ಸಿಂಧನೂರು
ಬಸವ ಕೇಂದ್ರದಲ್ಲಿ ಏರ್ಪಡಿಸಿದ್ದ ಮಲ್ಲಿನಾಥ ಶರಣರ ನೆನಹು ಕಾರ್ಯಕ್ರಮ ಹಾಗೂ ಲಿಂಗೈಕ್ಯ ಶರಣಪ್ಪ ಸಾಹುಕಾರ, ಶಿವನಮ್ಮ ಸಾಹುಕಾರ, ಬ್ಯಾಲಿಹಾಳ ಇವರ ನೆನಪು ಕಾರ್ಯಕ್ರಮ ಜರುಗಿತು.
ಅನುಭಾವಿಗಳಾಗಿ ಅಮರೇಶಪ್ಪ ಮರಕಟ್ಟು ಅವರು ಮಾತನಾಡುತ್ತಾ, ವಂಚನೆ ಇಲ್ಲದುದೆ ಭಕ್ತಿ. ದೇವರಿಗೆ ಅಭಿಷೇಕ ಮಾಡಿ ಫಲ ಕೇಳುವುದು ವಂಚನೆಯ ಭಕ್ತಿ. ಮಣ್ಣು, ಹೊನ್ನು, ಹೆಣ್ಣಿನ ಮೇಲಿನ ನಿರ್ಮೋಹವೇ ನಿಜವಾದ ಭಕ್ತಿ. ವ್ಯಕ್ತಿ ತನ್ನ ಜೀವನದಲ್ಲಿ ಈ ಮೂರು ವಸ್ತುಗಳ ಮೇಲೆ ಅತಿಯಾದ ಮೋಹವಿಟ್ಟುಕೊಂಡು ಬದುಕುವುದು ದೇವರಿಗೆ ಮಾಡುವ ದ್ರೋಹವಾಗುತ್ತದೆ.
ಮನ ಮತ್ತು ದೃಷ್ಟಿಯನ್ನು ಏಕಾಗ್ರತೆಗೊಳಿಸಿ ಲಿಂಗದಲ್ಲಿ ತಲ್ಲೀನರಾಗಿ ಆರಾಧಿಸುವುದೇ ಭಕ್ತಿ. ದೇವರಲ್ಲಿ ನಾವು ಸದ್ಭಾವನೆ ಕೊಡುವಂತೆ ಬೇಡಿಕೊಳ್ಳಬೇಕು. ಅವನು ಕೊಟ್ಟ ವಸ್ತುಗಳನ್ನು ಅವನಿಗೆ ಸಮರ್ಪಿಸುವ, ಆಮಿಷ ತೋರಿಸುವ ಮಾರ್ಗ ಭಕ್ತಿ ಎನಿಸುವುದಿಲ್ಲ. ಸನಾತನಿಗಳು ನವವಿಧ ಭಕ್ತಿಯನ್ನು ಅನುಸರಿಸುತ್ತಾರೆ. ನಮ್ಮದು ಷಡ್ವಿದ ಭಕ್ತಿ.

ಬಸವಣ್ಣನವರು ಬಂದಮೇಲೆ ಭಕ್ತಿಯ ಮಾರ್ಗವೇ ಬದಲಾಯಿತು. ಅಷ್ಟಾವರಣಗಳಲ್ಲಿ ವ್ಯವಹಾರದ ಭಕ್ತಿಯಿಲ್ಲ. ನವವಿಧ ಭಕ್ತಿಯಲ್ಲಿ ವ್ಯವಹಾರವಿದೆ. ಭಕ್ತಿಯು ಅಪೇಕ್ಷೆಯಿಂದ ಕೂಡಿರಬಾರದು. ಗತಿ, ಮತಿ, ಫಲ, ಮುಕ್ತಿ ಬಯಸಿ ಮಾಡುವ ಭಕ್ತಿ ಭಕ್ತಿಯಲ್ಲ. ಕಾಗೆ ಹೊನ್ನ ಬಣ್ಣಕ್ಕೆ ಆಕಾಶಕ್ಕೆ ಹಾರಿದಂತೆ ವಂಚನೆಯ ಭಕ್ತಿ ಎಂದು ನುಡಿದರು.
ನಿರುಪಾದಪ್ಪ ವಕೀಲರು ಗುಡಿಹಾಳ್ ಮಾತನಾಡುತ್ತಾ, ಹಿರಿಯರ ನೆನಪು ನಮ್ಮನ್ನು ಸದಾ ಜಾಗೃತವಾಗಿ ಇಟ್ಟಿರುತ್ತದೆ. ಅವರನ್ನು ಆಗಾಗ ನೆನಪಿಸಿಕೊಳ್ಳುವ ಮೂಲಕ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. ನಮ್ಮ ಬದುಕಿಗಾಗಿ, ಶಿಕ್ಷಣಕ್ಕಾಗಿ ನಮ್ಮ ಹಿರಿಯರು ತಮ್ಮ ಎಲ್ಲಾ ಇಷ್ಟಾರ್ಥಗಳನ್ನ ಬದಿಗಿಟ್ಟು ನಮ್ಮ ಶ್ರೇಯೋಭಿವೃದ್ಧಿಗೆ ಶ್ರಮಿಸಿರುತ್ತಾರೆ. ಹಾಗಾಗಿ ನಮಗೆ ಅವರೇ ದೇವರುಗಳು.
ಇಂದಿನ ಹಿರಿಯ ಜೀವಿಗಳ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ವೃದ್ಧಾಶ್ರಮಗಳು ಅನಾಥಾಶ್ರಮಗಳು ಎಲ್ಲಾ ಕಡೆ ತಲೆ ಎತ್ತಿ ನಿಂತಿವೆ ಕಾರಣ ಇಂದಿನ ಪೀಳಿಗೆಯಲ್ಲಿ ಮಾನವೀಯತೆಯ ಕೊರತೆ ಎದ್ದು ಕಾಣುತ್ತಿದೆ. ನಾವು ಕ್ಷಣಿಕ ಸುಖದ ಬೆನ್ನು ಹತ್ತಿದ್ದೇವೆ. ಸಂಸಾರದ ಸುಖ ಎಂಬುದು ನಾಯಿ ಮಾಡುವ ನಿದ್ದೆಯಂತೆ.
ನಿದ್ದೆಯಲ್ಲಿ ಸುಖ, ಅಧಿಕಾರ, ಏನೆಲ್ಲ ಆಡಂಬರವನ್ನ ಕಂಡು ಎಚ್ಚರವಾದಾಗ ಪುನಃ ಅದೇ ಯಥಾವತ್ತಾದ ಜೀವನ. ಹಸಿವುಗೊಂಡವನಿಗೆ ಅನ್ನ ನೀಡಿ. ಬಾಯಾರಿಕೆಯಾದವನಿಗೆ ನೀರು ನೀಡಿದವನೇ, ನಿಜವಾದ ದೇವರು ಎಂದು ದಾಸಿಮಯ್ಯನವರು ತಮ್ಮ ವಚನದಲ್ಲಿ ಹೇಳಿದ್ದಾರೆ.
ನಾವೆಲ್ಲರೂ ಶರಣರ ವಚನಗಳನ್ನ ಆಲಿಸುವ ಮೂಲಕ, ಅನುಸರಿಸುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಾಗಿದೆ ಎಂದು ನುಡಿದರು.

ಅಮರೇಶಪ್ಪ ಗಡಹಳ್ಳಿ ಸೋಮಸಾಗರ ಇವರು ತಂದೆ-ತಾಯಿಯರ ಮಹತ್ವದ ಕುರಿತು ಮಾತನಾಡುತ್ತಾ, ತಂದೆಯ ನೆನೆದರೆ ತಂಗಾಳ ಬಿಸಿಯಾಯಿತು, ಗಂಗಾದೇವಿ ನನ್ನ ಹಡದವ್ವನ ನೆನೆದರೆ ಮಾಸಿದ ತಲೆಯೂ ಮಡಿಯಾಯ್ತು ಎಂದು ಜನಪದರು ತಂದೆ ತಾಯಿಗಳ ಮಹತ್ವದ ಕುರಿತು ಹೇಳಿದ್ದಾರೆ.
ಆಸೆ ಇಲ್ಲದುದೇ ವೈರಾಗ್ಯ. ಆಸೆ ಅಗತ್ಯತೆಗೆ ತಕ್ಕಷ್ಟು ಇರಬೇಕು. ಮಿಕ್ಕಿದ್ದು ವೈರಾಗ್ಯವಾಗಬೇಕು. ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯನ್ನು ಕಟ್ಟಿ ತನ್ನ ನೂಲಿನಲ್ಲಿ ತಾನು ಸುತ್ತಿಕೊಂಡು ಸಾಯುತ್ತದೆ ಹಾಗೆಯೇ ನಾವು ಮನ ಬಂದಿದ್ದನ್ನು ಬಯಸಿ ಅದರಲ್ಲಿ ಬಿದ್ದು ಒದ್ದಾಡುತ್ತಿದ್ದೇವೆ.
ನಮ್ಮ ಮನದ ದುರಾಸೆಯನ್ನು ದೂರ ಮಾಡಿ ಚೆನ್ನಮಲ್ಲಿಕಾರ್ಜುನ ತಂದೆಯೇ ನಿನ್ನತ್ತ ನನ್ನ ಸೆಳೆದುಕೋ ಎಂದು ಅಕ್ಕ ಮಹಾದೇವಿ ತಾಯಿ ದುರಾಸೆಯ ಕುರಿತು ವಿಡಂಬಸಿದ್ದಾರೆ. ವೈರಾಗ್ಯವೆಂದರೆ ಸನ್ಯಾಸತ್ವವಲ್ಲ. ಸಂಸಾರದಲ್ಲಿ ಇದ್ದುಕೊಂಡು ಹೆಣ್ಣು ,ಹೊನ್ನು, ಮಣ್ಣಿನ ಮೇಲಿನ ವ್ಯಾಮೋಹದಿಂದ ದೂರವಿರುವುದು. ಆಸೆಯ ವಿಷಯದಲ್ಲಿ ಚಿಕ್ಕ ಪ್ರಾಣಿ ಇರುವೆಯಂತ ಜೀವನ ನಮ್ಮದಾಗಬಾರದು, ಸ್ಥೂಲ ಕಾಯದ ಆನೆಯಂತ ಜೀವನ ನಮ್ಮದಾಗಬೇಕು.
ಇರುವೆ ಆರು ತಿಂಗಳಿಗೆ ಆಗುವಷ್ಟು ಆಹಾರವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಆನೆ ಆ ದಿನದ ಊಟವನ್ನು ಆ ದಿನವೇ ಮುಗಿಸಿ ನಾಳೆಯ ಬಗ್ಗೆ ಯೋಚಿಸುವುದಿಲ್ಲ ಹಾಗೆ ನಮ್ಮ ಜೀವನ ಇರಬೇಕು. ಎಂದು ನುಡಿದರು.
ರಮೇಶಕುಮಾರ ಅವರು ಮಾತನಾಡುತ್ತಾ, ಜಯಂತಿಗಳು ಹಾಗೂ ನೆನಪು ಕಾರ್ಯಕ್ರಮಗಳು ನೆಪಕ್ಕೆ ಮಾತ್ರ, ಆ ಮೂಲಕ ಧರ್ಮ ಜಾಗೃತಿ ಮೂಡಿಸಬೇಕು. ಇಂದಿನ ಯುವ ಪೀಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮರೆತು ಹೋಗಿದ್ದಾರೆ ಬಸವಾದಿ ಶರಣರ ವಚನಗಳ ಮಾರ್ಗದರ್ಶನ ಅವರಿಗೆ ನೀಡಬೇಕಾದ ಜವಾಬ್ದಾರಿ ಹಿರಿಯರ ಮೇಲೆ ಇದೆ.
ಅರ್ಥವಿಲ್ಲದ ಹಬ್ಬಗಳು ಹಾಗೂ ಗ್ರಹಣಗಳ ಬಗೆಗೆ ಇರುವ ತಪ್ಪು ಕಲ್ಪನೆಗಳನ್ನು ನಾವು ಹೋಗಲಾಡಿಸುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ನುಡಿದರು.
ಲಿಂಗರಾಜ ಅಂಕುಶದೊಡ್ಡಿ ಅವರು ಮಾತನಾಡುತ್ತಾ, ಆಧ್ಯಾತ್ಮದಿಂದ ಮಾತ್ರ ಶಾಂತಿ. ವೈದ್ಯನೆ ಆಗಲಿ, ಇಂಜಿನಿಯರೆ ಆಗಲಿ ಯಾರೇ ಆಗಿರಲಿ ಅವರು ದುಡ್ಡು ಮತ್ತು ಸಂಪತ್ತನ್ನು ಗಳಿಸಬಹುದು, ಅದರಿಂದ ನೆಮ್ಮದಿಯ ಜೀವನ ಇರುತ್ತದೆ ಎಂದು ಹೇಳಲಿಕ್ಕೆ ಆಗದು. ಅವರು ಆಧ್ಯಾತ್ಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನೆಮ್ಮದಿಯಾಗಿರಲು ಸಾಧ್ಯ. ಅದಕ್ಕಾಗಿ ಶರಣರ ವಿಚಾರಗಳನ್ನು, ಚಿಂತಕರ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದು ಹೇಳಿದರು.
ಹಿರಿಯರಾದ ತಿಮ್ಮನಗೌಡ ಚಿಲ್ಕರಾಗಿ ಅವರು ಮಾತನಾಡುತ್ತ, ವಿದ್ಯಾರ್ಥಿ ಸಮೂಹ ಸಂಸ್ಕಾರವಂತರಾಗಿ ವಿದ್ಯ ಕಲಿಯಬೇಕು, ಹಾಗಾದಾಗ ಅವರು ಪರಿಪೂರ್ಣ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ. ಆಧ್ಯಾತ್ಮದಲ್ಲಿ ಸಾಧನೆ ಮಾಡಿರುವವರೆಲ್ಲರೂ ಚಿರಂಜೀವಿಗಳಾಗಿ ಈ ಭೂಮಿಯ ಮೇಲೆ ಇನ್ನು ಇದ್ದಾರೆ.
ಬುದ್ಧ ಬಸವಾದಿ ಶರಣರು ಇವತ್ತಿಗೂ ಬದುಕಿದ್ದಾರೆ. ಅವರ ವಿಚಾರಗಳು ಅವರನ್ನು ಜೀವಂತವಾಗಿ ಇರಿಸಿವೆ.ಅದಕ್ಕೆ ಕಾರಣ ಅವರು ಆಯ್ಕೆ ಮಾಡಿಕೊಂಡ ಆಧ್ಯಾತ್ಮದ ಬದುಕು. 12ನೇ ಶತಮಾನದ ಶಿವಶರಣ ಉರಿಲಿಂಗ ಪೆದ್ದಿಗಳು ಆರಂಭದ ಬದುಕಿನಲ್ಲಿ ದುರ್ಮಾರ್ಗದಲ್ಲಿ ನಡೆಯುತ್ತಿದ್ದಾಗ ಬಸವಣ್ಣನವರ ಸಾಮಿಪ್ಯದಿಂದ ಮಹಾನ್ ಶಿವಶರಣರಾದರು. ಶರಣರ ಹಾಗೂ ವಚನಗಳ ಹತ್ತಿರಕ್ಕೆ ನಾವು ಹೋದರೆ ನಾವು ಕೂಡ ಲೋಹದ ಬಲದಿಂದ ಅವಲೋಹದ ಕೇಡು ಎನ್ನುವಂತೆ ಬದಲಾಗುತ್ತೇವೆ.
ನೂರಾರು ದೇವರುಗಳು ದೇವರಲ್ಲ, ಸೃಷ್ಟಿಕರ್ತನೊಬ್ಬನೇ ದೇವರು. ಓಂ ನಮಃ ಶಿವಾಯ ಎಂಬುದೇ ಮಂತ್ರ. ಎನ್ನುವುದನ್ನು ನಾವು ಅರಿತು ಜೀವಿಸಬೇಕು. ಮಾತು ಬಲ್ಲಾತ, ಗೀತ ಬಲ್ಲಾತ ಜಾಣನಲ್ಲ. ಶಿವ ಚಿಂತೆ, ಶಿವಜ್ಞಾನ ಇದ್ದಾತ ಮಾತ್ರ ಜಾಣ. ಭಕ್ತಿ ಎಂದರೆ ಪ್ರೀತಿ. ಸಕಲ ಜೀವಿಗಳಿಗೆ ಪ್ರೀತಿ ತೋರಿಸಿದಾತ ಬಸವಣ್ಣ ಹಾಗಾಗಿ ಆತನನ್ನ ಭಕ್ತಿ ಭಂಡಾರಿ ಎನ್ನುತ್ತೇವೆ.
ಮನುಷ್ಯ ಮನುಷ್ಯರಲ್ಲಿ ಮತ್ತು ದೇವರಲ್ಲಿ ಪ್ರೀತಿಯಿಂದ ವರ್ತಿಸಬೇಕು ಅದು ಭಕ್ತಿಯಾಗಿ ಉಳಿಯುತ್ತದೆ. ಒಳ್ಳೆಯವರು ಒಳ್ಳೆಯವರಾಗಿ ಸುಮ್ಮನೆ ಕೂಡುವುದು ತಪ್ಪೇ. ಒಳ್ಳೆಯವರು ಒಳ್ಳೆಯದನ್ನು ಮಾಡಬೇಕು ಅದರಿಂದ ಮಾತ್ರ ನಾವು ಸಮಾಜಕ್ಕೆ ಏನೋ ಒಂದು ಉಡುಗೊರೆಯನ್ನು ಕೊಟ್ಟಂತಾಗುತ್ತದೆ. ನಮಗೆ ದುರಾಸೆ ಇರಬಾರದು. ಸದಾಸೆ ಇರಬೇಕು. ಅತಿಯಾಸೆ, ದುರಾಸೆ ನಮನ್ನು ಸರಿದಾರಿಗೆ ಒಯ್ಯಲಾರವು ಎಂದು ಅನುಭಾವ ಹಂಚಿಕೊಂಡರು.
ಹಿರಿಯರಾದ ಗುಂಡಮ್ಮ ಲಿಂಗೈಕ್ಯ ನಾಗಣ್ಣ ಕಾನೀಹಾಳ್ ಹಾಗೂ ಗಂಗಮ್ಮ ಲಿಂಗೈಕ್ಯ ವೀರಭದ್ರಪ್ಪ ಕುರುಕುಂದ ಇವರಿಗೆ ಗೌರವ ಶ್ರೀರಕ್ಷೆಯನ್ನು ನೀಡಿ ಗೌರವಿಸಲಾಯಿತು.
ಸಿದ್ದರಾಮಪ್ಪ ಸಾಹುಕಾರ್, ನಾಗಭೂಷಣ ನವಲಿ, ಬಸವರಾಜಪ್ಪ ಕೋಳಿಹಾಳ್, ಚಂದ್ರಗೌಡ ಹರೇಟನೂರು, ಶರಣಬಸವ ನೀರಮಾನ್ವಿ, ದೇವಣ್ಣ ಸಾಹುಕಾರ್ ಹಾಗೂ ನೂರಾರು ಶರಣ ಶರಣೆಯರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಚನ ಪ್ರಾರ್ಥನೆಯನ್ನು ನೀಲಮ್ಮ ವಗರನಾಳ, ಪ್ರಾಸ್ತಾವಿಕವಾಗಿ ಬಸವಲಿಂಗಪ್ಪ ಬಾದರ್ಲಿ, ನಿರೂಪಣೆಯನ್ನು ಮಲ್ಲಿಕಾರ್ಜುನ ವಗರನಾಳ ನೆರವೇರಿಸಿದರು.