ಹರಿಹರ
ತಾಲೂಕು ಮಲೆಬೆನ್ನೂರಿನ ರಾಜಕುಮಾರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸವ ಮಂಟಪದ ಆವರಣದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನ ವಾಹನಕ್ಕೆ ಸಂಭ್ರಮದಿಂದ ಚಾಲನೆ ನೀಡಲಾಯಿತು.
ಅಭಿಯಾನ ವಾಹನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಪ್ರಮುಖರಾದ ಆವರಗೆರೆ ರುದ್ರಮನಿ, ಪ್ರಚಾರ ಸಮಿತಿಯ ಕಡ್ಲೆಬಾಳು ಪ್ರಕಾಶ್, ವಿ.ಟಿ. ಮಂಜುನಾಥ, ಕುಂದೂರು ಬಸವರಾಜಪ್ಪ ಅವರು ಭಾನುವಾರ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಗಳಲ್ಲಿ ಪ್ರಚಾರ ಅಭಿಯಾನ ನಡೆಸಿ ಹರಿಹರ ತಾಲೂಕಿಗೆ ಸೋಮವಾರ ಬೆಳಗ್ಗೆ ಆಗಮಿಸಿದರು.
ಶರಣ ಅವರಗೆರೆ ರುದ್ರಮನಿ ಮಾತನಾಡಿ, 12ನೇ ಶತಮಾನದ ಶರಣರು ಅಕ್ಷರ ಕ್ರಾಂತಿಯ ಜೊತೆಗೆ ವಿಚಾರ ಕ್ರಾಂತಿಯನ್ನು ಬೆಳೆಸಿ ನಾಡಿನಲ್ಲಿ ಮನೆ ಮಾತಾಗಿದ್ದಾರೆ. ಶರಣರು ಕಾಯಕ ಮಾಡುವಾಗ ಇಲ್ಲದ ವೀರಶೈವ ಶಬ್ದವು ಪ್ರಸ್ತುತ ಲಿಂಗಾಯಿತ ಶಬ್ದದ ಜೊತೆಗೆ ಅಂಟಿಕೊಂಡಿದ್ದು ರಾರಾಜಿಸುವಂತೆ ಮಾಡಿದವರು ಈಗ ಉತ್ತರ ನೀಡದೆ ಮೌನವಾಗಿದ್ದಾರೆ ಎಂದು ಟೀಕಿಸಿದರು.
ಪುರಸಭಾ ಸದಸ್ಯ ಬಿ. ವೀರಯ್ಯ ಮಾತನಾಡಿ, ಬಸವ ಸಂಸ್ಕೃತಿಯ ಅಭಿಯಾನ ಮತ್ತು ಲಿಂಗಾಯತ ಧರ್ಮದ ಬಗ್ಗೆ ಮಲೆಬೆನ್ನೂರು ಸುತ್ತ 50 ಗ್ರಾಮಗಳಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸೋಣ, ಯಾವುದೇ ತಪ್ಪು ಗ್ರಹಿಕೆ ಹರಡದಿರಲು ಎಚ್ಚರಿಕೆ ವಹಿಸೋಣ ಎಂದರು.
ಲಿಂಗಾಯತ ಮಹಾಸಭಾದ ಮುಖಂಡರಾದ ವೈ. ನಾರೇಶಪ್ಪ, ಪ್ರಭುಸ್ವಾಮಿ, ಬಸವರಾಜಪ್ಪ, ರಂಗನಾಥ್, ಶಿವಾಜಿ ಪಾಟೀಲ್, ಕೆ. ನಾಗರಾಜ್, ಅಕ್ಕನ ಬಳಗದ ರಾಜೇಶ್ವರಿ, ಹೇಮಾವತಿ, ರತ್ನಕ್ಕ ಹಾಜರಿದ್ದರು.
ಅಕ್ಕನ ಬಳಗದ ಸದಸ್ಯರು ವಚನ ಗೀತೆ ಹಾಡಿದರು. ಸಂಸ್ಕೃತಿ ಅಭಿಯಾನದ ವಾಹನ ಮುಂದೆ ಕುಂಬಳೂರ ಕೊಮಾರನಹಳ್ಳಿ, ಜಿಗಳಿ ಎಲವಟ್ಟಿ, ಹೊಳೆಸಿರಿಗೆರೆ ಗ್ರಾಮಗಳತ್ತ ಪ್ರಯಾಣ ಬೆಳೆಸಿತು.