ಗದಗ ಅಭಿಯಾನ: ಬುದ್ಧ, ಬಸವ, ಅಂಬೇಡ್ಕರ್ ಆದರ್ಶಗಳೇ ದಾರಿದೀಪ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಗದಗ

ಆತ್ಮಕಲ್ಯಾಣವನ್ನು ಮತ್ತು ಸಮಾಜ ಕಲ್ಯಾಣವನ್ನು ಬಸವ ಧರ್ಮ ಬೊಧಿಸುತ್ತದೆ. ನಮಗೆಲ್ಲ ಇಂದಿನ ದಿನಗಳಲ್ಲಿ ದಾರಿ ತೋರುವವರು ಬುದ್ಧ ಬಸವ ಅಂಬೇಡ್ಕರ್ ಅವರ ಆದರ್ಶಗಳು ಮಾತ್ರ. ಪ್ರತಿ ಸಮಸ್ಯೆ, ಪ್ರಶ್ನೆಗಳಿಗೆ ವಚನ ಸಾಹಿತ್ಯದಲ್ಲಿ ಉತ್ತರವಿದೆ ಎಂದು ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು.

ಮಂಗಳವಾರ ಶ್ರೀ ತೋಂಟದಾರ್ಯ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವ ಸಂಸ್ಕೃತಿ ಅಭಿಯಾನದ ಹೆಸರನ್ನು ವಿಶ್ವ ಸಂಸ್ಕೃತಿ ಅಭಿಯಾನ ಎಂದೂ ಕರೆಯಬಹುದಾಗಿತ್ತು. ಲಿಂಗಾಯತ ಎಂದು ಅಂದುಕೊಳ್ಳುವುದರಿಂದ ವಿಶ್ವಮಾನ್ಯತೆ ಸಿಗುತ್ತದೆ. ಅಭಿಯಾನ ನಮ್ಮಲ್ಲಿ ಒಳ ಎಚ್ಚರ ಹುಟ್ಟಿಸುತ್ತಿದೆ. ಇದು ಪವಿತ್ರ ಕೆಲಸವೆಂದು ಎಂದು ಭಾವಿಸುವೆ, ಎಂದು ಹೇಳಿದರು.

ಸಾನಿಧ್ಯವಹಿಸಿ ಮಾತನಾಡಿದ ಹೊಸಳ್ಳಿ ಬೂದೀಶ್ವರ ಮಠದ ಪೂಜ್ಯ ಬೂದೀಶ್ವರ ಸ್ವಾಮಿಗಳು ಬಿದ್ದವರನ್ನು ಮೇಲೆತ್ತುವ ಶಕ್ತಿ, ಸಾಮರ್ಥ್ಯ ಇರುವುದು ಬಸವಣ್ಣನವರಿಗೆ ಮಾತ್ರ. ದುಡಿಯದೇ ತಿನ್ನುವವ ಶ್ರೀಮಂತನಾಗಿದ್ದರೂ ಬಡವ. ದುಡಿದು ತಿನ್ನುವವ ಬಡವನಾಗಿದ್ದರೂ ಶ್ರೀಮಂತ ಎಂದು ಹೇಳಿದರು.

ನಿನ್ನ ಹತ್ತಿರ ಇದ್ದದ್ದನ್ನೇ ಹಂಚಿಕೊಂಡು ತಿನ್ನೋದು ದಾಸೋಹ ತತ್ವವಾಗಿದೆ. ಎಲ್ಲರನ್ನು ಕರಕೊಂಡು ತಿನ್ನುವವನ ಹೊಟ್ಟೆ ಎಂದೂ ಹಸಿಯುವುದಿಲ್ಲ. ಮುಚಗೊಂಡು ತಿನ್ನುವವನ ಹೊಟ್ಟೆ ಎಂದೂ ತುಂಬುವುದಿಲ್ಲ. ಇದನ್ನೆಲ್ಲ ಕಲಿಸಿದವರೇ ಬಸವಾದಿ ಶರಣರು.

ಯಾವನು ಮತ್ತೊಬ್ಬನ ಹೊಟ್ಟೆ ಮೇಲೆ ಹೊಡೆಯುತ್ತಾನೆ, ಇನ್ನೊಬ್ಬರ ಮನೆಯ ಮುರಿಯುತ್ತಾನೆ ಅವನು ಅಸ್ಪ್ರಶ್ಯ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ಬಸವಾದಿ ಶರಣರು. ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯಿಂದ ಬದುಕುವುದೇ ಬಸವತತ್ವ ಸ್ವಾಮೀಜಿ ಎಂದರು.

ಸಾನಿಧ್ಯ ವಹಿಸಿದ್ದ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡುತ್ತಾ, ನಾವೆಲ್ಲ ಲಿಂಗಾಯತರು ಒಂದಾಗಬೇಕು. ಧರ್ಮ ಗುರುವಿನ ಸೇವೆ ಎಂದು ತಿಳಿದು ಬೆಂಗಳೂರಲ್ಲಿ ನಡೆಯುವ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಸರ್ವರೂ ಆಗಮಿಸಬೇಕು.

ಬರುವ ಜನಗಣತಿಯಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ‘ಲಿಂಗಾಯತ’ ಎಂದು ಬರೆಯುವುದನ್ನು ಮರೆಯಬೇಡಿ. ಲಿಂಗಾಯತರ ಸಂಖ್ಯೆ ಕಡಿಮೆಯಾಗಬಾರದು. ನಾವೆಲ್ಲ ಎಚ್ಚರಗೊಂಡು ಲಿಂಗಾಯತ ಎಂದು ಬರೆಸಿದರೆ ಮಾತ್ರ ನಮ್ಮ ಸೌಲಭ್ಯ ನಾವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಬಸವಣ್ಣನ ಹಿರಿಮೆ ಗರಿಮೆ ಮತ್ತೆ ಮತ್ತೆ ಸ್ಮರಿಸಿಕೊಳ್ಳಬೇಕು. ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಮಸಮಾಜದ ತತ್ವಾದರ್ಶ ಜಾರಿಗೆ ತಂದವರು ಬಸವಣ್ಣನವರು. ಅಸ್ಪೃಶ್ಯತೆ ನಿವಾರಣೆಯಾಗದೆ ಸರ್ವಾಂಗ ಸುಂದರ ಸಮಾಜ ಅಸಾಧ್ಯ. ಅಸ್ಪೃಶ್ಯತೆ ನಿವಾರಣೆಗೆ ಬಹುದೊಡ್ಡ ಹೋರಾಟ ಮಾಡಿದವರು ಬಸವಣ್ಣನವರು. ಬಸವಣ್ಣ ನಮಗೆಲ್ಲ ಹಿರಿಮೆ ಗರಿಮೆ ಘನತೆ ಎಂದರು.

ನೇತೃತ್ವ ವಹಿಸಿ ಬಸವ ಧರ್ಮ ಪೀಠದ ಪೂಜ್ಯ ಡಾ. ಗಂಗಾ ಮಾತಾಜಿ ಮಾತನಾಡುತ್ತ, ಮುಂಬರುವ ಗಣತಿಯಲ್ಲಿ ಎಲ್ಲರೂ ತಪ್ಪದೇ “ಲಿಂಗಾಯತ” ಎಂದೇ ಬರೆಸಬೇಕು. ಲಿಂಗಾಯತ ಧರ್ಮ ಸರ್ವರಿಗೂ ಸರಿಸಮಾನತೆಯ ಅವಕಾಶ ಕಲ್ಪಿಸಿಕೊಟ್ಟದ್ದು. ಧರ್ಮಗುರು ಬಸವಣ್ಣನವರು ಎಂಬುದು ನಾವ್ಯಾರೂ ಮರೆಯಬಾರದು ಎಂದರು.

ಗದಗ ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ಸತ್ಯ ನ್ಯಾಯ ನೀತಿಯಿಂದ ಬದುಕುವುದೇ ಸ್ವರ್ಗಲೋಕ ಎಂದು ಬಸವಾದಿ ಶರಣರು ತಿಳಿಸಿದ್ದಾರೆ ಎಂದರು.

ಬಸವರಾಜ ವೆಂಕಟಾಪುರ ಶರಣರು ಬರೆದ ವಚನಶಾಸ್ತ್ರ ಸಾರ ಭಾಗ-1, ಭಕ್ತಸ್ಥಲ ಭಾಗ-2 ರ ವಚನ ವಿಶ್ಲೇಷಣೆ ಗ್ರಂಥ ಸಮಾರಂಭದಲ್ಲಿ ಬಿಡುಗಡೆಗೊಂಡಿತು.

ಹತ್ತಿಕಾಳ ಕೂಟದ ಬಸವೇಶ್ವರ ವೃತ್ತದಿಂದ ಶ್ರೀ ತೋಂಟದಾರ್ಯ ಮಠದವರೆಗೆ ಬಸವಭಕ್ತರ ಬೃಹತ್ ಪಾದಯಾತ್ರೆ, ಮೆರವಣಿಗೆ ಸಾಗಿ ಬಂದಿತು. ಧರ್ಮಗುರು ಬಸವಣ್ಣ, ಯಡೆಯೂರ ಸಿದ್ದಲಿಂಗೇಶ್ವರರ ಭಾವಚಿತ್ರದ ಅಡ್ಡಪಲ್ಲಕ್ಕಿ ಪ್ರಮುಖ ಆಕರ್ಷಣೆಯಾಗಿತ್ತು. ವಿವಿಧ ಜನಪದ ಕಲಾಮೇಳಗಳು ಮೆರವಣಿಗೆಯಲ್ಲಿ ಇದ್ದವು. ಸಮಾರಂಭದಲ್ಲಿ ರಾಜೇಶ್ವರಿ ಕಲಾ ಕುಟೀರ ವಿದ್ಯಾರ್ಥಿಗಳ ವಚನ ನೃತ್ಯ ಎಲ್ಲರನ್ನು ರಂಜಿಸಿತು.

ಆಳಂದ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಶ್ರೀಗಳು ‘ಶಿವಚಿಂತೆ ಶಿವಜ್ಞಾನ ಇಲ್ಲದ ಮನುಜರು’ ವಿಷಯವಾಗಿ ಮತ್ತು ‘ಅಸ್ಪೃಶ್ಯತಾ ನಿವಾರಣೆಗೆ ಶರಣರ ಕೊಡುಗೆ’ ವಿಷಯವಾಗಿ ಪೂಜ್ಯ ನಿಜಗುಣಾನಂದ ಶ್ರೀಗಳು ಅನುಭಾವ ನೀಡಿದರು.

ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವ ಕೇಂದ್ರ, ಶ್ರೀ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಬಸವಧರ್ಮ ಮಹಾಪೀಠ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ದಲಿತ ಕಲಾ ಮಂಡಳಿ, ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕನ ಬಳಗ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಅಭಿಯಾನ ನಡೆಯಿತು.

ಹಡಪದ ಅಪ್ಪಣ್ಣ, ಸಮಗಾರ ಹರಳಯ್ಯ, ಡೋಹಾರ ಕಕ್ಕಯ್ಯ, ಹೂಗಾರ ಮಾದಯ್ಯ, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಶಂಕರ ದಾಸಿಮಯ್ಯ, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ, ಶಿವಯೋಗಿ ಸಿದ್ಧರಾಮೇಶ್ವರ, ಜೇಡರ ದಾಸಿಮಯ್ಯ, ಕುರುಬ ಗೊಲ್ಲಾಳೇಶ್ವರ, ಒಕ್ಕಲಿಗ ಮುದ್ದಣ್ಣ ಮತ್ತಿತರ ಸಮಾಜಗಳು, ಸಂಘಟನೆಗಳು ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷರು, ಮಾಜಿ ಶಾಸಕ ಡಿ.ಆರ್. ಪಾಟೀಲರು ಸರ್ವರನ್ನು ಸ್ವಾಗತಿಸಿದರು. ಕೆ.ಎಸ್. ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದಗೌಡ ಪಾಟೀಲ ನಿರೂಪಣೆ ಮಾಡಿದರು.

ಮುಂಜಾನೆ ಶ್ರೀ ಜ. ತೋಂಟದಾರ್ಯ ಮಠದ ಮುಂದೆ ಬಸವ ರಥವನ್ನು ಸ್ವಾಗತ ಮಾಡಿಕೊಳ್ಳಲಾಯಿತು. ಶ್ರೀ ತೋಂಟದಾರ್ಯ ಮಠದ ಆವರಣದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ಷಟಸ್ಥಲ ಧ್ವಜಾರೋಹಣ ಮಾಡಿದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ‘ವಚನ ಸಂವಾದ’ ಕಾರ್ಯಕ್ರಮ ನಡೆಯಿತು. ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಸಾರ್ವಜನಿಕರು, ಪೂಜ್ಯರು ಉಪಸ್ಥಿತರಿದ್ದರು.

ರಾತ್ರಿ ಸಾಣೇಹಳ್ಳಿ ಶಿವಸಂಚಾರ ಕಲಾ ತಂಡದವರಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *