ವೀರಶೈವ ಮಹಾಸಭಾ ಹೆಸರಿನ ಗೊಂದಲದಿಂದ ಹೊರಬರಲಿ

ಬೆಂಗಳೂರು

ಕಳೆದ ಮೂರು–ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಜನಗಣತಿಯಲ್ಲಿ ಧರ್ಮದ ಅಂಕಣದಲ್ಲಿ ಲಿಂಗಾಯತ ಎಂದು ಬರೆಸಬೇಕೋ ಅಥವಾ ವೀರಶೈವ ಎಂದು ವರದಿ ಮಾಡಬೇಕೋ ಅಥವಾ ವೀರಶೈವ ಲಿಂಗಾಯತ ಎಂದು ಬರೆಸಬೇಕೋ ಎಂಬುದರ ಬಗ್ಗೆ ಇನ್ನಿಲ್ಲದ ವಿವಾದ ನಡೆಯುತ್ತಾ ಬಂದಿದೆ. ಈಗ ಈ ವಿವಾದ ಕೊನೆಗೊಳ್ಳುವ ಸೂಚನೆ ಕೇಳಿ ಬರುತ್ತಿದೆ.

ಇತ್ತೀಚೆಗೆ ಅಖಿಲ ಭಾರತ ವೀರಶೈವ ಮಹಾಸಭೆ ನಾಯಕರು ಮುಂಬರುವ ಜನಗಣತಿಯಲ್ಲಿ ಎಲ್ಲರೂ ಧರ್ಮದ ಕಾಲಮ್ಮಿನಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಎಂದು ಹಾಗೂ ಜಾತಿಯ ಕಾಲಂನಲ್ಲಿ ಒಳಪಂಗಡದ ಹೆಸರನ್ನು ಬರೆಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಅಭಿಪ್ರಾಯವು ಅನೇಕ ದೃಷ್ಟಿಯಿಂದ ಮಹತ್ವದ್ದಾಗಿದೆ.

(೧) ಮಹಾಸಭೆಯು ಲಿಂಗಾಯತ/ವೀರಶೈವ/ವೀರಶೈವ ಲಿಂಗಾಯತ ಎಂಬ ಗೋಂದಲವನ್ನು ಬಗೆಹರಿಸಿಕೊಂಡಿದೆ. ‘ಒಂದು ಧರ್ಮಕ್ಕೆ ಎರಡು ಹೆಸರುಗಳಿರುವುದು ಸಾಧ್ಯವಿಲ್ಲ’ ಎಂಬ ಪ್ರಸಿದ್ಧ ವಚನ ಸಾಹಿತ್ಯ ಚಿಂತಕ ಡಾ. ವೀರಣ್ಣ ರಾಜೂರ ಅವರ ಹೇಳಿಕೆ ಹಿನ್ನೆಲೆಯಲ್ಲಿ ಮಹಾಸಭೆಯು “ವೀರಶೈವ ಲಿಂಗಾಯತ” ಎಂಬ ಎಡಬಿಡಂಗಿ ಹೆಸರಿನ ಬಗ್ಗೆ ತಾನು ಹುಟ್ಟು ಹಾಕಿದ್ದ ಗೊಂದಲವನ್ನು ಈಗ ಕೈಬಿಟ್ಟಂತೆ ಕಾಣುತ್ತದೆ.

(೨) ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬುದನ್ನು ವೀರಶೈವ ಮಹಾಸಭಾ ಒಪ್ಪಿಕೊಂಡಂತೆ ಕಾಣುತ್ತದೆ. ಇದು ‘ಕಾಣುತ್ತದೆ’ ಎಂದು ಹೇಳಬೇಕೇ ವಿನಃ ಈ ಬಗ್ಗೆ ಅದು ಅಧಿಕೃತ ತೀರ್ಮಾನಕ್ಕೆ ಬಂದಿಲ್ಲ. ಅದಿನ್ನೂ ಗೊಂದಲದಲ್ಲಿದೆ.

(೩) “ವೀರಶೈವ ಲಿಂಗಾಯತ” ಎಂಬ ಎಡಬಿಡಂಗಿ ಶೀರ್ಷಿಕೆಯನ್ನು ಅದು ಏಕೆ ಕೈ ಬಿಡುತ್ತಿದೆ ಎಂಬುದು ಕುತೂಹಲದ ಪ್ರಶ್ನೆ. ಬಸವಣ್ಣ ಪ್ರಣೀತ ಲಿಂಗಾಯತ ಸ್ವತಂತ್ರ ಧರ್ಮದ ಚಳುವಳಿಯ ಪ್ರಭಾವ ವೀರಶೈವ ಮಹಾಸಭೆಯ ಮೇಲಾಗಿರುವುದನ್ನು ಸದರಿ ಅಭಿಪ್ರಾಯ ಬಹಿರಂಗ ಪಡಿಸುತ್ತದೆ.

(೪) ರಾಜ್ಯದಲ್ಲಿ ಇಂದು ಮಾಧ್ಯಮದಲ್ಲಿ, ಚರ್ಚೆಗಳಲ್ಲಿ, ವರದಿಗಳಲ್ಲಿ, ಬಸವಣ್ಣನವರನ್ನು, ವಚನ ಸಾಹಿತ್ಯವನ್ನು ಕುರಿತ ಕಾರ್ಯಕ್ರಮಗಳಲ್ಲಿ, ಸಮಾವೇಶಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಲಿಂಗಾಯತ ಎಂಬುದನ್ನು ಬಳಸುತ್ತಿದ್ದಾರೆಯೇ ವಿನಃ ವೀರಶೈವ ಎನ್ನುವುದನ್ನು ಬಳಸದೇ ಇರುವುದನ್ನು ಮಹಾಸಭೆಯು ಗಮನಿಸಿದಂತೆ ಕಾಣುತ್ತದೆ.

(೫) ಕುಂಕುಮಧಾರಿ ಆರ್‌ಎಸ್‌ಎಸ್ ವೀರಶೈವ ಲಿಂಗಾಯತರ ನಿಯಂತ್ರಣದಿಂದ ಮಹಾಸಭೆಯು ಸದರಿ ನಿರ್ಣಯದ ಮೂಲಕ ಹೊರಬಂದಂತೆ ಕಾಣುತ್ತದೆ!

(೬) ರಾಜ್ಯದಲ್ಲಿ ಬಹುತೇಕ ಜನರು ಬಸವಣ್ಣ ಪ್ರಣೀತ ಲಿಂಗಾಯತವನ್ನು ಒಪ್ಪಿಕೊಂಡಿರುವುದನ್ನು, ಮಹಾಸಭೆಯು ಗಮನಿಸಿದಂತೆ ಕಾಣುತ್ತದೆ.

ವೀರಶೈವ ಲಿಂಗಾಯತ ಎಂಬ ಎಡಬಿಡಂಗಿ ಹೆಸರನ್ನು ಬಳಸುವುದಕ್ಕೆ ಮಹಾಸಭೆಯು ಹಿಂಜರಿದಂತೆ ಕಾಣುತ್ತದೆ. ಜನರ ಒಲವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಗಮನಿಸಿ “ವೀರಶೈವ ಲಿಂಗಾಯತ” ಎಂಬುದನ್ನು ಕೈಬಿಟ್ಟು ಲಿಂಗಾಯತ ‘ಅಥವಾ’ ವೀರಶೈವ ಎನ್ನುವಲ್ಲಿಗೆ ಅದು ಈಗ ಬಂದು ನಿಂತಿದೆ. ಮುಂದೆ ಅದು ವೀರಶೈವವನ್ನು ಬಿಟ್ಟು ಲಿಂಗಾಯತಕ್ಕೆ ಮನ್ನಣೆ ನೀಡುವ ದಿನಗಳು ದೂರವಿಲ್ಲ ಎಂದು ಕಾಣುತ್ತದೆ.

(೭) ಕಳೆದ ಬಸವ ಜಯಂತಿ ಸಂದರ್ಭದಲ್ಲಿ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಹೊರಡಿಸಿದ್ದ “ಬಸವಣ್ಣ ಮತ್ತು ರೇಣುಕಾಚಾರ್ಯ” ಜಯಂತಿಗಳನ್ನು ಕೂಡಿಸಿ ಮಾಡಬೇಕು ಎಂಬ ಆದೇಶಕ್ಕೆ ಮತ್ತು ರೇಣಕಾಚಾರ್ಯರು ೭೭೧ನೆಯ ಅಮರಗಣಂಗಳು ಎಂಬ ಬಾಲಿಶ ಸಲಹೆಗೆ ಜನರಿಂದ ಹಾಗೂ ಮಹಾಸಭೆಯ ಸದಸ್ಯರುಗಳಿಂದ ತೀವ್ರ ಆಕ್ರೋಶ ಬಂದಿತ್ತು. ಅದಕ್ಕೆ ಮಣಿದು ಆ ಅದೇಶವನ್ನು ಹಾಗೂ ಅಮರಗಣಂಗಳ ಬಗೆಗಿನ ಅವರ ಅಜ್ಞಾನ-ಕ್ಷಲ್ಲಕ ಸಲಹೆಗೆ ಬಂದ ವ್ಯಾಪಕ ಪ್ರತಿಕ್ರಿಯೆಯನ್ನು ಮಹಾಸಭೆಯು ಗಮನಿಸಿ ವೀರಶೈವ ಲಿಂಗಾಯತವನ್ನು ಕೈಬಿಟ್ಟಂತೆ ಕಾಣುತ್ತದೆ.

(೮) ಕಾಂತರಾಜು ಆಯೋಗದ ಜಾತಿಗಣತಿ ವರದಿಯ ಭಾಗವಾಗಿ ಲಿಂಗಾಯತದ ಜನಸಂಖ್ಯೆಯು ಅರ್ಧಕ್ಕಿಂತ ಕಡಿಮೆ ವರದಿಯಾಗಿರುವುದನ್ನು ಮಹಾಸಭೆಯು ಗಮನಿಸಿದೆ. ಇದಕ್ಕೆ ಕಾರಣವು ಅದೇ ಹುಟ್ಟು ಹಾಕಿರುವ ವೀರಶೈವ ಲಿಂಗಾಯತ ಎಂಬ ಗೊಂದಲ ಮತ್ತು ಲಿಂಗಾಯತ ಒಳಪಂಗಡಗಳನ್ನು ದೂರವಿಟ್ಟಿರುವುದರ ಪರಿಣಾಮ.

(೯) ಕೊನೆಯದಾಗಿ ವೀರಶ್ಯವ ಲಿಂಗಯತ ಎಂಬ ಪ್ರಣಾಳಿಕೆಯ ಪ್ರಮುಖ ಪ್ರತಿಪಾದಕ ಹಾಗೂ ಕರ್ನಾಟಕದ ಒಂದು ಪ್ರಸಿದ್ಧ ಮಠದ ಭಾಗವಾಗಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು ಇತ್ತೀಚಿಗೆ ಬಸವ ಸಂಸ್ಕೃತಿ ಅಭಿಯಾನದ ಸಿದ್ಧತೆಯ ಸಭೆಯಲ್ಲಿ “ಎಲ್ಲರೂ ಜನಗಣತಿಯಲ್ಲಿ ಹಾಗೂ ಜಾತಿಗಣತಿಯಲ್ಲಿ “ಲಿಂಗಾಯತ” ಎಂದೇ ಬರೆಸಬೇಕು ಎಂದು ಘೋಷಿಸಿದ್ದಾರೆ. ಇದೂ ಕೂಡ ಮಹಾಸಭೆಯ ಮೇಲ್ಕಂಡ ನಿರ್ಣಯಕ್ಕೆ ಕಾರಣವಾಗಿರಬಹುದು.

ಈಗ ಬಸವಣ್ಣ ಪ್ರಣೀತ ಲಿಂಗಾಯತ ಧರ್ಮಕ್ಕೆ ಅನುಕೂಲಕರವಾದ ವಾತಾವರಣ ಸಿದ್ಧವಾಗಿದೆ. ಸೆಪ್ಟಂಬರಿನಲ್ಲಿ ಆರಂಭವಾಗುವ “ಬಸವ ಸಂಸ್ಕೃತಿ ಅಭಿಯಾನ’ ಕರ್ನಾಟಕದ ೩೧ ಜಿಲ್ಲೆಗಳಲ್ಲಿಯೂ ನಡೆಯುತ್ತದೆ.

ಈ ಅಭಿಯಾನ ಕಾರ್ಯಕ್ರಮಗಳಲ್ಲಿ ಪ್ರಧಾನವಾಗಿ ವೀರಶೈವ ಲಿಂಗಾಯತ ಅಥವಾ ವೀರಶೈವ ಎಂಬದನ್ನು ಕೈಬಿಟ್ಟು “ಲಿಂಗಾಯತ” ಎಂದೇ ಬರೆಸಬೇಕು ಎಂಬ ಸಕಲ ಲಿಂಗಾಯತ ಮಠಾಧೀಶರುಗಳು ಕೈಗೊಂಡಿರುವ ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮವು ರಾಜ್ಯದಲ್ಲಿ ಲಿಂಗಾಯತಕ್ಕೆ ಹೊಸ ಚೈತನ್ಯವನ್ನು ಹುಟ್ಟು ಹಾಕುತ್ತದೆ.

ಇದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಈ ವಾತಾವರಣವನ್ನು ಬಸವ ಸಂಘಟನೆಗಳು ಬಳಸಿಕೊಳ್ಳಬೇಕು. ಇಂತಹ ಅವಕಾಶ ಮತ್ತೊಮ್ಮೆ ಬರುವುದಿಲ್ಲ. ಮಠಾಧೀಶರ ಕರೆಯು ಸಮಾಜದಲ್ಲಿ ದೊಡ್ಡ ಅಂಗೀಕಾರ ಪಡೆಯುತ್ತದೆ.

ಕೊನೆಯದಾಗಿ ಅಖಿಲ ಭಾರತ ವೀರಶೈವ ಮಹಾಸಭೆಯು ಒಂದು ದೊಡ್ಡ ಹೆಜ್ಜೆಯನ್ನಿಟ್ಟು ಜನಗಣತಿಯಲ್ಲಿ ಹಾಗೂ ಜಾತಿಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಮತ್ತು ಜಾತಿಯ ಕಾಲಂಮಿನಲ್ಲಿ ಒಳಪಂಗಡವನ್ನು ಬರೆಸುವ ಬಗ್ಗೆ ದಿಟ್ಟ-ಧೀರ-ಮಹತ್ವದ ನಿರ್ಣವನ್ನು ತೆಗೆದುಕೊಳ್ಳಬೇಕು.

ಲಿಂಗಾಯತರು ಹಿಂದೂಗಳಲ್ಲ, ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕ ಎಂಬುದನ್ನು ಮಹಾಸಭೆಯು ಒಪ್ಪಿಕೊಂಡಿದೆ. ಈಗ ಅದು ದೊಡ್ಡ ಹೆಜ್ಜೆಯನ್ನಿಡಬೇಕಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
4 Comments
  • ಬಸವಧರ್ಮ, ಲಿಂಗಾಯತ ಧರ್ಮ ಎಂದು ಬರೆಯಬೇಕು. ವೃತ್ತಿ ಎನ್ನು ವೈದಿಕರು ಜಾತಿ ಎಂದು ಕರೆಯುತ್ತಾರೆ. ಅದಕ್ಕೆ ಕೇವಲ present occupation ಚಾಲ್ತಿ ಕರ್ಮ, ಉದ್ಯೋಗ ಮಾತ್ರ ಬರೆಯಬೇಕು. ಉದ್ಯೋಗಗಳು ಬ್ರೀಡಿಂಗ್ ಕಾಸ್ಟ್ ಅನ್ನಲಾಗದು. ಯಾವ ಉದ್ಯೋಗ ಮಾಡಿದರು, ಮುಸಲ್ಮಾನ ಮಾತ್ರ ಕರೆಯುತ್ತಾರೆ. ಕ್ರಿಶ್ಚಿಯನ್ನರು ಯಾವ ಉದ್ಯೋಗ ಮಾಡಿದರು
    ಕ್ರಿಶ್ಚಿಯನ್ನರು ಎಂದು ಕರೆಯುತ್ತಾರೆ. ಹಾಗೆ ಅವರ ಸಂಖ್ಯೆ ಮೊತ್ತ ಹೆಚ್ಚಾಗಿದೆ. ಎಲ್ಲರಿಗೂ ಶುಭವಾಗಲಿ.

  • ಗುರು ಬಸವಲಿಂಗಾಯ ನಮಃ
    ವಚನಗಳು ನೇರವಾಗಿ ಎಲ್ಲರ ಹೃದಯವನ್ನು ತುಂಬುತ್ತವೆ. ಜನಮಾನಸದಲ್ಲಿ ವಚನಗಳ ಅಧ್ಯಯನ ಮೂಡಿಸುತ್ತಿರುವ ಸ್ವಾಧ್ಯಾಯದ ಪರಿಣಾಮವಾಗಿ ಬಸವಧರ್ಮದ ಕುರಿತು ಸ್ಪಷ್ಟ ತಿಳುವಳಿಕೆ ಮೂಡಿಬರುತ್ತಿದೆ. ನಾಡಿನ ಪ್ರಗತಿಪರ ಚಿಂತಕರು ಹಾಗೂ ಸಂವಿಧಾನದ ವಿಶ್ವಾಸಿಗರು, ಸಮಾಜವಾದಿ ನೆಲೆಯ ರಾಜಕಾರಣಿಗಳಲ್ಲಿ ಹೊಸ ಭರವಸೆ ಬಸವಧರ್ಮದ ಕುರಿತಾಗಿ ಮೂಡಿಬಂದಿದೆ. ಹೀಗಾಗಿಯೇ ಬಸವಣ್ಣನವರು ಈ ನೆಲದ ಸಾಂಸ್ಕೃತಿಕ ನಾಯಕರೆಂದು ನಾಡವರು ಒಪ್ಪುವಂತಾಗಿದೆ.
    ಇದು ಬಸವಾದಿ ಶರಣರ ವಿಚಾರಗಳ ಹಿನ್ನೆಲೆಯಲ್ಲಿ ಸಾಧ್ಯವಾಗಿದೆಯೇ ಹೊರತು ಕೇವಲ ಯಾರೋ ಪ್ರಸ್ತಾಪಿಸಿದ ಕಾರಣಕ್ಕಾಗಿ ಅಲ್ಲ.
    ಇಂತಹ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಿದೆ. ಈ ಜವಾಬ್ದಾರಿಯ ಕುರಿತು ಡಾ. ಟಿ ಆರ್ ಚಂದ್ರಶೇಖರ್ ಅವರ ಮೇಲಿನ ಟಿಪ್ಪಣಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ ಹಾಗೂ ಅನುಸರಿಸಬೇಕಿದೆ. ತತ್ವಗಳನ್ನು ಬದುಕುವ ಬದುಕಿಸುವ ನಿಟ್ಟಿನಲ್ಲಿ ಈಗಾಗಲೇ ಮಠಾಧೀಶರು ಘಟ್ಟಿಯಾದ ನಿರ್ಧಾರ ಕೈಕೊಂಡಿದುದು ಸ್ವಾಗತಾರ್ಹ ನಿಲುವು. ಉಳಿದ ಮಠಾಧೀಶರು ಅನವಶ್ಯಕ ಪೀಠ ಪ್ರತಿಷ್ಠೆಗೆ ಒಳಗಾಗದೇ ಬಸವಬೋಧಿತ ಲಿಂಗಾಯತವನ್ನು ಬದುಕುವ ನಿಟ್ಟಿನಲ್ಲಿ ಯಾವುದೇ ಬಗೆಯ ರಾಜಿ ಮರ್ಜಿ ಹಂಗಿಗೆ ಒಳಗಾಗದೇ ಲಿಂಗಾಯತ ಮಠಾಧೀಶರೊಂದಿಗೆ ಕೈಜೋಡಿಸಿ ಶರಣಸಮಾಜದ ಗೌರವವನ್ನು ಹೆಚ್ಚಿಸಬೇಕಿದೆ.

    ಇಲ್ಲದಿದ್ದರೆ ಲಿಂಗಾಯತ ಸಮುದಾಯದ ಮುಂದೆ ಮಠಗಳು ಮತ್ತು ಲಿಂಗಾಯತ(ಬಸವ) ತತ್ತ್ವಗಳ ಮಧ್ಯೆ ಆಯ್ಕೆ ಪ್ರಶ್ನೆ ಉದ್ಭವಿಸಿ ಬಸವತತ್ತ್ವವನ್ನೇ ಸಮುದಾಯ ಆತ್ಯಂತಿಕವಾಗಿ ಒಪ್ಪಿಕೊಳ್ಳುತ್ತದೆ. ಬಸವರ ವಚನ ಜನಮಾನಸವನ್ನು ಒಪ್ಪಿಸುತ್ತದೆ.

    ಸಂದರ್ಭಕ್ಕೆ ಸರಿಯಾಗಿ ವಿಷಯ ಮಂಡಿಸಿದ ಸರ್ ಗೆ ಪ್ರೀತಿ ಗೌರವದ ಶರಣು ಗಳು

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು