ಕೂಡಲಸಂಗಮ
ಸಧ್ಯದಲ್ಲೇ ಶುರುವಾಗುವ ಜಾತಿ ಗಣತಿಯ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಲು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಆದರೆ ಧರ್ಮ ಕಾಲಂನಲ್ಲಿ ಏನು ಬರೆಸಬೇಕು ಎಂದು ಇನ್ನೂ ಹೇಳದೇ ಇರುವುದು ಸಂದೇಹಗಳಿಗೆ ಕಾರಣವಾಗಿದೆ.
ಚಿಕ್ಕೋಡಿಯಲ್ಲಿ ಶ್ರೀಗಳ ಸಾನಿಧ್ಯದಲ್ಲಿ ಭಾನುವಾರ ನಡೆದ ಪಂಚಮಸಾಲಿ ವಕೀಲರ ಕಾರ್ಯಕಾರಿಣಿ ಪರಿಷತ್ತು ಸಭೆಯಲ್ಲಿ ಜಾತಿ ಕಾಲಂ ನಲ್ಲಿ ಲಿಂಗಾಯತ ಪಂಚಮಸಾಲಿ ಬರೆಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಯಿತು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ, ಕೋಡ ಸಂಖ್ಯೆ 0868 ಬರೆಸಬೇಕು ಎಂದು ಶ್ರೀಗಳು ಹೇಳಿದರು.
ಆದರೆ ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಎಂದು ಸ್ಪಷ್ಟನೆ ನೀಡಲಿಲ್ಲ.
ಬಸವ ಮೀಡಿಯಾದೊಂದಿಗೆ ಮಾತನಾಡುತ್ತಾ ಶ್ರೀಗಳು ಸೆಪ್ಟೆಂಬರ್ ೧೭ ರಂದು ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಮುದಾಯದ ಜನಪ್ರತಿನಿದಿಗಳ ಸಭೆ ಕರೆಯಲಾಗಿದೆ. ಅಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿಸಲಾಗುವುದು ಎಂದರು.
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸೆಪ್ಟೆಂಬರ್ ೧೭ ರಂದು ಮೂವರೂ ಪಂಚಮಸಾಲಿ ಶ್ರೀಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿರುವರು. ಹುಬ್ಬಳ್ಳಿ ಸಭೆ ಮೃತ್ಯುಂಜಯ ಶ್ರೀಗಳು ಹೋಗಲು ಸಿದ್ಧರಾಗಿರುವುದರಿಂದ ಬೆಂಗಳೂರು ಸಭೆಯಲ್ಲಿ ಭಾಗಿಯಾಗುವುದು ಅನುಮಾನವಾಗಿದೆ.
ಒಂದು ಮೂಲದ ಪ್ರಕಾರ ಹುಬ್ಬಳಿಯ ಸಭೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳು ಹೆಚ್ಚಾಗಿ ಭಾಗಿಯಾಗಿ ಹಿಂದೂ ಎಂದು ಬರೆಸಲು ಒತ್ತಡ ತರುವ ಸಾಧ್ಯತೆಯಿದೆ. ವಚನಾನಂದ ಸ್ವಾಮೀಜಿ ಪಂಚಮಸಾಲಿಗಳು ಹಿಂದೂ ಎಂದು ಬರೆಸಬೇಕೆಂದು ಆಗಲೇ ಕರೆ ನೀಡಿದ್ದಾರೆ.