ಮೈಸೂರಿನಲ್ಲಿ ಸಂಭ್ರಮದಿಂದ ಮಹಿಷ ದಸರಾ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ವಿಜೃಂಭಣೆಯಿಂದ ಮಹಿಷ ದಸರಾ ಆಚರಣೆ ಮಾಡಲಾಯಿತು. ನಗರದ ಪುರಭವನದ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಬುಧವಾರ ಕಂಚಿನ ಮಹಿಷ, ಬುದ್ಧ, ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪೀಠಿಕೆಯನ್ನು ಓದಲಾಯಿತು. ಇದಕ್ಕೂ ಮೊದಲು ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ವೇದಿಕೆಗೆ ಆಗಮಿಸಿದರು.

ವೇದಿಕೆಯಲ್ಲಿ ಮಹಿಷ ದಸರಾ ಕಾರ್ಯಕ್ರಮವನ್ನು ಪೆರಿಯಾರ್ ಚಳವಳಿ ಹೋರಾಟಗಾರ ಕೋಳ್ತೂರು ಮಣಿ ಉದ್ಘಾಟಿಸಿದರು.

‘ಆರ್ಯರ ವ್ಯವಸ್ಥೆಯು ಸ್ಥಳೀಯ ಮೂಲ ನಿವಾಸಿಗಳನ್ನು ರಕ್ಷಿಸಲು ಬಂದವರನ್ನು ರಾಕ್ಷಸರನ್ನಾಗಿ ನಿರೂಪಿಸಿತು’ ಎಂದು ಮಣಿ ಟೀಕಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸರಕಾರ ದಸರಾ ಆಚರಣೆಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಯಾವ್ಯಾವುದೋ ಸಂಭ್ರಮ ಮಾಡುತ್ತಿದೆ. ಈ ನೆಲದ ಮೂಲ ನಿವಾಸಿ ಮಹಿಷಾನನ್ನು ಯಾಕೆ ಸ್ಮರಿಸುವುದಿಲ್ಲ. ಮಹಿಷಾನ ಹೆಸರಿನಲ್ಲಿ ವಿಚಾರ ಸಂಕಿರಣ ಯಾಕೆ ಮಾಡಲಾಗುವುದಿಲ್ಲ ಎಂದು ಪ್ರಶ್ನಿಸಿದರು.

ನಾಡಹಬ್ಬಕ್ಕೆ ಖರ್ಚು ಮಾಡುವುದು ತೆರಿಗೆ ಹಣವಾದ್ದರಿಂದ ಮಹಿಷಾನನ್ನು ಸ್ಮರಿಸಬೇಕು. ಸರಕಾರದ ವತಿಯಿಂದಲೇ ಮಹಿಷಾ ದಸರಾ ಆಚರಿಸಬೇಕು ಎಂದು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಸಿದ್ದಸ್ವಾಮಿ, ಮಹಿಷಾಸುರ ಮೈಸೂರು ಅಸ್ಮಿತೆ. ಮೌಢ್ಯತೆಯ ವಿರೋಧಿ. ಯಾರೊಂದಿಗೂ ವೈರತ್ವ ತಾಳಲು ಮಹಿಷಾ ದಸರಾ ಆಚರಿಸುತ್ತಿಲ್ಲ ನಮ್ಮ ಅಸ್ತಿತ್ವ ಕಂಡುಕೊಳ್ಳಲು ಆಚರಿಸುತ್ತಿದ್ದೇವೆ ಎಂದರು.

ನಿವೃತ್ತ ಡಿಸಿಪಿ ಸಿದ್ದರಾಜು ಮಾತನಾಡಿ, ಸರಕಾರ ಚಿನ್ನದ ಅಂಬಾರಿಯಲ್ಲಿ ಸಂವಿಧಾನ ಪ್ರತಿ ಇಟ್ಟು ಮೆರವಣಿಗೆ ಮಾಡಬೇಕು ಎಂದು ಹೇಳಿದರು.

ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಸರ್ವ ಸಮಾನತೆ ಮನುಷ್ಯತ್ವ ಎತ್ತಿ ಹಿಡಿಯುವುದೇ ಧರ್ಮ. ಬುದ್ಧ ಕೊಟ್ಟ ಚಿಂತನೆ ಜಗತ್ತಿಗೆ ಬೇಕಾಗಿದೆ. ಸ್ವತಂತ್ರವಾದ ಆಲೋಚನೆ ಇದ್ದವರು ಬುದ್ಧರನ್ನು ಒಪ್ಪಿದ್ದಾರೆ. ಶೂದ್ರರು ಸ್ವಾಭಿಮಾನಿಗಳಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದವರು, ಜೈ ಮಹಿಷ, ಜೈ ಅಂಬೇಡ್ಕರ್, ಜೈ ಬುದ್ಧ, ಜೈ ಸಂವಿಧಾನ್ ಘೋಷಣೆ ಕೂಗಿದರು. ಕಾರ್ಯಕ್ರಮಕ್ಕೆ ಮೈಸೂರು ನಗರ, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಮಹಿಷನ ಅಭಿಮಾನಿಗಳು ಆಗಮಿಸಿದ್ದರು.

ಗಾಯಕ ಅಮ್ಮ ರಾಮಚಂದ್ರ, ದೇವಾನಂದ ವರಪ್ರಸಾದ್, ಸೇರಿದಂತೆ ಹಲವರು ಕ್ರಾಂತಿ ಗೀತೆ ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.

ಮೈಸೂರಿನ ಯಾವುದಾದರೊಂದು ಪ್ರಮುಖ ಸ್ಥಳದಲ್ಲಿ ಅಶೋಕ ಪುತ್ಥಳಿ ಸ್ಥಾಪಿಸಬೇಕು, ಮೈಸೂರು ದಸರಾ ಆಚರಣೆ ವೇಳೆ ಮಹಿಷ ಪ್ರತಿಮೆಗೂ ಸರಕಾರದ ವತಿಯಿಂದ ಪುಷ್ಪಾರ್ಚನೆ ಮಾಡಬೇಕು, ಮೈಸೂರು ಹೆಸರನ್ನು ಮಹಿಶೂರು ಎಂದು ಬದಲಾಯಿಸಬೇಕು ಎಂಬ ಮೂರು ನಿರ್ಣಯಗಳನ್ನು ಇದೇ ವೇಳೆ ಒಕ್ಕೋರಲಿನಿಂದ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸವಿತಾನಂದ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು, ಲೇಖಕ ಸಿದ್ದಸ್ವಾಮಿ, ಮಾಜಿ ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಸಿದ್ದಪ್ಪ, ಹೋರಾಟಗಾರ ಹರಿಹರ ಆನಂದಸ್ವಾಮಿ, ನಾಗರತ್ನ, ಅಶೋಕಪುರಂ ದಲಿತ ಮಹಾಸಭಾ ಅಧ್ಯಕ್ಷ ಸಿದ್ದರಾಜು, ಹಲವರು ಉಪಸ್ಥಿತರಿದ್ದರು.

ನಿಷೇಧಾಜ್ಞೆ

ಮಹಿಷ ದಸರಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದರು.

ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿತ್ತು.

ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆಯನ್ನು ಟಾರ್ಪಲ್‌ನಿಂದ ಮುಚ್ಚಲಾಗಿತ್ತು. ಬೆಟ್ಟಕ್ಕೆ ಆಯೋಜಿಸಿದ್ದ ಬೈಕ್‌ ರ್‍ಯಾಲಿಗೂ ಪೊಲೀಸರು ಅನುಮತಿ ನೀಡಲಿಲ್ಲ. ಸಂಜೆ 4ರ ಸುಮಾರಿಗೆ ಮಾಜಿ ಮೇಯರ್‌ ಪುರುಷೋತ್ತಮ್‌, ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ.ಕೆ.ಎಸ್‌.ಭಗವಾನ್‌ ಇತರ ಪ್ರಮುಖರನ್ನು ಬೆಟ್ಟಕ್ಕೆ ಕರೆದೊಯ್ದ ಪೊಲೀಸರು ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಟ್ಟರು.

ನಮ್ಮ ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲೇ ಅವಕಾಶವಿದ್ದರೂ, ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಬಳಿ ನಮಗೆ ಹೋಗಲು ಬಿಡದೆ ಅವಮಾನಿಸಲಾಗುತ್ತಿದೆ.ಮಹಿಷನ ಆಚರಣೆ ಮಾಡುವ ಬುದ್ದಿಜೀವಿಗಳು, ಪ್ರಗತಿಪರರು, ಮೂಲ ನಿವಾಸಿಗಳು ಢಕಾಯಿತರಲ್ಲ, ಬುದ್ಧ, ಅಂಬೇಡ್ಕರ್ ವಾದಿಗಳು, ಯಾರಿಗೂ ನಮ್ಮನ್ನು ತಡೆಯುವ ನೈತಿಕ ಶಕ್ತಿ ಇಲ್ಲ. ಚಾಮುಂಡಿ ಬೆಟ್ಟದ ಮಹಿಷನ ಪ್ರತಿಮೆ ಬಳಿ ೧೪೪ ನೇ ಸೆಕ್ಷನ್ ಜಾರಿ ಮಾಡಿ ಸಾಂಸ್ಕೃತಿಕ ಹಬ್ಬಕ್ಕೆ ಅವಮಾನ ಮಾಡುತ್ತಿದ್ದೀರಿ, ಎಂದು ಮಹಿಷ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿದರು.

(ವರದಿ ಚಿತ್ರ ಕೃಪೆ ವಾರ್ತ ಭಾರತಿ)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *