ದಾವಣಗೆರೆ
(ಶ್ರೀ ಮಠದ ಭಕ್ತರೂ ಹಾಗೂ ಸಿರಿಗೆರೆಯ ಶ್ರೀಗಳ ಆಪ್ತರು ಬರೆದಿರುವ ಲೇಖನ. ಹೆಸರು ಪ್ರಕಟಿಸಬೇಡಿ ಎಂದು ವಿನಂತಿಸಿದ್ದಾರೆ.)
ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಠದ ಶಿಷ್ಯರಿಗೆ “ಜಾತಿ ಸಮೀಕ್ಷೆಯಲ್ಲಿ ನಿಮ್ಮ ಧರ್ಮ ಹಿಂದೂ, ಜಾತಿ ಲಿಂಗಾಯತ ಎಂದು ಬರೆಯಿರಿ” ಎಂದು ಸೂಚಿಸಿದ್ದಾರೆ.
ಇದು ಅವರ ಭಕ್ತರಲ್ಲಿ ದೊಡ್ಡ ಗೊಂದಲವನ್ನು ಹುಟ್ಟುಹಾಕಿದೆ.
ಇದೇ ಸ್ವಾಮೀಜಿಗಳು 2017ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ತಮ್ಮ ‘ಬಿಸಿಲು ಬೆಳದಿಂಗಳು’ ಕಾಲಂನಲ್ಲಿ ಬೇರೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅದರಲ್ಲಿ ಅವರು ಸ್ಪಷ್ಟವಾಗಿ ಬರೆದಿದ್ದ ಕೆಲವು ಅಂಶಗಳು:
- “ಬಸವಾದಿ ಶಿವಶರಣರ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದಾಗ ಲಿಂಗವಂತ ಧರ್ಮ ಒಂದು ಸ್ವತಂತ್ರ ವಿಚಾರಧಾರೆಯುಳ್ಳ ವಿಶಿಷ್ಟ ಧರ್ಮ ಎನ್ನುವುದರಲ್ಲಿ ಯಾವ ವಿವಾದವೂ ಇರಬೇಕಾಗಿಲ್ಲ.”
- “ಹಿಂದೂ ಸಮಾಜದಲ್ಲಿರುವಂತೆ, ಲಿಂಗಾಯತ ಸಮಾಜದೊಳಗೂ ಲಿಂಗವಂತ ಕುಂಬಾರರು, ಕ್ಷೌರಿಕರು, ನೇಕಾರರು, ಗಾಣಿಗರು, ಮಡಿವಾಳರು ಮೊದಲಾದವರು ಇದ್ದಾರೆ.”
- “ವೀರಶೈವ ಮಹಾಸಭೆಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕೆಲವು ಅಚ್ಚರಿಯ ಸಂಗತಿಗಳು ತಿಳಿದುಬರುತ್ತವೆ. ಈಗ ವೀರಶೈವ/ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂದು ಒತ್ತಾಯಿಸುತ್ತಿದೆ.”
- “ಈಗ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನವನ್ನು ಸರಕಾರ ಕೊಡಬೇಕೆಂಬ ಕೂಗು ಎದ್ದಿದೆ. ಸರಕಾರ ಅಂತಹ ಮಾನ್ಯತೆ ಕೊಡಲಿ ಬಿಡಲಿ ಇದು ಸ್ವತಂತ್ರ ಧರ್ಮವೇ! ಅಂತಹ ಸ್ಥಾನಮಾನ ದೊರೆತರೆ ಸರಕಾರದ ಸವಲತ್ತುಗಳು ಅರ್ಹರಾದ ಬಡ ಲಿಂಗಾಯತರಿಗೆ ದೊರೆಯುತ್ತವೆ.”
ಸ್ವಾಮೀಜಿಯವರ ಇಂದಿನ ಹೇಳಿಕೆ, ಅವರ ಹಳೆಯ ತಾತ್ವಿಕ ನಿಲುವಿಗೆ ವಿರುದ್ಧವಾಗಿರುವುದರಿಂದ ಶಿಷ್ಯರಲ್ಲಿ ಗೊಂದಲ ಹೆಚ್ಚಾಗಿದೆ. ಸಮುದಾಯದೊಳಗೆ ಈಗ ಒಂದು ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ – “ಸ್ವಾಮೀಜಿಗಳು ಹಳೆಯದಾಗಿ ಸರಿಯಾಗಿ ಹೇಳಿದರು, ಆದರೆ ಇಂದು ಮಾತು ಯಾಕೆ ಬದಲಾಯಿಸಿದರು?”
ಈ ಬದಲಾವಣೆಯ ಹಿಂದೆ ಹಲವು ಸಂಶಯಗಳು ವ್ಯಕ್ತವಾಗುತ್ತಿವೆ:
- ಮಠದ ಒಳಗಿನ ಸ್ವಾಮೀಜಿಗಳ ವೈಮನಸ್ಸು ಕಾರಣವಾಯಿತೆ? ಇನ್ನೊಂದು ಮಠದ ಸ್ವಾಮೀಜಿಯು ಲಿಂಗಾಯತ ಧರ್ಮ ಪರ ನಿಲುವು ತಾಳಿರುವ ಕಾರಣ, ಅದಕ್ಕೆ ಪ್ರತಿಯಾಗಿ ಇವರು ವಿಭಿನ್ನ ನಿಲುವು ತಾಳಿರುವರೇ?
- ಇತ್ತೀಚೆಗೆ ಮಠದ ಮೇಲೆ ಬಂದ ಆರೋಪಗಳನ್ನು ಎದುರಿಸುತ್ತಾ, ಶಿಷ್ಯರಲ್ಲಿ ವಿಶ್ವಾಸ ಕಳೆದುಕೊಳ್ಳಬಾರದೆಂಬ ಅಳುಕು ಸ್ವಾಮೀಜಿಯವರಲ್ಲಿ ಮೂಡಿರುವುದೇ?
- ಇತ್ತೀಚಿನ ಅನೇಕ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಹಿನ್ನೆಲೆಯಲ್ಲಿ, ಹಿಂದುತ್ವದ ಬಲವಾದ ಒತ್ತಡಕ್ಕೆ ಮಣಿದು ಈ ಹೇಳಿಕೆ ನೀಡಿರುವರೇ?
ಲಿಂಗಾಯತ ಸಮುದಾಯವು ಬಸವಣ್ಣನವರ ತಾತ್ವಿಕ ಬೆಳಕಿನಲ್ಲಿ ಸಾಗಬೇಕೋ ಅಥವಾ ರಾಜಕೀಯ ಒತ್ತಡಕ್ಕೆ ಅನುಗುಣವಾಗಿ ದಿಕ್ಕು ಬದಲಿಸಿಕೊಳ್ಳಬೇಕೋ ಎಂಬ ಪ್ರಶ್ನೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ಹೆಸರು ಪ್ರಕಟಿಸಬೇಡಿ ಅನ್ನುವ ಲೇಖನ ದುರುದ್ದೇಶ ಅಲ್ಲೇ ಗೊತ್ತಾಗುತ್ತಿದೆ.
ಕೇವಲ ದುರುದ್ದೇಶ ಪೂರ್ವಕವಾಗಿ ಈ ರೀತಿ ಲೇಖನ ಬರೆಯುತ್ತಾರೆ.
ಸಿರಿಗೆರೆಯ ಸ್ವಾಮೀಜಿಗಳ ಹೇಳಿಕೆ ಅಂದೂ ,ಇಂದೂ ಮುಂದೆಯೂ ಬದಲು ಆಗಲ್ಲ.ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಲೇಖಕ ಸೋತಿದ್ದಾನೆ.ಇಲ್ಲವೇ ಅವರಿಗೆ ಬೇರೆ ಉದ್ದೇಶ ಇದೆ.
ಹಾಗಾದರೆ ಸಿರಿಗೆರೆ ಶ್ರೀಗಳು ನಿಲುವು ಬದಲಾಯಿಸಿರುವುದು ಸುಳ್ಳೇ
ನಿಲುವು ಬದಲಿಸಿರುವುದು ಸುಳ್ಳು.
ಅನಾಮಿಕ ಲೇಖಕ ಉದ್ದೇಶಪೂರ್ವಕವಾಗಿ ಲೇಖನದ ಪೂರ್ಣ ಮಾಹಿತಿ ಕೊಡದೇ ಮರೆಮಾಚಿದ್ದಾರೆ. ಲೇಖನ ಪೂರ್ತಿ ಓದಿದಾಗ ಧ್ವನಿಸುವ ಅರ್ಥವೇ ಬೇರೆ.