ಬಳ್ಳಾರಿ
ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ನೇತೃತ್ವದಲ್ಲಿ ನಗರದ ಅಲ್ಲಂ ಸುಮಂಗಳಮ್ಮ ಮಹಿಳಾ ವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಹಂದಿಗುಂದದ ಶಿವಾನಂದ ಸ್ವಾಮಿಗಳು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.

ಬಸವಾದಿ ಶರಣರ ಪ್ರಖರ ಚಿಂತನೆಯ ಬೆಳಕು ಪ್ರಸ್ತುತ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವಷ್ಟು ಸಾಮಾಜಿಕ ಕಳಕಳಿಯನ್ನು, ಮಾನವೀಯ ಮೌಲ್ಯಗಳನ್ನು ಹೊಂದಿವೆ. ಹೀಗಾಗಿ 12ನೇ ಶತಮಾನದ ಶರಣರ ವಚನ ಸಾಹಿತ್ಯ ಎಂದೆಂದಿಗೂ ಜೀವಪರ ಧೋರಣೆಯನ್ನು ಪ್ರತಿಪಾದಿಸುತ್ತಾ ತನ್ನ ಜೀವಂತಿಕೆಯನ್ನು ಉಳಿಸಿ ಕೊಂಡಿದೆ ಎಂದು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕರ್ನಾಟಕ ಸರ್ಕಾರವು ಬಸವಣ್ಣನವರ ಆದರ್ಶಮಯ ಚಿಂತನೆಗಳ ಮಹತ್ವವನ್ನು ಅರಿತು ಅದನ್ನು ನಿರಂತರವಾಗಿ ಕಾಪಿಟ್ಟು ಕಾಯ್ದುಕೊಳ್ಳುವ ಸದುದ್ದೇಶದಿಂದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಲ್ಕಿಯ ಕಿರಿಯ ಶ್ರೀಗಳಾದ ಗುರು ಬಸವ ಪಟ್ಟದ್ದೇವರು, ಶಿವಾನಂದ ಸ್ವಾಮಿಗಳು ಹುಲಸೂರು, ಬಸವಲಿಂಗ ಸ್ವಾಮೀಜಿ ನವಲಗುಂದ, ಉರುವಕೊಂಡ ಕರಿಬಸವರಾಜೇಂದ್ರ ಸ್ವಾಮಿಗಳು, ಬೆಳ್ಳೇರಿ ಬಸವಾನಂದ ಸ್ವಾಮಿಗಳು ಬಸವ ಕಲ್ಯಾಣದ ಬಸವದೇವರು, ಸಂಡೂರಿನ ವಿರಕ್ತಮಠದ ಪ್ರಭುಸ್ವಾಮಿಗಳು, ಬಸವ ಭೂಷಣ ಸ್ವಾಮೀಜಿ, ಪ್ರೇಮಕ್ಕ ಅಂಗಡಿ, ಎನ್.ಜಿ. ಬಸವರಾಜಪ್ಪ, ಕೆ. ನಾಗನಗೌಡ, ಕೆ.ವಿ. ರವಿಶಂಕರ, ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಕೆ. ವಿಜಯೇಂದ್ರ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೈಕ್ ರ್ಯಾಲಿ
ಬಳ್ಳಾರಿಯಲ್ಲಿ ಇಂದು ಜರುಗುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಉತ್ಸವದ ಅಂಗವಾಗಿ ಮೋಕಾ ರಸ್ತೆಯ ಕೆ.ಆರ್.ಎಸ್. ಫಂಕ್ಷನ್ ಹಾಲ್ ಹತ್ತಿರ ಬಳ್ಳಾರಿ ನಗರಕ್ಕೆ ರಥವನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಅನೇಕ ಜನಪ್ರತಿನಿಧಿಗಳು, ಗಣ್ಯರು ಮತ್ತು ಶರಣತತ್ವ ಅಭಿಮಾನಿಗಳು ರಥವನ್ನು ಅಭಿಮಾನದಿಂದ ಬರಮಾಡಿಕೊಂಡು, ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮುಖಾಂತರ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.