆ ಶರಣು.

  • ಕಲಬುರ್ಗಿ ಯವರುಮಹಾನಶರಣ ಚಿಂತಕರು ಮತ್ತು ಸಾಮಾಜಿಕ ಕಳಕಳಿ ಯ ಮಹಾನ್ ಚೇತನಕ್ಕೆ ನಮ್ಮ ನಮನ ಗಳು.

Leave a Reply

Your email address will not be published. Required fields are marked *