ಸರಳ ವಿವಾಹಗಳೇ ಸುಂದರ ಬದುಕಿಗೆ ಮುನ್ನುಡಿ: ಬಸವಕುಮಾರ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

“ಜೀವನದಲ್ಲಿ ಒಳ್ಳೆ ಕೆಲಸ ಆರಂಭಿಸಿದರೆ ಅದು ಚರಿತ್ರೆಯಾಗುತ್ತದೆ. ಬಡವ ಸಾಲದ ಸುಳಿಯಲ್ಲಿ ಸಿಲುಕಿ ಮದುವೆಯಾಗುವುದಕ್ಕಿಂತ ಸ್ವಾಮಿಗಳ ಸಮ್ಮುಖದಲ್ಲಿ ಮದುವೆಯಾಗುವವರು ನಿಜವಾದ ಸಹೃದಯವುಳ್ಳ ಶ್ರೀಮಂತರು” ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಬೃಹನ್ಮಠದಲ್ಲಿ ನಡೆದ ಮೂವತ್ತೊಂದನೇ ವರ್ಷದ ಒಂಬತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೭ ಜೋಡಿಗಳ ವಿವಾಹ ನೆರವೇರಿಸಿ, ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕಷ್ಣನ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಶ್ರೀಗಳು, ದುಡಿಯದೆ ಇರುವ ದುಡ್ಡು ನಮಗೆ ಶ್ರೀಮಂತಿಕೆ ಕೊಡಬಹುದು. ಆದರೆ ಅದರಿಂದ ನೆಮ್ಮದಿ ಸಿಗುವುದಿಲ್ಲ. ಚಿತ್ರದುರ್ಗದವರೇ ಆದ ಎಸ್. ನಿಜಲಿಂಗಪ್ಪನವರು ತಮ್ಮ ಹೆಸರಿಗೆ ಏನೂ ಮಾಡಿಕೊಳ್ಳದೆ ಇಂದು ಶ್ರೇಷ್ಠ ವ್ಯಕ್ತಿಗಳಾಗಿ ಪ್ರಾಮಾಣಿಕ ಜನಸೇವಕರಾಗಿ ನಮಗೆಲ್ಲ ಮಾದರಿಯಾಗಿದ್ದಾರೆ. ಇಂತಹ ನ್ಯಾಯಯುತ ಬದುಕು ನಮ್ಮದಾಗಬೇಕು” ಎಂದರು.

“ಕಷ್ಟಪಟ್ಟು ದುಡಿದ ದುಡ್ಡು ನಮ್ಮನ್ನು ಮೇಲೆತ್ತುತ್ತದೆ. ಬಸವಣ್ಣನವರು ಹೇಳುವಂತೆ ಪರಧನಕ್ಕೆ ಅಂಜಬೇಕು. ಯಾರೂ ಸಹ ಹಣ, ಅಧಿಕಾರ, ಬಂಗಾರ ತಿನ್ನಲು ಸಾಧ್ಯವಿಲ್ಲ. ಹಸಿವಾದಾಗ ಅನ್ನವನ್ನೇ ಸೇವಿಸಬೇಕು. ನವ ವಧು-ವರರು ಸತ್ಯಶುದ್ಧ ಕಾಯಕ ಮಾಡುತ್ತ ಸರಳವಾದ ಜೀವನ ಮಾಡಬೇಕು. ಹಣವಿದ್ದವರು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ನಮ್ಮ ಕಾಯಕವನ್ನು ನಾವು ನಿರ್ವಹಿಸುತ್ತ ನೆಮ್ಮದಿಯನ್ನು ಕಾಣಬೇಕು” ಎಂದರು.

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, “ರಾಧಾಕಷ್ಣನ್ ಅವರು ಮೂಲತಃ ಶಿಕ್ಷಕರು. ಆದರೆ ಮುಂದೆ ಅವರು ಭಾರತದ ರಾಷ್ಟ್ರಪತಿಯಾಗುತ್ತಾರೆ. ಶಿಕ್ಷಕರು ನಮ್ಮ ಜೀವನದ ಶಿಲ್ಪಿಗಳು. ಪ್ರತಿಯೊಬ್ಬರ ಬದುಕನ್ನು ಉದ್ಧರಿಸುವವರು. ಶಿಕ್ಷಕ ವೃತ್ತಿ ಪವಿತ್ರವಾದುದು. ವಿದ್ಯೆಯನ್ನು ಪ್ರತಿಯೊಬ್ಬರು ಕಲಿಯಬೇಕು. ಮಕ್ಕಳನ್ನು ತಿದ್ದಿ ತೀಡಿ ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ” ಎಂದರು.

“ಶಿಕ್ಷಕ ತುಂಬಾ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಂದ ಅತ್ಯಂತ ಪ್ರೀತಿಯ ಗೌರವವನ್ನು ಸಂಪಾದಿಸಲು ಸಾಧ್ಯ. ಶಿಕ್ಷಣವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಶಿಕ್ಷಣದಿಂದ ತಿಳುವಳಿಕೆ ಬರುತ್ತದೆ. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜ್ಞಾನವೇ ಶಿಕ್ಷಣ” ಎಂದು ಹೇಳಿದರು.

ಶ್ರೀ ಮುರುಘೇಂದ್ರ ಸ್ವಾಮಿಗಳು ವೇದಿಕೆಯಲ್ಲಿದ್ದರು. ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಚಿನ್ಮಯ ದೇವರು ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *