ಚಿತ್ರದುರ್ಗ
ಮುರುಘಾ ಮಠದ ಅನುಭವ ಮಂಟಪದಲ್ಲಿ ಶರಣಸಂಸ್ಕೃತಿ ಉತ್ಸವ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಲಿಂಗಾಯತ, ವೀರಶೈವ, ಇತರ ಸರ್ವ ಸಮಾಜ ಬಾಂಧವರ ವಿಶೇಷ ಸಭೆ ಮಂಗಳವಾರ ನಡೆಯಿತು.
ಹೊಸದುರ್ಗದಿಂದ ಆಗಮಿಸಿದ್ದ ಒಪ್ಪತ್ತಿನಸ್ವಾಮಿ ಮಠದ ಟ್ರಸ್ಟ್ ಹಾಗೂ ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಪದಾಧಿಕಾರಿ ಕೆ.ಎಸ್. ಕಲ್ಮಠ ಅವರು ಹೊಸದುರ್ಗದಿಂದ ಒಂದು ಸಾವಿರದಷ್ಟು ಜನರನ್ನು ಹೊರಡಿಸಲು ಪ್ರಯತ್ನ ನಡೆದಿದೆ. ಅದಕ್ಕಾಗಿ ಇದೇ ೨೧ರಂದು ಮತ್ತೆ ಸಭೆ ಕರೆಯಲಾಗಿದೆ ಎಂದ ಅವರು, ಶರಣಸಂಸ್ಕೃತಿ ಉತ್ಸವಕ್ಕೆ ಒಪ್ಪತ್ತಿನ ಸ್ವಾಮಿ ಮಠದ ವತಿಯಿಂದ ೩ಲಕ್ಷ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದರು.
ಬಸವ ಸಂಸ್ಕೃತಿ ಅಭಿಯಾನ ಲಿಂಗಭೇದ, ಜಾತಿ, ವರ್ಗ, ವರ್ಣ, ಎಲ್ಲ ಮಿತಿಗಳನ್ನು ಮೀರಿ ನಡೆಯಬೇಕಿದೆ. ಅದರಲ್ಲಿ ಸರ್ವರೂ ಭಾಗವಹಿಸಬೇಕು. ಎಲ್ಲರನ್ನು ಒಳಗೊಂಡ ಉತ್ಸವ ಅರ್ಥಾತ್ ಮರು ಚಳುವಳಿಯಾಗಬೇಕೆಂದು ಜನಪರ ಹೋರಾಟಗಾರ್ತಿ ಹಲವು ಸಂಘಸಂಸ್ಥೆಗಳ ಪದಾಧಿಕಾರಿಯೂ ಆಗಿರುವ ಹಿರಿಯೂರಿನ ಶಶಿಕಲಾ ರವಿಶಂಕರ್ ಅಭಿಪ್ರಾಯಪಟ್ಟರು.
ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಅವರು ಮಾತನಾಡಿ, ಈಗಾಗಲೇ ಸೆಪ್ಟೆಂಬರ್ ೧ ರಿಂದ ಆರಂಭವಾಗಿರುವ ಬಸವಸಂಸ್ಕೃತಿ ಅಭಿಯಾನ ೧೫ ದಿನಗಳಿಂದ ಎಡೆಬಿಡದೆ ನಡೆದಿದೆ. ಎಲ್ಲಾ ಕಡೆಯೂ ತುಂಬಾ ಅರ್ಥಪೂರ್ಣವಾಗಿ ನಡೆದು ಸಾರ್ಥಕತೆ ಪಡೆದಿದೆ ಎಂದರು.

ಬಸವತತ್ವ ಸಾಮೂಹಿಕ ಅನುಷ್ಠಾನಕ್ಕೆ ಬರಲು ಪರಸ್ಪರ ಸಹಕಾರ ಅಗತ್ಯ. ಅಂತಹ ಕೆಲಸ ಮುರುಘಾಮಠ ಮಾಡುತ್ತಿದೆ. ಇಂತಹ ಕಾರ್ಯಕ್ಕೆ ಒಬ್ಬೊಬ್ಬರು ಹತ್ತು ಜನರನ್ನು ಕರೆತಂದರೆ ಸಾಕು ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಮುಖಂಡ ಜಿ.ಎಸ್. ಅನಿತ್ಕುಮಾರ್ ಮಾತನಾಡಿ, ಚಿತ್ರದುರ್ಗದಲ್ಲಿ ಒಂದು ಅಪರೂಪದ ಬಸವ ಸಂಸ್ಕೃತಿ ಅಭಿಯಾನ ಶರಣಸಂಸ್ಕೃತಿ ಉತ್ಸವ ಸಂದರ್ಭದಲ್ಲಿ ನಡೆಸಲು ತಯಾರಿ ನಡೆದಿದೆ. ಇಂತಹ ಸಂಸ್ಕೃತಿ ಬಿಂಬಿಸುವ ಉತ್ಸವಗಳ ಅಗತ್ಯವಿದೆ. ಅದಕ್ಕಾಗಿ ನನ್ನ ಸಹಕಾರವೂ ಇದೆ ಎಂದರು.
ವರ್ತಕರಾದ ಶಂಕರಮೂರ್ತಿ, ಡಿ.ಎಸ್. ಸುರೇಶ್ಬಾಬು, ಲೇಖಕ ಆನಂದಕುಮಾರ್ ಮಾತನಾಡಿದರು.
ಶರಣಸಂಸ್ಕೃತಿ ಉತ್ಸವ ಹಾಗೂ ಬಸವಸಂಸ್ಕೃತಿ ಅಭಿಯಾನದಲ್ಲಿನ ಕಾರ್ಯಕ್ರಮಗಳ ವಿವರನ್ನು ತಿಳಿಸಿದ
ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಇದೇ ತಿಂಗಳ ೨೦ರಿಂದ ಅಕ್ಟೋಬರ್ ೫ರವರೆಗೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜತೆಗೆ ೨೮ರಂದು ವಿಶೇಷವಾಗಿ ಬಸವಸಂಸ್ಕೃತಿ ಅಭಿಯಾನ ನಡೆಯಲಿದೆ. ಜಿಲ್ಲೆಯ ಪ್ರತಿಷ್ಠೆ ಹೆಚ್ಚಿಸಲು ಅರ್ಥಪೂರ್ಣವಾಗಿಸಲು ತಯಾರಿ ನಡೆದಿದೆ. ೫ ಸಾವಿರ ಶರಣ-ಶರಣೆಯರು ಏಕಕಾಲಕ್ಕೆ ಹಾಡಿನ ವಚನ ಗಾನಸುಧೆ ‘ವಚನ ಝೇಂಕಾರ’ ಏರ್ಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಶ್ರೀ ಮುರುಗೇಶ ಸ್ವಾಮಿಗಳು, ವಿವಿಧ ಸಮಾಜಗಳ ಮುಖಂಡರಾದ ಮಹಮ್ಮದ್ ನದಾಫ್, ಪೈಲ್ವಾನ್ ತಿಪ್ಪೇಸ್ವಾಮಿ, ಶ್ರೀನಿವಾಸ್, ಎಸ್. ಷಣ್ಮುಖಪ್ಪ, ಡಿ.ಎಸ್. ಮಲ್ಲಿಕಾರ್ಜುನ್, ಕೆಂಚವೀರಪ್ಪ, ಎಸ್.ವಿ. ನಾಗರಾಜಪ್ಪ, ಜಿ.ಎಸ್. ಉಜ್ಜಿನಪ್ಪ, ಇಂದಿರಾ ಜಯದೇವಮೂರ್ತಿ, ಅನಿತಾ ಮುರುಗೇಶ್, ಜಯಶೀಲ ವೀರಣ್ಣ ಸೇರಿದಂತೆ ವಿವಿಧ ಮಹಿಳಾ ಹಾಗೂ ಪುರುಷ ಸಂಘಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ವಚನ ಝೇಂಕಾರ ಕಾರ್ಯಕ್ರಮಕ್ಕೆ ವಚನಗಳ ಹಾಡುಗಾರಿಕೆಯ ತಾಲೀಮು ನಡೆಯಿತು. ಸುಚಿತ್ ಕುಲಕರ್ಣಿ ಹಾಗೂ ಉಮೇಶ ಪತ್ತಾರ್ ಅವರು ಹೇಳಿಕೊಟ್ಟರು. ಕೆ.ಎಂ. ವೀರೇಶ್ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.