ಮೈಸೂರು
ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿದೆ. ಈ ಕಾರಣದಿಂದ ಬಸವಣ್ಣನವರ ಕಾಲಕ್ಕಿಂತಲೂ ಹಿಂದೆ ಶೂದ್ರ ಜನಾಂಗದವರು ಮತ್ತು ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಮಹಿಳೆಯರಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ ಎನ್ನುವುದನ್ನು ನಾವು ಮರೆಯಬಾರದು. ಇದಕ್ಕೆ ಅನುಭವ ಮಂಟಪ ಎಂದು ಹೆಸರಿಟ್ಟಿರುವುದು ಸೂಕ್ತವಾಗಿದೆ.
ಅನುಭವ ಮಂಟಪ ಜಗತ್ತಿನ ಮೊದಲನೇ ಸಂಸತ್ತು ಎಂದು ಕರೆಸಿಕೊಂಡಿದೆ. ಈ ಸಂಸತ್ತಿನಲ್ಲಿ ಜಾತಿ, ಧರ್ಮಗಳು ಇರಲಿಲ್ಲ. ಎಲ್ಲಾ ಧರ್ಮದವರೂ ಪಾಲ್ಗೊಳ್ಳುತ್ತಿದ್ದರು. ಬಸವಣ್ಣನವರು ಅದಕ್ಕಾಗಿಯೇ ಅನುಭವ ಮಂಟಪ ನಿರ್ಮಿಸಿ ಜನರ ಸಾಮಾಜಿಕ ಅನುಭವಗಳನ್ನು ಚರ್ಚೆ ಮಾಡಿ ಅದಕ್ಕೆ ಪರಿಹಾರ ಕೊಡುವ ಕೆಲಸವನ್ನು ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ವರುಣ ಕೆರೆಯ ಪಕ್ಕದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಹಾಗೂ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವತಂತ್ರ ಭಾರತದಲ್ಲಿ ಇಂದು ಸಂಸತ್ತು, ವಿಧಾನಸಭೆಗಳು ಇವೆ. ಜನಪ್ರತಿನಿಧಿಗಳು ಸಂಸತ್ತು, ವಿಧಾನಸಭೆಗಳಲ್ಲಿ ಚರ್ಚೆ ಮಾಡುತ್ತೇವೆ. ಇಂಥ ವ್ಯವಸ್ಥೆ ಬಸವಣ್ಣನವರ ಕಾಲದಲ್ಲಿಯೇ ಇತ್ತು. ಸಮಾಜದ ಭವಿಷ್ಯದ ಬಗ್ಗೆ, ಕೆಡುಕುಗಳನ್ನು ತೆಗೆದುಹಾಕುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಇರಿಸಲು ಆದೇಶ ಹೊರಡಿಸಿದ್ದೆ. ಈ ಬಾರಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.
ಇಂದು ಇಲ್ಲಿ ಉದ್ಘಾಟನೆಗೊಂಡಿರುವ ಈ ಮಂಟಪ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಕಾರಣವಾಗಲಿ ಎಂದು ಆಶಿಸುತ್ತೇನೆ.
ಪೂಜ್ಯ ರಾಜೇಂದ್ರ ಸ್ವಾಮೀಜಿಗಳು ಅಕ್ಷರ ದಾಸೋಹ, ಅನ್ನ ದಾಸೋಹಕ್ಕೆ ಹೆಸರಾದವರು. ದಾಸೋಹದ ಅರ್ಥ ‘ಉತ್ಪಾದಿಸುವುದು ಮತ್ತು ಹಂಚುವುದು’ ಎಂಬುದಾಗಿದೆ. ಅದು ಇಲ್ಲಿ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿದೆ ಎನ್ನುವುದು ಸಂತಸದ ವಿಷಯ.
ಬಸವಣ್ಣನವರು ಹೇಳಿದಂತೆ ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣ ಆಗಬೇಕು. ಎಲ್ಲರೂ ಮನುಷ್ಯರಾಗಿ ಬಾಳಬೇಕು. ಸಂವಿಧಾನದ ಆಶಯವೂ ಇದೇ ಆಗಿದೆ.
ಆದ್ದರಿಂದ ನಾವೆಲ್ಲರೂ ಸಮ ಸಮಾಜ ನಿರ್ಮಾಣದ ಪ್ರಯತ್ನ ಮಾಡಿ, ಸಹಬಾಳ್ವೆ ರೂಢಿಸಿಕೊಳ್ಳಬೇಕು. ಇದನ್ನು ಅನುಭವ ಮಂಟಪ ಸಾಕಾರಗೊಳಿಸಲಿ ಎಂದರು.

ಶಿಕ್ಷಣದಿಂದ ಮಾತ್ರ ನಮ್ಮ ಜ್ಞಾನದ ವಿಕಾಸವಾಗುತ್ತದೆ. ಅದರಿಂದ ನಾವು ಸ್ವತಂತ್ರ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು.
ಜೆಎಸ್ಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸೇರಿ ಗೃಹ ನಿರ್ಮಾಣ ಸಂಘವನ್ನು ಸ್ಥಾಪಿಸಿದ್ದಾರೆ. ಸಂಘದ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡುವ ಕೆಲಸವನ್ನು ಮಾಡಿದ್ದಾರೆ. ಸಂಘವು ಹಿಂದೆ ಜಮೀನು ಕೊಂಡ ದರದಲ್ಲಿಯೇ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಹಕಾರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ. ಈ ಕಾರ್ಯ ಮಾಡಿದ ಸಂಘದ ಸದಸ್ಯರಿಗೆ ಅಭಿನಂದನೆಗಳು.
ಸ್ವಾಮೀಜಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ರಾಜ್ಯ, ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹಾಕಿದ ಅಡಿಪಾಯವೇ ಕಾರಣ ಎಂದು ಮುಖ್ಯಮಂತ್ರಿ ಹೇಳಿದರು.