‘ಲಿಂಗಾಯತ ರಡ್ಡಿ’ ಎಂದು ಬರೆಸಲು ರಡ್ಡಿ ಸಮಾಜದ ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಜಾಗೃತಿ ಮೂಡಿಸಲು ತೀರ್ಮಾನ

ಹುಬ್ಬಳ್ಳಿ

ಮುಂದಿನ ದಿನಗಳಲ್ಲಿ ನಡೆಯಲಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ‘ಲಿಂಗಾಯತ ರಡ್ಡಿ’ ಎಂದು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಗೌರವ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ‘ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯಮಟ್ಟದ ಪದಾಧಿಕಾರಿಗಳ ಮತ್ತು ಮುಖಂಡರ ಕಾರ್ಯಕಾರಿಣಿ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರಕಾರ ಇದೇ ಸೆ.22 ರಿಂದ ಎಲ್ಲಾ ಸಮುದಾಯಗಳ ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ಮತ್ತು ಇನ್ನಿತರ ಸುಮಾರು 60 ಮಾಹಿತಿಯ ಜನಗಣತಿ ಆರಂಭಿಸಲಿದೆ. ಸರಕಾರದ ಅಧಿಕಾರಿಗಳು ಪ್ರತಿ ಮನೆಗೆ ಬಂದು ನಿಗದಿಪಡಿಸಿದ ನಮೂನೆಯಲ್ಲಿ ಮಾಹಿತಿ ಪಡೆಯುತ್ತಾರೆ.

ಅಲ್ಲದೇ ಕುಟುಂಬದ ವೈಯಕ್ತಿಕ ಸ್ಥಿತಿಗತಿಗಳ ವಿವರಗಳನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಕಾಲಂನಲ್ಲಿ ಲಿಂಗಾಯತ ರಡ್ಡಿ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ವಿವರಿಸಿದರು.

ಜಾಗೃತಿ ಮೂಡಿಸಲು ತೀರ್ಮಾನ:
ಸಮೀಕ್ಷೆಯ ಜಾತಿ ಕಾಲಂನಲ್ಲಿ ‘ಲಿಂಗಾಯತ ರಡ್ಡಿ’ ಎಂದೇ ನಮೂದಿಸುವಂತೆ ಜಾಗೃತಿ ಮೂಡಿಸಲು ಹಾಗೂ ಸಾಧ್ಯವಾದರೆ ಜನಪ್ರತಿನಿಧಿಗಳು, ಸಮಾಜದ ಪ್ರಮುಖರು ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಈ ನಿಟ್ಟಿನಲ್ಲಿ ಮನದಟ್ಟು ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದರು.

ಹಾಸ್ಟೆಲ್, ಬ್ಯಾಂಕ್ ತೆರೆಯುವ ಚಿಂತನೆ:
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಹುಬ್ಬಳ್ಳಿಯನ್ನು ಕೇಂದ್ರವಾಗಿರಿಸಿಕೊಂಡು ಹಮ್ಮಿಕೊಳ್ಳಲು ಸಮಾಜ ಸಂಘಟನೆ ಜತೆಗೆ ವಿವಿಧ ಯೋಜನೆಗಳನ್ನು ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಡ್ಡಿ ಸಮಾಜದ ಬ್ಯಾಂಕ್ (ಸಹಕಾರ ಸಂಘ) ಆರಂಭಿಸುವ ಯೋಜನೆ ಇದೆ.

ಷೇರು ಬಂಡವಾಳ ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಶಿಕ್ಷಣಕ್ಕೆ ಪೂರಕವಾಗಿ ಸಮಾಜದ ಬಡ ವಿದ್ಯಾರ್ಥಿ ಗಳಿಗಾಗಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಉಚಿತ ಹಾಸ್ಟೆಲ್ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಶಾಸಕರಾದ ಹಂಪನಗೌಡ ಬಾದರ್ಲಿ, ಅಪ್ಪಾಜಿ ನಾಡಗೌಡ, ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ದೊಡ್ಡನಗೌಡ ಪಾಟೀಲ, ಕೆಸರಟ್ಟಿ ವೀರಪ್ಪ, ಮಾಜಿ ಸಚಿವ ಎಸ್.ಆರ್. ಪಾಟೀಲ, ಶ್ರೀನಿವಾಸ ರೆಡ್ಡಿ, ಡಾ. ಮಹಿಪಾಲ ಜಾಗೀರದಾರ, ವಕೀಲ ಗುರಡ್ಡಿ ಸೇರಿದಂತೆ ಅನೇಕರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
1 Comment
  • ಶ್ಲಾಘನೀಯ, ನಾನು ಕೂಡ ಒಬ್ಬ ಲಿಂಗಾಯತ ರಡ್ಡಿ. ೧೨ನೇ ಶತಮಾನದ ಶರಣರ ನೆರಳು ಹೇಮರಡ್ಡಿ ಮಲ್ಲಮ ಹಾಗೂ ಯೋಗಿ ವೇಮನ ಮೇಲೆ ಬಿದಿದ್ದರಿಂದ, ಮಲ್ಲಮ್ಮ ತಾಯಿ ನಡೆದು ತೋರಿದಳು, ವೇಮನ ತಂದೆ ನುಡಿದು ತೋರಿದ. ಹೀಗಾಗಿ ಲಿಂಗಾಯತ ರಡ್ಡಿಯಲ್ಲಿ ಬರುತಕ್ಕಂತ, ನರವಾಲರಡ್ಡಿ, ಪಾಕನಾಕರಡ್ಡಿ, ಹೇಮರಡ್ಡಿ, ವಿಭೂತಿರಡ್ಡಿ, ಚಿಟುಮರಡ್ಡಿ, ಮಟಮಟರಡ್ಡಿ, ಲಾಳಗೊಂಡ ನಮಗೆಲ್ಲರಿಗೂ ವಿಶ್ವಗುರು ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮವೆ ಸೂಕ್ತ ಆಯ್ಕೆ ಆಗಿದೆ.

Leave a Reply

Your email address will not be published. Required fields are marked *