ಬೆಂಗಳೂರು
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತರು, ವೀರಶೈವರು ತಮಗೆ ಹೇಗೆ ಬೇಕೋ ಹಾಗೆ ಧರ್ಮ ಬರೆಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಶುಕ್ರವಾರ ನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಏನು ಬರೆಸಬೇಕೆಂದು ಲಿಂಗಾಯತ ಸಮಾಜದಲ್ಲಿ ಗೊಂದಲವಾಗಿದೆ ಎಂಬ ಪ್ರಶ್ನೆಗೆ ‘ಏನು ಬೇಕಾದರೂ ಬರೆಯಿಸಿಕೊಳ್ಳಲಿ’ ಎಂದು ಉತ್ತರಿಸಿದರು.
“ಅವರು ಲಿಂಗಾಯತ ಅಥವಾ ವೀರಶೈವ ಧರ್ಮ ಬರೆಸಿಕೊಳ್ಳಲಿ. ಅಥವಾ ವೀರಶೈವ–ಲಿಂಗಾಯತ ಧರ್ಮ ಅಂತ ಬರೆಸಲಿ. ನಮಗೆ ಬೇಕಾಗಿರುವುದು ಅವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಮಾತ್ರ,” ಎಂದು ಸಿದ್ದರಾಮಯ್ಯ ಹೇಳಿದರು.
ಲಿಂಗಾಯತ ಸಂಘಟನೆಗಳು ಸಮೀಕ್ಷೆಯಲ್ಲಿ ‘ಲಿಂಗಾಯತ’ ಮಾತ್ರ ಬರೆಸಿ ಎಂದು ಕರೆ ಕೊಟ್ಟಿವೆ. ಇದನ್ನು ವಿರೋಧಿಸಿ ವೀರಶೈವ ಮಹಾಸಭಾ ‘ವೀರಶೈವ ಲಿಂಗಾಯತ’ ಎಂದು ಬರೆಸಿ ಎಂದು ಹೇಳಿಕೆ ನೀಡಿದೆ.
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿದೆ.
2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿದ್ದರು. ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿ 10 ವರ್ಷ ಆದ ಕಾರಣ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ ಆ ಕಾರ್ಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈಗ ವಹಿಸಲಾಗಿದೆ.