ಜಾತಿಗಣತಿ: ವೀರಶೈವ ಮಹಾಸಭಾ ಸೂಚನೆಗೆ 50 ಬಸವ ಸಂಘಟನೆಗಳ ವಿರೋಧ

ಬಸವ ಮೀಡಿಯಾ
ಬಸವ ಮೀಡಿಯಾ

ಇದು ಅಮಾಯಕ ಲಿಂಗಾಯತರನ್ನು ದಾರಿ ತಪ್ಪಿಸುವ ಸಂಚು

ಬೆಂಗಳೂರು

ಈ ತಿಂಗಳು ಶುರುವಾಗುವ ಜಾತಿಗಣತಿಯಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸಿ ಎಂದು ಕರೆ ನೀಡಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಸೂಚನೆಯನ್ನು 50ಕ್ಕೂ ಹೆಚ್ಚು ಬಸವ ಸಂಘಟನೆಗಳು ಖಂಡಿಸಿವೆ.

ವೀರಶೈವ ಮಹಾಸಭಾಗೆ ಬೆಂಬಲವಿಲ್ಲ

ಇಂದು ಮಧ್ಯಾಹ್ನ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭೆ, ಸೇರಿದಂತೆ 50ಕ್ಕೂ ಹೆಚ್ಚಿನ ಬಸವ ಪರ ಲಿಂಗಾಯತ ಸಂಘಟನೆಗಳು ವೀರಶೈವ ಮಹಾಸಭಾದ ನಿಲುವನ್ನು ವಿರೋಧಿಸಿದವು.

“ಸತ್ಯಕ್ಕೆ ದೂರವಾದ, ಸೈದ್ಧಾಂತಿಕವಾಗಿ ವಿರುದ್ಧವಾದ, ತಾರ್ಕಿಕವಾಗಿ ಅಸಾಧ್ಯವಾದ ವೀರಶೈವ ಮಹಾಸಭೆಯ ಸೂಚನೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ತಿರಸ್ಕರಿಸುತ್ತೇವೆ. ಇದು ಅಮಾಯಕ ಲಿಂಗಾಯತರನ್ನು ದಾರಿ ತಪ್ಪಿಸುವ ಸಂಚು,” ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಹೇಳಿದರು.

“ಎಲ್ಲ ಲಿಂಗಾಯತರೂ ಧರ್ಮದ ಕಾಲಂದಲ್ಲಿ ಕೇವಲ ʼಲಿಂಗಾಯತʼ ಎಂದು ಬರೆಸಲು ಈ ಮೂಲಕ ಸಮಸ್ತ ಲಿಂಗಾಯತ ಸಮಾಜಕ್ಕೆ ಕರೆ ನೀಡುತ್ತೇವೆ,” ಎಂದು ಹೇಳಿದರು.

ಎಲ್ಲ ಲಿಂಗಾಯತರೂ ಧರ್ಮದ ಕಾಲಂದಲ್ಲಿ ಕೇವಲ ʼಲಿಂಗಾಯತʼ ಎಂದು ಬರೆಸಬೇಕು.

“ಲಿಂಗಾಯತರಲ್ಲಿ 101 ಜಾತಿಗಳಿವೆ. ಅವುಗಳಲ್ಲಿ ವೀರಶೈವವೂ ಒಂದು ಜಾತಿ. ಲಿಂಗಾಯತದಲ್ಲಿ ವೀರಶೈವ ಇದೆ. ವೀರಶೈವದಲ್ಲಿ ಲಿಂಗಾಯತ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಲಿಂಗಾಯತ ಸಂಘಟನೆಗಳು ಲಕ್ಷಗಟ್ಟಲೆ ಕರಪತ್ರಗಳನ್ನು ಹಂಚುತ್ತಿವೆ,” ಎಂದು ಜಾಮದಾರ್ ಹೇಳಿದರು.

‘ವೀರಶೈವ ಲಿಂಗಾಯತ’ ವಿವಾದದ ಹಿನ್ನಲೆಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಲಾಯಿತು.

2002ರಲ್ಲಿ ನಡೆದ ಅನ್ಯಾಯ

2002ರವರೆಗೆ ಲಿಂಗಾಯತರಿಗೆ ಕೇವಲ ʼಲಿಂಗಾಯತʼ ಎಂದು ಜಾತಿ ಸರ್ಟಿಫಿಕೇಟ್ ನೀಡಲಾಗುತ್ತಿತ್ತು, ಆದರೆ 2002ರ ನಂತರ ʼವೀರಶೈವ ಲಿಂಗಾಯತʼ ಎಂದು ಜಾತಿ ಸರ್ಟಿಫಿಕೇಟ್ ನೀಡಲಾಗುತ್ತಿದೆ.

ಈ ಸಮಸ್ಯೆಯನ್ನು ಸೃಷ್ಟಿಸಿದವರು ಭೀಮಣ್ಣ ಖಂಡ್ರೆ ಹಾಗೂ ದಿವಂಗತ ಎಂ. ಪಿ. ಪ್ರಕಾಶ ಅವರು. ಸಚಿವ ಈಶ್ವರ ಖಂಡ್ರೆಯವರ ತಂದೆಯವರಾಗಿರುವ ಭೀಮಣ್ಣ ಖಂಡ್ರೆ 2002ರಲ್ಲಿ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದರು.

ಇವರಿಬ್ಬರೂ 2002ರಲ್ಲಿ ಸರಕಾರವು ಜಾತಿ ಸರ್ಟಿಫಿಕೇಟ್ ನೀಡುವುದನ್ನು ಕಂಪ್ಯೂಟರೀಕರಣ ಮಾಡುವಾಗ ಎಲ್ಲ ಲಿಂಗಾಯತರಿಗೆ ʼವೀರಶೈವ ಲಿಂಗಾಯತʼ ಎಂದು ಸರ್ಟಿಫಿಕೇಟ್ ನೀಡಬೇಕೆಂದು ಒತ್ತಾಯಿಸಿ ಮನವಿ ನೀಡಿದ್ದರು. ತಮ್ಮ ಪ್ರಭಾವವನ್ನು ಬಳಸಿ ಲಿಂಗಾಯತರ ಹೆಸರನ್ನು ಬದಲಿಸಿ ಈ ಅನ್ಯಾಯಕ್ಕೆ ಕಾರಣರಾದರು.

ಈ ಸಮಸ್ಯೆಯನ್ನು ಸೃಷ್ಟಿಸಿದವರು ಭೀಮಣ್ಣ ಖಂಡ್ರೆ ಹಾಗೂ ದಿವಂಗತ ಎಂ. ಪಿ. ಪ್ರಕಾಶ ಅವರು.

ಆಧಾರವಿಲ್ಲದ ಬದಲಾವಣೆ

ಇಷ್ಟೊಂದು ಮಹತ್ತರವಾದ ಬದಲಾವಣೆಯನ್ನು ಸರಕಾರ ಯಾವುದೇ ಆಧಾರವಿಲ್ಲದೆ ಕೆಲವರ ಮನವಿಯ ಮೇಲೆ ಮಾಡಿರುವುದು ದೊಡ್ಡ ಅನ್ಯಾಯ.

ಮಾಹಿತಿ ಹಕ್ಕಿನ ಅಡಿಯಲ್ಲಿ ಪ್ರಶ್ನಿಸಿದಾಗ “ವೀರಶೈವ ಲಿಂಗಾಯತ” ಎಂದು ಲಿಂಗಾಯತರ ಹೆಸರನ್ನು ಬದಲಿಸಲು “ಯಾವುದೇ ಆಧಾರ ಇಲ್ಲ” ಎಂದು ಸರಕಾರ ಉತ್ತರಿಸಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಜಿಲ್ಲಾಧ್ಯಕ್ಷ ಹೇಳಿದ ಮಹದೇವಪ್ಪ.ಎಸ್ ಹೇಳಿದರು.

ಕಾನೂನು ಸಮರ

ಸರಕಾರದ ತಪ್ಪು ಆದೇಶವನ್ನು ಈಗಾಗಲೇ ರಿಟ್‌ ಅರ್ಜಿಗಳಲ್ಲಿ ಪ್ರಶ್ನಿಸಲಾಗಿದ್ದು, ಆದೇಶವನ್ನು ಪುನರ್‌ ಪರಿಶೀಲನೆ ಮಾಡಲು ಉಚ್ಛ ನ್ಯಾಯಾಲಯವು ಆದೇಶಿಸಿದ್ದರೂ ಆ ತಪ್ಪನ್ನು ಇಂದಿಗೂ ಸರಿಪಡಿಸಿಲ್ಲ.

ಅನೇಕ ಲಿಂಗಾಯತರು ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಅರ್ಜಿಗಳು “ಸಾರ್ವಜನಿಕ ಹಿತಾಸಕ್ತಿಯ ದಾವೆ” ಎಂದು ಪರಿಗಣಿಸಲಾಗಿದೆ. ಅದರ ವಿಚಾರಣೆ ಈಗ ಅಂತಿಮ ಹಂತದಲ್ಲಿದೆ. ಒಂದೆರಡು ತಿಂಗಳಲ್ಲಿ ಆದೇಶ ಬರಲಿದೆ, ಎಂದು ಹೇಳಿದರು.

ರಂಭಾಪುರಿ ಶ್ರೀಗಳ ಸರ್ಟಿಫಿಕೇಟ್

ಇಂದು ‘ವೀರಶೈವ ಲಿಂಗಾಯತ’ ಎಂದು ಹೇಳಿಕೊಳ್ಳುತ್ತಿರುವವರ ಜಾತಿ ಸರ್ಟಿಫಿಕೇಟಿನಲ್ಲಿಯೂ ʼಲಿಂಗಾಯತʼ ಎಂದಿದೆ. ರಂಭಾಪುರಿ ಶ್ರೀಗಳು, ವೀರಶೈವ ಮಹಾಸಭೆ ಪದಾಧಿಕಾರಿಗಳಾದ ಶಂಕರ ಬಿದರಿ, ಈಶ್ವರ ಖಂಡ್ರೆ, ರೇಣುಕಾ ಪ್ರಸನ್ನ ತಮ್ಮ ಮೂಲ ಜನ್ಮ ಸರ್ಟಿಫಿಕೇಟ್ ನೋಡಿಕೊಳ್ಳಲಿ, ಎಂದು ಬಸವ ಸಂಘಟನೆಗಳ ಮುಖಂಡರು ಹೇಳಿದರು.

ಕೇಂದ್ರದ ನಿಲುವಿಗೆ ವಿರುದ್ಧ

ವೀರಶೈವವಾದಿಗಳು ಲಿಂಗಾಯತರ ಹೆಸರು ಬದಲಿಸಿ ಸಮಾಜದ ಮೇಲೆ ತಮ್ಮ ಪ್ರಾಬಲ್ಯ ಸಾಧಿಸುವ ಪ್ರಯತ್ನ ದಶಕಗಳಿಂದ ನಡೆಯುತ್ತಿದೆ.

1956ರಲ್ಲಿ ಹಿಂದೂ ವಾರ್ಸಾ ಮಸೂದೆ ಬಗ್ಗೆ ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯುವಾಗ ʼವೀರಶೈವʼ ಮತ್ತು ʼಲಿಂಗಾಯತʼ ಎರಡೂ ಪದಗಳನ್ನು ಜೋಡಿಸಬೇಕು ಎಂದು ಕೊಪ್ಪಳ ಕ್ಷೇತ್ರದ ಅಂದಿನ ಸಂಸದ ಅಳವಂಡಿ ಶಿವಮೂರ್ತಿ ಸ್ವಾಮಿಗಳು ತಿದ್ದುಪಡಿ ಸೂಚಿಸಿದರು.

ಕೇಂದ್ರ ಸರಕಾರವೂ ಆ ತಿದ್ದುಪಡೆಗೆ ಒಪ್ಪಲಿಲ್ಲ ಹಾಗೂ ಲೋಕಸಭೆಯು ಆ ತಿದ್ದುಪಡಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ಅಂದಿನಿಂದ ಇಂದಿನ ವರೆಗೂ ವೀರಶೈವ ಮತ್ತು ಲಿಂಗಾಯತಗಳು ಕಾನೂನಾತ್ಮಕವಾಗಿ ಬೇರೆ ಬೇರೆ ಎಂದು ಸಾಬೀತಾಗಿದೆ.

ಇದರಿಂದ ಇಂದಿಗೂ ಕೂಡ ಹಿಂದೂ ವಿವಾಹ ಕಾನೂನು, ಹಿಂದೂ ವಾರ್ಸಾ ಕಾನೂನು, ಹಿಂದೂ ಅಲ್ಪವಯಿ ಕಾನೂನು, ಹಾಗೂ ಹಿಂದೂ ದತ್ತಕ ಕಾನೂನಿನಲ್ಲಿ ‘ವೀರಶೈವʼ ಮತ್ತು ‘ಲಿಂಗಾಯತʼ ಗಳನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ.

ಇಂದಿಗೂ ಕೇಂದ್ರದ ಕಾನೂನುಗಳಲ್ಲಿ ‘ವೀರಶೈವʼ ಮತ್ತು ‘ಲಿಂಗಾಯತʼ ಪ್ರತ್ಯೇಕವಾಗಿವೆ.

ಅಳವಂಡಿ ಶಿವಮೂರ್ತಿ ಸ್ವಾಮಿಗಳು ಸ್ವತಃ ವೀರಶೈವರೇ ಆಗಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು ಎಂದು ಜಾಮದಾರ್ ಹೇಳಿದರು.

ಹಿಂದೂಗಳಲ್ಲ ಹೇಳಿಕೆಗೆ ಸ್ವಾಗತ

ಮೊನ್ನೆ ಅಖಿಲ ಭಾರತ ವೀರಶೈವ ಮಹಾಸಭೆಯು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ “ಲಿಂಗಾಯತರು ಹಿಂದೂಗಳಲ್ಲ. ಆದ್ದರಿಂದ ಜನಗಣತಿಯ ಧರ್ಮದ ಕಾಲಂದಲ್ಲಿ ಎಲ್ಲ ಲಿಂಗಾಯತರು ಹಿಂದೂ ಎಂದು ಬರೆಸಬಾರದು” ಎಂದು ಹೇಳಿದರು. ಈ ಹೇಳಿಕೆಯನ್ನೇ ನಾವೆಲ್ಲರೂ ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಮತ್ತು ಈ ಮೂಲಕ ಅಖಿಲ ಭಾರತ ವೀರಶೈವ ಮಹಾಸಭೆಯು ಈಗ ತನ್ನ ೧೨೧ ವರ್ಷಗಳ ಹಿಂದಿನ ನಿರ್ಣಯವನ್ನು ಬದಲಿಸಿದ್ದಕ್ಕಾಗಿ ಅವರನ್ನು ನಾವು ಹಾರ್ದಿಕವಾಗಿ ಅಭಿನಂದಿಸುತ್ತೇವೆ, ಎಂದು ಜಾಮದಾರ್ ಹೇಳಿದರು.

ಬಸವಯೋಗಿ ಸ್ವಾಮೀಜಿ, ರಾಷ್ಟ್ರೀಯ ಬಸವದಳ ಬೆಂಗಳೂರು, ಕೆ.ಆರ್. ಮಂಗಳ ಬೆಂಗಳೂರು, ಮಹಾದೇವಪ್ಪ, ಮೈಸೂರು, ಪ್ರೊ. ವೀರಭದ್ರಯ್ಯ, ಬೆಂಗಳೂರು, ನಾಗಭೂಷಣ, ತುಮಕೂರು, ಎನ್. ಚಂದ್ರಮೌಳಿ, ಬೆಂಗಳೂರು, ಪ್ರಭುಲಿಂಗ ಮಹಾಗಾಂವಕರ, ಕಲಬುರಗಿ, ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
4 Comments
  • ತಕ್ಷಣ ಕರ್ನಾಟಕ ಸರ್ಕಾರದಿಂದ ಕೊಡುವ ಜಾತಿಯ ಪ್ರಮಾಣ ಪತ್ರದಲ್ಲಿ ಲಿಂಗಾಯತ ಅಂತ ನಮೂದಿಸಲು ಏನೂ ತೊಂದರೆ ಇಲ್ಲ .
    ತಕ್ಷಣ ತಕ್ಷಣ ಈ ರೀತಿ ಮಾಡಲು ಸಾಧ್ಯ.
    ಅದು ಆಗುವಂತೆ ಪ್ರಯತ್ನ ಮಾಡುವುದು ಅವಶ್ಯಕತೆ ಇದೆ.

  • ತಕ್ಷಣ ದಿಂದ ಸರ್ಕಾರ ಜಾತಿ ಸರ್ಟಿಫಿಕೇಟ್ ನಲ್ಲಿ ಲಿಂಗಾಯತ ಎಂದು ನಮೋಡಿಸ್ಬೇಕು

Leave a Reply

Your email address will not be published. Required fields are marked *