ಧಾರವಾಡ
ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಸ್ವಾಮಿಗಳನ್ನು ಕೆಲವರು ಢೋಂಗಿ ಸ್ವಾಮಿಗಳೆಂದು ಹೇಳಿದ್ದಾರೆ. ಆದರೆ, ಅಭಿಯಾನದಲ್ಲಿ ಭಾಗವಹಿಸಿದವರಾರೂ ಢೋಂಗಿ ಸ್ವಾಮಿಗಳಲ್ಲ ಎಂದು ಸಾಣೇಹಳ್ಳಿ ಮಠದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯರು ಶುಕ್ರವಾರ ಹೇಳಿದರು.
ಮುರುಘಾಮಠದ ಶಿವಯೋಗಿ ಸಭಾಭವನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.
“ಕೆಲವರು ಒಮ್ಮೆ ಕೆಂಪು ಬಟ್ಟೆ ಧರಿಸುತ್ತಾರೆ, ಮತ್ತೊಮ್ಮೆ ಬಿಳಿ ಬಟ್ಟೆ ಧರಿಸುತ್ತಾರೆ. ಗೋಸುಂಬೆ ಗುಣ ಅವರಿಗಿರಬಹುದು ಎಂದು ದಿಂಗಾಲೇಶ್ವರ ಶ್ರೀಗಳಿಗೆ ಪರೋಕ್ಷವಾಗಿ ಹೇಳಿದರು.
ನಾವು ಬಣ್ಣ ಬದಲಾಯಿಸುವವರಲ್ಲ. ನಾವು ಒಮ್ಮೆ ಕೆಂಪು ಬಟ್ಟೆ ಧರಿಸಿದರೆ ಮತ್ತೆ ಬಟ್ಟೆ ಬದಲಾಯಿಸುವುದಿಲ್ಲ. ಹೊತ್ತು ಬಂದಂತೆ ಕೊಡೆ ಹಿಡಿಯುವವರು ನಾವಲ್ಲ.

ಸಮಾಜದ ಮುಖಂಡರು ಹಾಗೂ ಅನೇಕ ಮಠಾಧೀಶರ ಆರ್ಥಿಕ ಸಹಕಾರದಿಂದ ಬಸವ ಸಂಸ್ಕೃತಿ ಅಭಿಯಾನ ನಡೆಸುತ್ತಿದೆಯೇ ಹೊರತು ಸರ್ಕಾರದ ಅನುದಾನ ಏನಿಲ್ಲ. ಸರ್ಕಾರ ನೀಡಿದ ಹಣದಿಂದ ಅಭಿಯಾನ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಇಂತಹ ಮಾತುಗಳ ಬಗ್ಗೆ ಗಮನ ನೀಡದೇ ಬಸವಭಕ್ತರ ಶ್ರದ್ಧೆ ಹಾಗೂ ಭಕ್ತಿಯಿಂದ ಅಭಿಯಾನ ಯಶಸ್ವಿಗೊಳಿಸೋಣ,” ಎಂದರು.
ಸಮಾವೇಶದಲ್ಲಿ ಮಾತನಾಡಿದ ಗದಗ ತೋಂಟದಾರ್ಯ ಮಠದ ತೋಂಟದ ಡಾ. ಸಿದ್ದರಾಮ ಶ್ರೀಗಳು ಜಾತಿ ಗಣತಿ ಸಂದರ್ಭದಲ್ಲಿ ಧರ್ಮ ಲಿಂಗಾಯತ ಎಂದು ನಿರಾತಂಕವಾಗಿ ಬರೆಯಿಸಬೇಕು. ಯಾರ ಹೇಳಿಕೆಗೂ ಮರುಳಾಗಬೇಡಿ. ಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ಬರೆಸಿ ಎಂದು ಕರೆ ನೀಡಿದರು.
ಇದರಿಂದ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಡಾ. ಗಂಗಾ ಮಾತಾಜಿ ಮಾತನಾಡಿದರು.
ಭಾಲ್ಕಿಯ ಡಾ. ಬಸವಲಿಂಗ ಸ್ವಾಮೀಜಿ, ಹುಲಸೂರು ಶ್ರೀಗಳು, ಮನಗುಂಡಿ ಬಸವಾನಂದ ಸ್ವಾಮೀಜಿ, ನಿಜಗುಣಪ್ರಭು ಸ್ವಾಮೀಜಿ, ಶೇಗುಣಸಿ ಮಹಾಂತಪ್ರಭು ಸ್ವಾಮೀಜಿ, ಪ್ರಭುಚನ್ನಬಸವ ಸ್ವಾಮೀಜಿ, ಡಾ. ಸಿದ್ದರಾಮ ಸ್ವಾಮೀಜಿ, ಬಸವಗೀತಾ ಮಾತಾಜಿ ಇದ್ದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಚ್.ಎಸ್. ಅನುಪಮಾ ‘ವ್ಯಸನಮುಕ್ತ ಸಮಾಜಕ್ಕೆ ಶರಣರ ಕೊಡುಗೆ’ ಕುರಿತು ಉಪನ್ಯಾಸ ನೀಡಿದರು.
‘ಅನುಭವ ಮಂಟಪದ ಐತಿಹಾಸಿಕತೆ’ ಕೃತಿ ಬಿಡುಗಡೆ ಮಾಡಲಾಯಿತು.
ಮುಂಜಾನೆ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ವಚನ ಸಂವಾದ ಕಾರ್ಯಕ್ರಮ ನಡೆಯಿತು.

ರಾತ್ರಿ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನಗೊಂಡಿತು.
ಸಂಜೆ ಕಡಪಾ ಮೈದಾನದಿಂದ ಮುರುಘಾಮಠದ ವರೆಗೆ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಕಟ್ಟುಗಳ ಬೃಹತ್ ಮೆರವಣಿಗೆ, ಪಾದಯಾತ್ರೆ ನಡೆಯಿತು.