ಬಸವಭಕ್ತರು ಸಿಡಿದೇಳುವ ಮುನ್ನ ಸರ್ಕಾರ ಉಗ್ರಕ್ರಮ ಜರುಗಿಸಲಿ: ಸಾಣೇಹಳ್ಳಿ ಶ್ರೀ

ಸಾಣೇಹಳ್ಳಿ

ಒಂದು ಕಾಲದಲ್ಲಿ ನಮ್ಮ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದವರಲ್ಲಿ ಕನ್ನೇರಿ ಶ್ರೀಗಳೂ ಒಬ್ಬರು. ಆದರೆ ಇಂದು ಅವರ ಕೀಳು ಭಾಷೆಯ ನುಡಿಗಳನ್ನು ವಾಟ್ಸಪ್ ವೀಡಿಯೋದಲ್ಲಿ ಕೇಳಿದಾಗ ನಮ್ಮ ಗೌರವಕ್ಕೆ ಪಾತ್ರರಾದವರು ಇವರೇನ ಎನ್ನುವ ಸಂಶಯ, ಅನುಮಾನ ಬಂತು.

ಒಬ್ಬ ವ್ಯಕ್ತಿಗೆ ಸಾರ್ವಜನಿಕ ಮನ್ನಣೆ, ಮಠಾಧಿಕಾರ, ಸಂಪತ್ತು ಬಂದಾಗ ಅವರು ಬಸವಣ್ಣನವರಂತೆ ‘ಮುಗಿದ ಕೈ, ಬಾಗಿದ ತಲೆಯ’ ಭೃತ್ಯಾಚಾರಿಗಳಾಗಿರಬೇಕಿತ್ತು. ಬದಲಾಗಿ ಅಹಂಕಾರ, ಅವಿವೇಕದ ಮೊಟ್ಟೆಯಂತಾದರೆ ಹೇಗೆ?

ಅವರು ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ದ ಎಲ್ಲ ಸ್ವಾಮಿಗಳ ಬಗ್ಗೆ ಆಡಿರುವ ಕೀಳು ಪದಗಳು ಅವರ ನೈಜ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಅವರಿಗೂ ಒಬ್ಬ ಹೆತ್ತ ತಾಯಿ ಇದ್ದಾಳೆಂಬುದನ್ನು ಮರೆತು ಇನ್ನೊಬ್ಬರ ತಾಯಿಯ ಶೀಲವನ್ನೇ ಪ್ರಶ್ನಿಸುವ ಇವರೆಂತಹ ಶೀಲವಂತರು? ಇವರು ಯಾವುದರಿಂದ ಹೊಡೆಯಬೇಕೆಂದು ಅಪ್ಪಣೆ ಕೊಡಿಸಿದ್ದಾರೋ ಅವುಗಳ ಪ್ರಯೋಗ ಅವರ ಮೇಲೆಯೇ ಆದರೆ ಗತಿ ಏನು ಎನ್ನುವ ಆತಂಕ ನಮಗಿದೆ.

ಒಬ್ಬ ಗುರುವಿನ ಲಕ್ಷಣ ಕೇವಲ ಕಾವಿ, ಮಠ, ಹೊಗಳುಭಟ್ಟರು ಅಲ್ಲ; ಅರಿವು, ಆಚಾರ, ಅನುಭಾವ. ಆಕಾಶಕ್ಕೆ ಉಗುಳಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆ ಇಲ್ಲದಿದ್ದರೆ ಏನಾಗುತ್ತದೆ ಎಂದು ಅರಿಯಬೇಕು.

‘ಬಸವ ಸಂಸ್ಕೃತಿ ಅಭಿಯಾನ’ದ ಯಶಸ್ಸು ಕೆಲವು ಬಸವ ವಿರೋಧಿಗಳ ನಿದ್ರೆ ಕೆಡಿಸಿರುವುದು, ಉಂಡ ಅನ್ನ ಅರಗದೆ ಹೊಟ್ಟೆ ಬೇನೆಗೆ ಕಾರಣವಾಗಿರುವುದು ಸತ್ಯವಾದರೂ ಅವರಾರೂ ಕನೇರಿ ಸ್ವಾಮಿಗಳಂತೆ ವಿಷವನ್ನು ಕಕ್ಕಿಲ್ಲ. ಈಗ ಅವರಿಗೆ ಮಠಾಧೀಶರ ಭಕ್ತರು ಮತ್ತು ಸಾರ್ವಜನಿಕರೇ ಬುದ್ಧಿ ಕಲಿಸುವ ಕಾಲ ಬಂದಿದೆ.

ಅವರು ಕಾನೂನು ಕೈಗೆ ತೆಗೆದುಕೊಂಡು ಬಂಡೇಳುವ ಮುನ್ನ ಸರ್ಕಾರ ಮತ್ತು ರಕ್ಷಣಾ ಇಲಾಖೆಯವರು ತಕ್ಷಣ ಈ ಸ್ವಾಮಿಗಳ ಮೇಲೆ ಉಗ್ರಕ್ರಮ ಜರುಗಿಸಬೇಕು. ಸ್ವಾಮಿಗಳು ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಸಾರ್ವಜನಿಕವಾಗಿಯೇ ಮಠಾಧೀಶರ ಕ್ಷಮೆ ಕೇಳುವ ವಿವೇಕ ತೋರಬೇಕು. ಅವರ ಬಾಯಿಂದ ಬಂದಿರುವ ಬಿರುನುಡಿಗಳು ಅವರ ಸ್ವಾಮಿತನವನ್ನೇ ಹರಾಜಿಗಿಟ್ಟಿವೆ. ಅವರೊಬ್ಬ ಬಸವ ಪರಂಪರೆಯ ಸ್ವಾಮಿಗಳಾಗಿ ಬಸವ ತತ್ವಕ್ಕೆ ದ್ರೋಹ ಬಗೆದು ತಮ್ಮ ಕರಾಳ ಮುಖದ ದರ್ಶನ ಮಾಡಿಸಿದ್ದಾರೆ. ಅವರ ಸ್ವಾಮಿತನದ ಹಿಂದಿರುವ ಮುಖವಾಡವನ್ನು ಅವರೇ ಅನಾವರಣ ಮಾಡಿಕೊಂಡಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಆತ್ಮಾವಲೋಕನ ಮಾಡಿಕೊಂಡು ಬಸವಣ್ಣನವರಂತೆ ‘ಎನ್ನತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ’ ಎಂದುಕೊಂಡು ತಪ್ಪನ್ನು ತಿದ್ದಿಕೊಳ್ಳುವ ಸದ್ಬುದ್ಧಿಯನ್ನು ಬಸವಾದಿ ಶರಣರು ಕನೇರಿ ಸ್ವಾಮಿಗಳಿಗೆ ಕರುಣಿಸಲಿ ಎಂದು ಆಶಿಸುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
1 Comment
  • ಕಾವಿ ಬಟ್ಟೆ ಬಿಚ್ಚಿ ಹೊಡಿಬೇಕು ಇಂತವರಿಗೆ ಕಾವಿ ಬಟ್ಟೆಗೆ ಶೋಭೆ ತರೋಲ್ಲ ಅವಿವೇಕಿ ಸ್ವಾಮಿ ಕನೆರಿ ಸ್ವಾಮಿ

Leave a Reply

Your email address will not be published. Required fields are marked *