ಬಸವ ಸಿದ್ಧಾಂತ ಭಕ್ತಿ ಪಂಥವೂ ಹೌದು, ಸಾಮಾಜಿಕ ಪ್ರಣಾಳಿಕೆಯೂ ಹೌದು
ಬೆಂಗಳೂರು
(ಶರಣ ಚಳುವಳಿ ಭಕ್ತಿ ಚಳುವಳಿಯೂ, ಸಾಮಾಜಿಕ ಆಂದೋಲನವೋ ಎನ್ನುವ ಚರ್ಚೆ ಬಸವ ಸಂಜೆಯಲ್ಲಿ ಶುರುವಾಯಿತು. ಪಿ ರುದ್ರಪ್ಪ, ರಾಜಶೇಖರ ನಾರನಾಳರ ನಂತರ ಹಿರಿಯ ಚಿಂತಕ ಟಿ ಆರ್ ಚಂದ್ರಶೇಖರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.)
ಒಂದು ಸಾರ್ವಜನಿಕ ಕಾರ್ಯಕ್ರಮದ ಯಶಸ್ಸನ್ನು ಅಲ್ಲಿ ಸೇರಿದ ಜನರ ಸಂಖ್ಯೆಯನ್ನು, ಕಾರ್ಯಕ್ರಮದ ಅದ್ದೂರಿಯನ್ನು, ಸನ್ಮಾನಗಳ ಸರಣಿ ಮುಂತಾದವುಗಳ ಆಧಾರದಲ್ಲಿ ಆಳೆಯುವುದು ವಾಡಿಕೆಯಲ್ಲಿದೆ.
ಅದರ ಯಶಸ್ವು ಎಲ್ಲಿರುತ್ತದೆ ಎಂದರೆ ಅದು ಹುಟ್ಟು ಹಾಕುವ ಚರ್ಚೆಯಲ್ಲಿ, ಅಲ್ಲಿ ಎತ್ತುವ ಪ್ರಶ್ನೆಗಳಲ್ಲಿ ಮತ್ತು ವಾದ-ಸಂವಾದಗಳಲ್ಲಿರುತ್ತದೆ. ಕಾರ್ಯಕ್ರಮ ಕೇವಲ ಪ್ರವಚನವಾಗಬಾರದು ಮತ್ತು ಒಂದೇ ಮಾರ್ಗದ ಉಪನ್ಯಾಸವಾಗಬಾರದು.
ಬಸವ ಮೀಡಿಯಾ ಟ್ರಸ್ಟ್ ಆಗಸ್ಟ್ ೧೭ ಭಾನುವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ “ಬಸವ ಸಂಜೆ” ಎಂಬ ರಮಣೀಯ ಮೂರು ಕಾರ್ಯಕ್ರಮಗಳ ಸಂಗಮವು ಒಂದು ಚರ್ಚೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಯಿತು.

ಈ ಕಾರ್ಯಕ್ರಮದ ಭಾಗವಾಗಿ ನಡೆದ ‘ಸಂವಾದ’ದಲ್ಲಿ ಬಸವ ತತ್ವವು-ಶರಣ ತತ್ವವು ಕೇವಲ ಭಕ್ತಿ ಪಂಥವೇ ಅಥವಾ ಕೇವಲ ಸಾಮಾಜಿಕ ಪ್ರಣಾಳಿಕೆಯೇ ಎಂಬ ಅರ್ಥಪೂರ್ಣ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆಯು ಹೊಸದೇನಲ್ಲ. ಬಹಳ ಹಿಂದಿನಿಂದಲೂ ಇದು ನಡೆಯುತ್ತಾ ಬಂದಿದೆ. ಈ ಚರ್ಚೆಯಲ್ಲಿ ಒಂದು ಸಂಗತಿಯು ಖಚಿತವಾಗಿದೆ.
ಅದೇನೆಂದರೆ ಬಸವ ತತ್ವದ ಭಕ್ತಿಯು ಇತರ ಭಕ್ತಿ ಪಂಥಗಳಿಗಿಂತ ಭಿನ್ನ ಎಂಬುದನ್ನು ಚರ್ಚೆಯಲ್ಲಿ ಭಾಗವಹಿಸುತ್ತಿರುವವರೆಲ್ಲ ಒಪ್ಪಿದ್ದಾರೆ. ಅಕ್ಕಮ್ಮ ಎಂಬ ವಚನಕಾರ್ತಿಯ ವಚನವೊಂದು ಹೀಗಿದೆ:
“ತಾ ಮಾಡುವ ಕೃಷಿ ಮಾಡುವನ್ನಬರ ಮಾಡಿ,
ಕೃಷಿ ತೀರಿದ ಮತ್ತೆ ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ
ಶಿವಭಕ್ತರ ಸುಖಸಂಭಾಷಣೆ, ಶರಣರ ಸಂಗ
ಈ ನೇಮವನರಿವುತಿಪ್ಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ
ಆಚಾರವೇ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ಆತನೆ ಚೇತನ ಭಾವ”
(ಅಕ್ಕಮ್ಮನವರ ವಚನ. ವಚನ ಸಂಖ್ಯೆ ೪೯೫. ಪುಟ: ೮೪೦)
ಅಕ್ಕಮ್ಮನ ಪ್ರಕಾರ ಕಾಯಕ ಮೊದಲು; ಗುರು ದರ್ಶನ, ಲಿಂಗ ಪೂಜೆ ನಂತರ. ಇದನ್ನೇ ಆಯ್ದಕ್ಕಿ ದಂಪತಿಗಳು, ನುಲಿಯ ಚಂದಯ್ಯನವರು ಕಾಯಕ ಮೊದಲು ನಂತರ ಗುರುಲಿಂಗಜಂಗಮ ಎಂಬುದನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ.
ಬಸವ ಸಂವಿಧಾನದಲ್ಲಿ ಭಕ್ತಿ ಎನ್ನುವುದಕ್ಕೆ ಗುಡಿ ಬೇಕಾಗಿಲ್ಲ, ರುದ್ರಾಭಿಷೇಕ ಬೇಕಾಗಿಲ್ಲ. ದೈನ್ಯತೆಯ ಭಾವವೂ ಬೇಕಾಗಿಲ್ಲ. ಪಾದಪೂಜೆಯು ಬೇಕಿಲ್ಲ. ‘ಭಕ್ತಿ’ ಎನ್ನುವುದು ಸಮಾಜದ ಎಲ್ಲರನ್ನು ಒಳಗೊಳ್ಳುವ ಒಂದು ಕ್ರಮವಾಗಬೇಕು. ಡೋಹರ ಕಕ್ಕಯ್ಯನವರ ಕೆಳಗಿನ ವಚನ ಇದನ್ನು ವಿಶಿಷ್ಟವಾಗಿ ಮಂಡಿಸಿದೆ.
ಎನ್ನ ಕಷ್ಟ ಕುಲದಲ್ಲಿ ಹುಟ್ಟಿಸಿದೆಯಯ್ಯಾ – ಎಲೆ ಲಿಂಗ ತಂದೆ
ಕೆಟ್ಟೆನಯ್ಯಾ ನಿಮ್ಮ ಮುಟ್ಟಿಯೂ ಮುಟ್ಟದಿಹನೆಂದು
ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ?
ಅಭಿನವ ಮಲ್ಲಿಕಾರ್ಜುನ
(ಡೋಹರ ಕಕ್ಕಯ್ಯನವರ ವಚನ. ವಚನ ಸಂಖ್ಯೆ ೯೮೪. ಪುಟ: ೧೨೯೭)
ಈ ವಚನದಲ್ಲಿನ “ಮನ ಮುಟ್ಟಲಾಗದೆ” ಎನ್ನುವುದು ಭಕ್ತಿಯಾದರೆ “ಎನ್ನ ಕೈ ಮುಟ್ಟದಿರ್ದಡೆ” ಎನ್ನುವುದು ಸಾಮಾಜಿಕ ಸಂಕೋಲೆ. ಬಸವಣ್ಣನವರ ಪ್ರಕಾರ ಸಾಮಾಜಿಕ ಸಂಕೋಲೆಯಿಂದ ಜನರನ್ನು ಬಿಡುಗಡೆಗೊಳಿಸದಿದ್ದರೆ ಭಕ್ತಿಗೆ ಎಲ್ಲಿ ಸ್ಥಾನ? ಭಕ್ತಿಯು ಎಲ್ಲರ ಆಸ್ತಿಯಾಗಬೇಕು ಎಂಬುದು ಬಸವ ಸಿದ್ಧಾಂತ.
ಇದು ಎಲ್ಲರ ಆಸ್ತಿಯಾಗಬೇಕಾದರೆ ವೈದಿಕವು ತೊಡಿಸಿದ್ದ ವರ್ಣ-ವರ್ಗ-ಲಿಂಗ-ಜಾತಿ-ಅಂತಸ್ತು ಭೇದವನ್ನು ತೊಡೆದು ಹಾಕುವುದು ಬಸವಣ್ಣವರಿಗೆ ಪ್ರಧಾನವಾಗಿತ್ತು. ಇದನ್ನೇ ನಾವು ಬಸವ ಸಿದ್ಧಾಂತದ ಸಾಮಾಜಿಕ ಪ್ರಣಾಳಿಕೆ ಎನ್ನುತ್ತಿದ್ದೇವೆ.
ಈ ಚರ್ಚೆಗೆ ಡಾ. ಎಂ. ಎಂ. ಕಲಬುರ್ಗಿ ಅವರು ಅತ್ಯಂತ ಖಚಿತವಾದ ಉತ್ತರ ನೀಡಿದ್ದಾರೆ. ಶರಣ ತತ್ವವನ್ನು ಯಾಕೆ ಸಾಮಾಜಿಕ ಚೌಕಟ್ಟಿನಲ್ಲಿ ನೋಡಬೇಕು ಎಂಬುದಕ್ಕೆ ಇದು ಅರ್ಥಗರ್ಭಿತ ಸೂಚಿಯಾಗಿದೆ. ಅವರ ಮಾತುಗಳು ಹೀಗಿವೆ:
“ಇನ್ನು ಸ್ವಲ್ಪ ಸಿದ್ಧಾಂತದ ಬಗ್ಗೆ ಹೇಳಬೇಕೆಂದರೆ ಅದನ್ನು ಭಕ್ತಿ ಚಳುವಳಿ, ಭಕ್ತಿ ಚಳುವಳಿ ಅಂತ ಕರೀತಾ ಇದ್ದೀವಿ. ನಾವು ಇದನ್ನು ಭಕ್ತಿ ಚಳುವಳಿ ಅಂತ ಕರೀತಾ ಹೋಗ್ಬಿಟ್ರೆ ಏನಾಗುತ್ತದೆ ಅಂದರೆ ಇದೊಂದು ಭಜನಾ ಮಾಡೂ ಚಳುವಳಿ ಅಂತರ್ಥ. . . . ಆ ಭಕ್ತಿ ಚಳುವಳಿ ಅಂತನುವಾಗ ಏನೇನ ನಮ್ಮ ಉತ್ತರ ಭಾರತದವರದಾರಲ್ಲ ಕಬೀರದಾಸ, ರಾಮದಾಸ ಇವರೆಲ್ಲ ಇದಾರಲ್ಲ, ಆಮೇಲೆ ಮೀರಾಬಾಯಿ ಇವರೆಲ್ಲರ ಜೊತೆ ಶರಣರನ್ನು ಒಂದು ಭಕ್ತಿ ಅಂತ ಹಾಕಿ ತಗೊಂಡಬಿಟ್ರು. . . .ಇದೂ ಒಂದು ಭಜನಾ ಮಾಡುವಂತಾ ಧರ್ಮ ಅಂತ ಒಂದು ಭಾವನೆ ಬಂದ್ಬಿಟ್ತು. ಇದೂ ಭಕ್ತಿ ಮೂಲ ಅಂದರೆ ಅದನ್ನು ಒಪ್ಪಿಕೊಳ್ರಿ. ಭಕ್ತಿ ಇದರ ಬುನಾದಿ. ಇದರ ಮ್ಯಾಲೆ ಬೆಳೆದಿದ್ದ ಧರ್ಮ. ಇದು ಭಕ್ತಿಗೆ ಮಾತ್ರ ನಿಲ್ಲುವುದಿಲ್ಲ. ಇದು ಭಕ್ತಿ ಚಳುವಳಿಯಾಗಿತ್ತು. ಅದನ್ನ ಶರಣ ಚಳುವಳಿಯಾಗಿ ಮಾರ್ಪಡಿಸಿದರು ಕಲ್ಯಾಣದ ಶರಣರು, ಬಸವಣ್ಣನವರು. . . . ಹೌದು ಭಕ್ತಿ ಇರ್ತದ. ಅದಕ್ಕ ಬುನಾದಿಯಾಗಿ ಭಕ್ತಿ ಇರ್ತದ. ಆದರೆ ನಾವು ಶರಣರು. ವ್ಯಕ್ತಿ-ವ್ಯಕ್ತಿವಾದಿ ಆತ್ಮೋದ್ಧಾರಕ ವಿಚಾರ ಮಾಡುವವ. ಶರಣ ಆತ್ಮೋದ್ಧಾರದ ಕೂಡ ಸಮಾಜೋದ್ಧಾರ ಮಾಡುವವನು. ಇದು ಬಸವಣ್ಣನವರು ಹೇಳಿದ್ದು” (ಲಿಂಗಾಯತ ಸ್ವತಂತ್ರ ಧರ್ಮ. ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ. ೨೦೧೫. ಪುಟ ೭೧-೭೨).
ವಚನ ಸಂವಿಧಾನವನ್ನು ಸಾಮಾಜಿಕ ಪ್ರಣಾಳಿಕೆಯಾಗಿ ನೋಡುವುದೇ ಸೂಕ್ತ. ಅದರ ಭಾಗವಾಗಿ ಭಕ್ತಿ ಇರುತ್ತದೆ. ಅಕ್ಕಮ್ಮ ಹೇಳುವಂತೆ ಕೃಷಿ – ಕಾಯಕ ಮೊದಲು. ಲಿಂಗ ಪೂಜೆ ನಂತರದ್ದು. ಕಾಯಕವೇ ಆಧ್ಯಾತ್ಮ.
ಮಾದಾರ ಧೂಳಯ್ಯನವರು “ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪರಮೇಶ್ವರ”ನನ್ನು ಕಾಣುತ್ತಾರೆ. ದೇವರ ಹಂಗನ್ನು ನಿರಾಕರಿಸುತ್ತಾರೆ. ವೈದಿಕದ ಸಂಕೋಲೆಯಿಂದ ಸಮಾಜವನ್ನು ಬಿಡಿಸುವ ಕೆಲಸವನ್ನು ಬಸವಣ್ಣನವರು ಮಾಡಿದರು. ವೈದಿಕವನ್ನು ಬಸವಣ್ಣನವರು “ವಿಪ್ರ ಕರ್ಮ” ಎನ್ನುತ್ತಾರೆ. ಇಂದಿಗೂ ವಿಪ್ರಕರ್ಮದ ಬಲೆಯಲ್ಲಿ ಸಮಾಜ ನಲುಗುತ್ತಿದೆ. ಭಕ್ತಿಯು ಒಂದು ನೆಲೆಯಲ್ಲಿ ಮೌಢ್ಯಾಚರಣೆಗಳಿಗೂ ದಾರಿ ಮಾಡಿಕೊಡುತ್ತದೆ. ಏಕೆಂದರೆ ಅಲ್ಲಿ ದೈನ್ಯತೆ, ಮುಗ್ದತೆ, ಪ್ರಶ್ನಾತೀತತೆ, ಎಲ್ಲವನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ವರ್ಣವ್ಯವಸ್ಥೆಯು ಸಮಾಜವನ್ನು ಒಡೆದು ಛಿದ್ರಗೊಳಿಸುತ್ತಿದೆ. ಇಲ್ಲಿ ಭಕ್ತಿಗಿಂತ ಸಾಮಾಜಿಕ ಪ್ರಣಾಳಿಕೆಯನ್ನು ನೆಮ್ಮುವುದು ಅಗತ್ಯ.
“ಭಕ್ತಿಯಿಲ್ಲದೆ ಸಾಮಾಜಿಕ ಆರೋಗ್ಯ ಅಸಾಧ್ಯ” ಎಂಬುದನ್ನು ನಾವು ತಿರುವುಮುರುವು ಮಾಡಬೇಕಾದ ಅಗತ್ಯವಿದೆ. ಸಾಮಾಜಿಕ ಆರೋಗ್ಯವಿಲ್ಲದಿದ್ದರೆ ಅಲ್ಲಿ ಭಕ್ತಿಯೂ ಇಲ್ಲ. ಆಧ್ಯಾತ್ಮವೂ ಇಲ್ಲ. ಆತ್ಮೋದ್ಧಾರವೂ ಇಲ್ಲ. ಬಸವ ಸಂವಿಧಾನವನ್ನು ಇಂದು ಸಾಮಾಜಿಕ ನೆಲೆಗಟ್ಟಿನಲ್ಲಿ ಪರಿಭಾವಿಸಿಕೊಳ್ಳುವುದೇ ಸೂಕ್ತ.
(ಬಸವ ಮೀಡಿಯಾ ಕಾರ್ಯಕ್ರಮದಲ್ಲಿನ ಸಂವಾದದ ವಿಷಯದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿದ ಶರಣ ಪಿ. ರುದ್ರಪ್ಪ ಕುರಕುಂದಿ, ಶರಣ ಅಶೋಕ ಬಸಪ್ಪ ಬರಗುಂಡಿ, ಎಸ್. ಎ. ಮುಗದ್ ಎಲ್ಲರಿಗೂ ಕೃತಜ್ಞತೆಗಳು)