ಬೀದರ
ಶರಣರ ವಚನಗಳಲ್ಲಿ ಆದರ್ಶ ದಾಂಪತ್ಯದ ಮಾರ್ಗದರ್ಶನ ಇದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣಕ್ರಾಂತಿ ವಿಜಯೋತ್ಸವದ ಎರಡನೇ ದಿನವಾದ ಬುಧವಾರ ನಡೆದ ‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದ ಶಿವಂಗೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಮೂಲ ಘಟಕ ಕುಟುಂಬ. ಕುಟುಂಬದ ಕೇಂದ್ರ ಬಿಂದು ದಂಪತಿ. ಸತಿ-ಪತಿಗಳು ಒಂದಾಗಿದ್ದರೆ ಕುಟುಂಬದಲ್ಲಿ ಸಂತೋಷ- ಆನಂದ ಇರುತ್ತದೆ. ಸತಿ-ಪತಿಗಳಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ದುಃಖದ ಆಗರ ಆಗುತ್ತದೆ ಎಂದು ತಿಳಿಸಿದರು. ದಾಂಪತ್ಯದಲ್ಲಿ ಸರಸ ದಾಂಪತ್ಯ, ವಿರಸ ದಾಂಪತ್ಯ, ಸಮರಸ ದಾಂಪತ್ಯ, ಅನುಕೂಲ ದಾಂಪತ್ಯ, ಅನುರಾಗ ದಾಂಪತ್ಯ, ವಿಚಿತ್ರ ದಾಂಪತ್ಯಗಳಿವೆ ಎಂದು ಹೇಳಿದರು.

ನಿಜವಾದ ದಾಂಪತ್ಯ ದೇಹ ಎರಡಾದರೂ ಭಾವ ಒಂದಾಗುವಂತೆ ಇರಬೇಕು. ಎಣ್ಣೆ-ಬತ್ತಿ ಸೇರಿದಾಗ ಮಾತ್ರ ಜ್ಯೋತಿ ಬೆಳಗಲು ಸಾಧ್ಯ. ಹಾಗೆಯೇ ತಾಳ್ಮೆ, ಹೊಂದಾಣಿಕೆಯಿಂದ ಇಬ್ಬರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀಪ ಬೆಳಗಿದಂತೆ ಎಂದು ತಿಳಿಸಿದರು.
ಬಸವಣ್ಣ-ನೀಲಮ್ಮ, ದಾಸ-ದುಗ್ಗಳೆ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮರ ಆದರ್ಶಗಳನ್ನು ಅನುಸರಿಸಿದರೆ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು. ಬಸವಾದಿ ಶರಣರ ಕ್ರಾಂತಿಯಿಂದಾಗಿ ಇಂದು ಮಹಿಳೆ ಅಕ್ಷರ ಕಲಿತು ಎಲ್ಲ ಕ್ಷೇತ್ರಗಳಲ್ಲಿ ಪುರುಷನ ಸರಿಸಮನಾಗಿ ದುಡಿಯಲು ಸಾಧ್ಯವಾಗಿದೆ ಎಂದು ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ತಿಳಿಸಿದರು.
ವಚನಗಳ ಮಾರ್ಗದಲ್ಲಿ ನಡೆದರೆ ಸರ್ವ ಸಾಧನೆ ಸಾಧ್ಯ. ಸತಿ-ಪತಿಗಳು ಪರಸ್ಪರ ಪ್ರಗತಿಗೆ ಸಹಕರಿಸಿದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು.

ಸಂಸಾರವೆಂದರೆ ಮಾಯೆ, ದುಃಖವೆಂದ ಪ್ರಪಂಚಕ್ಕೆ ಸಂಸಾರವೆಂದರೆ ಸದ್ಗತಿ ಎಂದು ತೋರಿದವರು ಬಸವಣ್ಣನವರು. ಸತಿ-ಪತಿ ಜತೆ ಜತೆಯಾಗಿ ಸದ್ಗತಿ ಸಾಧಿಸುವ ಸತ್ಯದ ದಾರಿ ತೋರಿಸಿದರು, ಕಾಲುಗಳೆರಡಾದರೂ ಪರಸ್ಪರ ಅನೂನ್ಯತೆಯಿಂದ ನಡೆದರೆ ಮಾತ್ರ ಗುರಿ ತಲುಪುವಂತೆ, ದಂಪತಿ ಒಂದಾಗಿ ಸಾಗಬೇಕು ಎಂದು ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.