ಸಿಂಧನೂರು
ಪ್ರತಿವರ್ಷ ದಸರಾ ಹಬ್ಬದಲ್ಲಿ ಬೇರೆ ಬೇರೆ ಊರುಗಳಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಶರನ್ನವರಾತ್ರಿ ಉತ್ಸವ ನಡೆಯುತ್ತಿರುವದು ಕರ್ನಾಟಕದ ಜನತೆಗೆ ಹೊಸತಲ್ಲ. ಈ ಉತ್ಸವದಲ್ಲಿ ಐದು ಪೀಠದ ಆಚಾರ್ಯರು ಭಾಗವಹಿಸುವದಿಲ್ಲ. ಇದು ಕೇವಲ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಪೀಠದಿಂದ ನಡೆಯುವ ಕಾರ್ಯಕ್ರಮ.
ಈ ಉತ್ಸವದಲ್ಲಿ ನಡೆಯುವ ಅಡ್ಡಪಲ್ಲಕಿಯನ್ನು ಜನರೇ ಹೊತ್ತು ಹೊಯ್ಯುತ್ತಿರುವದು ಒಂದು ವಿವಾದಾತ್ಮಕ ವಿಷಯವಾಗಿ ಪ್ರತಿಸಲವು ಪ್ರಾಜ್ಞರಿಂದ ಚರ್ಚೆಗೆ ಒಳಗಾಗುತ್ತದೆ. ಇದರ ಹಿನ್ನೆಲೆ ಬಗ್ಗೆ ಸಂಶೋಧಕ ಎಂ. ಚಿದಾನಂದಮೂರ್ತಿ ಅವರು ಒಂದು ಸುಧೀರ್ಘ ಲೇಖನ ಬರೆದಿರುತ್ತಾರೆ. ಆ ಲೇಖನದಲ್ಲಿ ಅವರು ಅಡ್ಡಪಲ್ಲಕ್ಕಿ ಅಮಾನವೀಯ ಅಲ್ಲ ಎಂದು ಪ್ರತಿಪಾದಿಸಿರುವದು ಕಂಡುಬರುತ್ತದೆ. ಆದರೂ ಚಿದಾನಂದ ಮೂರ್ತಿಯವರು ಪೂಜ್ಯ ರಂಭಾಪುರಿ ಶ್ರೀಗಳಿಗೆ ಒಂದು ಮನವಿ ಮಾಡಿಕೊಂಡು ಬಹುಜನರ ಚರ್ಚೆಗೆ ಒಳಗಾಗಿರುವ ಮನುಷ್ಯರು ಹೊರುವ ಅಡ್ಡಪಲ್ಲಕ್ಕಿಯ ಕಾರ್ಯಕ್ರಮವನ್ನು ಕೈ ಬಿಡುವಂತೆ ಬಹಳ ವರ್ಷಗಳ ಹಿಂದೆಯೇ ಒತ್ತಾಯಿಸಿದ್ದರೂ ರಂಭಾಪುರಿ ಶ್ರೀಗಳು ಅದು ನಮ್ಮ ಪರಂಪರೆ ಎಂದು ಮುಂದುವರೆಸಿಕೊಂಡೆ ಬಂದಿರುತ್ತಾರೆ.
ಈ ವರ್ಷದ ದಸರಾ ದರ್ಬಾರ್ ಶರನ್ನವರಾತ್ರಿ ಉತ್ಸವ ಬಸವರ ನಾಡು ಬಸವಕಲ್ಯಾಣದಲ್ಲಿ ಹಮ್ಮಿಕೊಂಡದ್ದು, ಬಸವಭಕ್ತರ ಅಸಮಾಧಾನಕ್ಕೆ ಗುರಿಯಾಗಿದೆ. ಸಕಲ ಜೀವಾವಳಿಗೆ ಲೇಸ ಬಯಸಿದ ಶರಣರು ಮೆಟ್ಟಿದ ನಾಡು, ಕಲ್ಯಾಣ ಕ್ರಾಂತಿಯಲ್ಲಿ ಶರಣರ ರಕ್ತ ಆ ಭೂಮಿಯಲ್ಲಿ ಬಿದ್ದಿದೆ, ಅಂತಹ ಪವಿತ್ರ ಮಣ್ಣಿನ ಮೇಲೆ ಅಮಾನವೀಯ ಅಡ್ಡಪಲ್ಲಕ್ಕಿಯನ್ನು ಮಾಡಲು ಬಿಡುವದಿಲ್ಲ ಎಂದು ನಾಡಿನ ಬಸವಭಕ್ತರು ಸೆಟೆದು ನಿಂತಾಗ, ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಪೂಜ್ಯ ಬಸವಲಿಂಗಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ ಸೇರಿ, ಆಗಸ್ಟ್ 17 ಈ ವಿಷಯ ಕುರಿತು ಚರ್ಚೆಗೆ ಬಸವಕಲ್ಯಾಣದಲ್ಲಿ ನಾಡಿನ ಬಸವಭಕ್ತರ ಸಭೆಯನ್ನು ಕರೆದರು.
ಈ ಸುದ್ದಿ ಮಹಾರಾಷ್ಟ್ರಕ್ಕೂ ಹಬ್ಬಿ ಅಲ್ಲಿನ ಬಸವ ಸಂಘಟನೆಗಳು ಕಲ್ಯಾಣಕ್ಕೆ ಬರಲು ಸಿದ್ಧರಾದರು. ಬಸವಭಕ್ತರ ಸಹನೆಯ ಕಟ್ಟೆ ಒಡೆಯುತ್ತಿರುವುದನ್ನು ಅರಿತ ಬೀದರ್ ಜಿಲ್ಲೆಯ ಹಾರಕೂಡದ ಪೂಜ್ಯರು ಒಂದು ಹೇಳಿಕೆ ನೀಡಿ ಮಾನವೀಯತೆಗೆ ವಿರುದ್ಧವಾದ ಅಡ್ಡಪಲ್ಲಕ್ಕಿಗೆ ತಮ್ಮ ವಿರೋಧವಿದೆ, ತಾವು ಆ ಕಾರ್ಯಕ್ರಮದಿಂದ ಹಿಂದೆ ಸರಿದಿರುವುದಾಗಿ ಘೋಷಣೆ ಮಾಡಿದರು. ರಂಭಾಪುರಿ ಶ್ರೀಗಳು ತಮ್ಮ ಅಡ್ಡಪಲ್ಲಕ್ಕಿಯ ಹಠಬಿಟ್ಟ ಮೇಲೆ ಇವರ ಕ್ರಮ ಅನುಸರಿಸಿ ಭಾಲ್ಕಿಯ ಶ್ರೀಗಳು ಕರೆದ ಸಭೆಯೂ ನಡೆಯಲಿಲ್ಲ. ಭಾಲ್ಕಿಯ ಶ್ರೀಗಳು ಒಮ್ಮಿಂದೊಮ್ಮೆಲೇ ಬಸವಭಕ್ತರ ಸಭೆಯನ್ನು ಮೊಟಕುಗೊಳಿಸಿದ್ದು ಬಸವಭಕ್ತರ ಅಸಮಾಧಾನಕ್ಕೂ ಕಾರಣವಾಯಿತು.
ಅದೇನೇ ಇರಲಿ ಬಸವಕಲ್ಯಾಣದಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಶರನ್ನವರಾತ್ರಿ ಉತ್ಸವ ನಡೆಯುವದು ಖಚಿತವಾಗಿದೆ. ರಂಭಾಪುರಿ ಜಗದ್ಗುರುಗಳು ಶೃಂಗರಿಸಿದ ವಾಹನದಲ್ಲಿ ಮೆರೆವಣಿಗೆಗೆ ಒಪ್ಪಿಕೊಂಡು ಕಾರ್ಯಕ್ರಮ ನಡೆಸಲು ಒಪ್ಪಿಯಾಗಿದೆ. ಹಾಗಾದರೆ ಸಹಜವಾಗಿ ಈ ಕಾರ್ಯಕ್ರಮದಲ್ಲಿ ಏನೇನು ನಡೆಯುತ್ತದೆ ಎನ್ನುವದನ್ನು ತಿಳಿಯೋಣ.
1) ಪುರ ಪ್ರವೇಶ:
ಶ್ರೀ ಮದ್ರಂಭಾಪುರಿ ಮಹಾಸನ್ನಿಧಾನ ದಸರೆಯ ಪ್ರಾರಂಭದ ದಿನ ಪುರಪ್ರವೇಶ ಕಾರ್ಯಕ್ರಮ. ಅವರು ಪಲ್ಲಕ್ಕಿಯ ಮೂಲಕ ಸಾವಿರಾರು ಜನರ ಸಮ್ಮುಖದಲ್ಲಿ, ವಾದ್ಯ, ಮೇಳಗಳು, ಡೊಳ್ಳು ಕುಣಿತಗಳ ಜೊತೆಗೆ ಆ ಊರನ್ನು ವಿಜೃಂಭಣೆಯಿಂದ ಪ್ರವೇಶ ಮಾಡುತ್ತಾರೆ.
2) ಒಂಭತ್ತೂ ದಿನಗಳ ಉತ್ಸವ : ಒಂಭತ್ತು ದಿನಗಳ ಕಾಲ ವಿಶೇಷ ಉಡುಗೆ-ತೊಡುಗೆಗಳೊಂದಿಗೆ ಜಗದ್ಗುರುಗಳು ರಾಜಗಾಂಭೀರ್ಯವನ್ನು ಮೆರೆಯುವದು ಅಲ್ಲಿ ನೆರೆದಿರುವ ಸಮಸ್ತರಿಗೂ ಕಾಣಬರುತ್ತದೆ.
3) ವಿದ್ವಾಂಸರು, ಪಂಡಿತರಿಂದ ಚಿಂತನೆಗಳು :
ಹಬ್ಬದ ಒಂಭತ್ತೂ ದಿನಗಳ ಕಾಲ ನಾಡಿನ ಧೀಮಂತ ವಿದ್ವಾಂಸರಿಂದ, ಪಂಡಿತರಿಂದ ಸಮಾಜೋತ್ಕರ್ಷತೆಗೆ ಪ್ರೇರಣೆ ತುಂಬುವಂತಹ ಆಯ್ಕೆ ವಿಷಯಗಳ ಕುರಿತಾದ ಉಪನ್ಯಾಸಗಳಿರುತ್ತವೆ.
3) ಸಾಧಕರಿಗೆ ಗೌರವ ಶ್ರೀರಕ್ಷೆ:
ಪ್ರತಿದಿನವೂ ಚಿಂತಕರಿಗೆ ಸಾಹಿತಿಗಳಿಗೆ, ಸಾಧಕರಿಗೆ, ಸಂಗೀತ ಕಲಾವಿದರಿಗೆ ವಿಶೇಷ ಸ್ಥಾನಮಾನವನ್ನಿತ್ತು, ಪೂಜ್ಯರಿಂದ ಗೌರವ ರಕ್ಷೆಯನ್ನು ನೀಡಲಾಗುತ್ತದೆ.
4) ಶಿವಾಚಾರ್ಯರುಗಳಿಂದ ಉಪದೇಶ ಕಾರ್ಯಕ್ರಮ
ಪ್ರತಿದಿನವೋ ಇರುತ್ತದೆ., ನಿತ್ಯದ ಸಮಾರಂಭದ ಕೊನೆಗೆ ಪೂಜ್ಯರಿಂದ ಸಂದೇಶದ ನುಡಿಗಳು ಇರುತ್ತವೆ.
5) ಶಮಿಸಿಮೋಲ್ಲಂಘನೆ ಕಾರ್ಯಕ್ರಮ:
ದಸರೆಯ ಕೊನೆಯ ದಿವಸ ಅಂದರೆ ವಿಜಯದಶಮಿಯಂದು ನಡೆಯುವ ವಿಶೇಷಪೂಜೆ. ಕುಂಭೋತ್ಸವ, ತೀರ್ಯಾಂದೋಲಿಕೋತ್ಸವ, ಶಮಿಸೀಮೋಲ್ಲಂಘನ, ಧರ್ಮ ಸಮ್ಮೇಳನ, ಶಾಂತಿ ಸಂದೇಶಗಳು ಜರುಗಿ ಬಂದ ಭಕ್ತರುಗಳೆಲ್ಲರೂ ಬನ್ನಿ-ಬಂಗಾರವನ್ನರ್ಪಿಸಿ ಆಶೀರ್ವಾದ ಪಡೆಯುವ ಕಾರ್ಯಕ್ರಮ ವಿರುತ್ತದೆ.
ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವೂ ನಡೆಯುತ್ತದೆ. ಅಲ್ಲಿ ವಿವಿಧ ವೇಷಗಳನ್ನು ಧರಿಸಿದ ವ್ಯಕ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವು ಕಡೆ ಬಸವಣ್ಣನವರ ವೇಷ ತೊಡಿಸಿ ಕುದುರ ಮೇಲೆ ಕೂಡ್ರಿಸಿ ಜಗದ್ಗುರುಗಳ ಮುಂದೆ ಮುಂದೆ ಸಾಗುವ ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಗುತ್ತಿತ್ತು. ಇದು ಸಹ ಬಸವ ಭಕ್ತರ ವಿರೋಧಕ್ಕೆ ಕಾರಣವಾದಾಗ ಅದನ್ನು ಕೈಬಿಡಲಾಯಿತು.
ನಂತರ “ಶಮಿ” ಅಂದರೆ ಬನ್ನಿ, ಸಿಮೋಲ್ಲಂಘನೆ ಎಂದರೆ ಜನರು ತಮ್ಮ ತಮ್ಮ ಸೀಮೆಯ ಮನೆಯ ಪರಿಧೆಯನ್ನು ದಾಟಿ ಬಂದು ಬನ್ನಿ ಮುಡಿದು, ಜಗದ್ಗುರುಗಳಿಗೆ, ಶಿವಾಚಾರ್ಯರಿಗೆ ಉಳಿದ ಮಠದವರಿಗೆ ಬನ್ನಿ ಕೊಟ್ಟು ಆಶೀರ್ವಾದ ಪಡೆಯುವ ಕಾರ್ಯಕ್ರಮ.
7) ವಿವಾದಾಸ್ಪದ ನಝರ್ ಕಾರ್ಯಕ್ರಮ:
ಪ್ರತಿದಿನ ಕಾರ್ಯಕ್ರಮದ ಕೊನೆಗೆ ಜಗದ್ಗುರುಗಳವರಿಗೆ ಸಲ್ಲಿಸುವ ನಜರ್ ಸಮರ್ಪಣೆಯಂತೂ ಇಂದ್ರನ ದರ್ಬಾರ್ನ್ನು ಸ್ಮರಣೆಗೆ ತರದೇ ಇರಲಾರದು ಎನ್ನುವದು ಅವರ ಅನುಯಾಯಿಗಳ ಅಂಬೊಣ.
ಈ ನಝರ್ ಕಾರ್ಯಕ್ರಮದಲ್ಲಿ ಪ್ರತಿದಿನ ಪೀಠದ ಶಿವಾಚಾರ್ಯರು, ಜಗದ್ಗುರುಗಳ ಮುಂದೆ ಸಾಗಿ ಬಂದು ವಿನೀತ ಭಾವದಿಂದ ಕೈಮುಗಿದು ಅವರ ದೃಷ್ಟಿಯೊಡನೆ ತಮ್ಮ ದೃಷ್ಟಿಯನ್ನು ಕೆಲಕ್ಷಣ ಕೂಡಿಸಿ, ಶರಣಾಗಿ ನಂತರ ಅಲ್ಲಿಂದ ಜಗದ್ಗುರುಗಳಿಗೆ ಬೆನ್ನು ತೋರಿಸದೆ ಹಿಂಮ್ಮುಖವಾಗಿಯೇ ನಡೆದು ವೇದಿಕೆಯಿಂದ ನಿರ್ಗಮಿಸುತ್ತಾರೆ.
(ಮುಂದುವರೆಯುವುದು)