ಬಸವಕಲ್ಯಾಣ
ಕನ್ನೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳ ಹೇಳಿಕೆಯನ್ನು ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭೆ ಜಂಟಿಯಾಗಿ ಖಂಡಿಸಿವೆ.
ಇಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ 24 ನೇಯ ಬೃಹತ್ ಕಲ್ಯಾಣಪರ್ವ ಕಾರ್ಯಕ್ರಮದ ರಾಷ್ಟ್ರೀಯ ಬಸವದಳ ಸಮಾವೇಶದ ವೇದಿಕೆಯಿಂದ ಕನ್ನೇರಿ ಶ್ರೀಗಳ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿವೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನೇರಿ ಕಾಡಸಿದ್ದೇಶ್ವರ ಮಠವು ಅಪ್ಪಟ ಲಿಂಗಾಯತ ಪರಂಪರೆಯ ಮಠವಾಗಿದ್ದು ಆ ಪರಂಪರೆಯನ್ನು ಹೊತ್ತು ಸಾಗಬೇಕಿದ್ದ ಈಗಿನ ಪೂಜ್ಯರು ಅಪ್ಪಟ ಸನಾತನಿಗಳ ಏಜಂಟರಂತೆ ವರ್ತಿಸಿ ಲಿಂಗಾಯತ ಮಠಾಧಿಪತಿಗಳ ಮೇಲೆ ಸುಳ್ಳು ಅಪವಾದ ಮಾಡಿದ್ದಲ್ಲದೇ ಕೀಳುಮಟ್ಟದ ಅಸಂವಿಧಾನಿಕ ಕೆಟ್ಟ ಪದಗಳನ್ನು ಬಳಸಿ ಹೇಳಿಕೆ ನೀಡಿದ್ದು ಅವರ ಭೌಧ್ಧಿಕ ಅಧಪತನವನ್ನ ಎತ್ತಿ ತೋರಿಸುತ್ತದೆ.
ಅವರ ನಡೆ ಹೀಗೆ ಮುಂದುವರೆದಲ್ಲಿ ರಾಷ್ಟ್ರೀಯ ಬಸವದಳ ಸಂಘಟನೆಯ ಉಗ್ರ ಪ್ರತಿಭಟನೆಯನ್ನು ಅವರು ಹೋದಲೆಲ್ಲ ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನು ನೀಡುತ್ತೇವೆ.
ತಾತ್ವಿಕವಾಗಿ ಲಿಂಗಾಯತರು ಗುಡಿಗುಂಡಾರಕ್ಕೆ ಅಲೆಯುವವರಲ್ಲ ಎನ್ನುವುದು ವಚನ ಶಾಸ್ತ್ರದಿಂದ ರುಜುವಾತಾಗಿದೆ ಇದು ಶ್ರೀಗಳ ಅರಿವಿಗೂ ಇರುತ್ತದೆ ಆದರೆ ಸನಾತನವಾದಿಗಳನ್ನು ಮೆಚ್ಚಿಸಲು ಅವರಿಂದ ರಾಜಕೀಯ ಲಾಭ ಪಡೆಯಲು ಈ ರೀತಿಯ ಕ್ಷುಲ್ಲಕ ಹೇಳಿಕೆಗಳನ್ನ ನೀಡುತಿದ್ದಾರೆ.
ಪೂಜ್ಯರು ತಮ್ಮ ಕನ್ನೇರಿ ಮಠದ ಮೂಲ ಪುರುಷ ಕಾಡ ಸಿದ್ದೇಶ್ವರರ ಈ ವಚನವನ್ನ ಕಣ್ತೆರೆದು ನೋಡಬೇಕಾಗಿದೆ ಆ ವಚನ ಹೀಗಿದೆ…
ಪಂಚಾಕ್ಷರವೆಂದಡೆ ಪರಬ್ರಹ್ಮ.
ಪಂಚಾಕ್ಷರವೆಂದಡೆ ಪರಶಿವ.
ಪಂಚಾಕ್ಷರವೆಂದಡೆ ಪರವಸ್ತುವಿನ ನಾಮ.
ಪಂಚಾಕ್ಷರವೆಂದಡೆ ಭವದುರಿತ ಬಿಟ್ಟೋಡುವುದು.
ಪಂಚಾಕ್ಷರವೆಂದಡೆ ಬಹುಜನ್ಮದ ದೋಷ ಪರಿಹಾರವಾಗುವುದು.
ಪಂಚಾಕ್ಷರವೆಂದಡೆ ಸಕಲ ತೀರ್ಥಕ್ಷೇತ್ರಯಾತ್ರೆಯಾದ ಪುಣ್ಯಫಲ ಪ್ರಾಪ್ತಿಯಾಗುವುದು.
ಪಂಚಾಕ್ಷರವೆಂದಡೆ ಅಷ್ಟಮಹಾಸಿದ್ದಿ ನವಮಹಾಸಿದ್ಧಿ ಅಷ್ಟಾಂಗಯೋಗದ ಫಲ ಅಷ್ಟೆಶ್ವರ್ಯಸಂಪತ್ತು ದೊರಕೊಳ್ಳುವುದು ನೋಡಾ.
ಇಂತಪ್ಪ ಪಂಚಾಕ್ಷರೀಮಂತ್ರದ ಮಹತ್ವವ ಕಂಡು ಮನ ಕರಗಿ ತನು ಉಬ್ಬಿ, ಪಂಚಾಕ್ಷರಿ, ಪಂಚಾಕ್ಷರಿಯೆಂದು ನೆನೆನೆನೆದು ಭವಹರಿದು ಪರಶಿವಲಿಂಗವ ಕೂಡಿ ಸುಖಿಯಾಗಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
ಹೀಗೆ ಕನ್ನೇರಿ ಮಠದ ಮೂಲ ಪುರುಷರು ಮುಕ್ತಿಗೆ ಪರಬ್ರಹ್ಮ, ಪರಶಿವನ ಪಂಚಾಕ್ಷರ ಮಂತ್ರವೇ ಮೂಲ ಎಂದು ಸ್ಪಷ್ಟವಾಗಿ ಹೇಳಿದರೂ ಈ ಸ್ವಾಮಿಗಳು ಗುಡಿ ಸಂಸ್ಕೃತಿಯನ್ನ ಪೋಷಿಸುವ ಗೀಳಿಗೆ ಬಿದ್ದಿರುವುದು ಕೇವಲ ಲಿಂಗಾಯತರಿಗೆ ಅಷ್ಟೇ ಅಲ್ಲದೇ ತಮ್ಮ ಮಠದ ಮೂಲಪುರುಷರಿಗೂ ಮಾಡುವ ಅವಮಾನವಾಗಿರುತ್ತದೆ.
ತೀರ್ಥ ಕ್ಷೇತ್ರ ಪುಣ್ಯ ಕ್ಷೇತ್ರ ಎಂದು ಲಿಂಗಾಯತರು ಅಲೆಯಬಾರದು ಎಂದು ಎಡೆಯೂರು ಸಿದ್ಧಲಿಂಗೇಶ್ವರರು ತಮ್ಮ ವಚನದಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ ಆ ವಚನವು ಹೀಗಿದೆ.
ಕೈಯಲ್ಲಿ ಹಣ್ಣಿದ್ದಂತೆ ಮರನನೇರಿ, ಕೊಂಬ ಬಾಗಿಸಿ
ಕಾಯ ಕೊಯಿವ ಅರೆಮರುಳನಂತೆ
ಅನಾದಿಮೂಲದೊಡೆಯ
ತನ್ನ ಕರಸ್ಥಲ ಮನಸ್ಥಲದಲ್ಲಿಪ್ಪುದ ತಾನರಿಯದೆ
ಬೇರೆ ಲಿಂಗವುಂಟು, ಬೇರೆ ಕ್ಷೇತ್ರವುಂಟು ಎಂದು
ಹಲವು ಲಿಂಗಕ್ಕೆ ಹರಿದು ಹಂಬಲಿಸುವ
ಈ ಸೂಳೆಗೆ ಹುಟ್ಟಿದವರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪ್ರಸಾದವಿಲ್ಲ
ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
ಹೀಗೆ ಲಿಂಗಾಯತ ಧರ್ಮವು ಗುಡಿಗುಂಡಾರದ ಧರ್ಮವಾಗದೇ ಅಪ್ಪಟ ಏಕದೇವೋಪಾಸನೆಯ ಧರ್ಮವಾಗಿದೆ, ಹಾಗಾಗಿ ಅದೃಷ್ಯಕಾಡಸಿದ್ದೇಶ್ವರ ಸ್ವಾಮಿಗಳು ಸರಿಯಾಗಿ ಲಿಂಗಾಯತ ಧರ್ಮ ಅಭ್ಯಾಸ ಮಾಡಬೇಕು ಮತ್ತು ಆ ಮಠದ ಪೀಠದಲ್ಲಿ ಮುಂದುವರೆಯಬೇಕು ಅಥವಾ ಸನಾತನಿಗಳ ಹಿಂದೆ ಹೋಗಿ ಸನಾತನ ಮಠವನ್ನ ಕಟ್ಟಿಕೊಳ್ಳಬೇಕು ವಿನಹ ಲಿಂಗಾಯತ ಮಠಕ್ಕೆ ಕಳಂಕವಾಗಬಾರದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.
ಲಿಂಗಾಯತರು ಎಚ್ಚರವಾಗಿದ್ದಾರೆ ನಿಮ್ಮ ಆಟ ಈಗ ನಡೆಯುವದಿಲ್ಲ, ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಬಸವ ಭಕ್ತಿ ಉಕ್ಕಿ ಸಾಗರದಂತೆ ಹರಿದಿದ್ದು ಬಸವಣ್ಣನವರ ವಿರೋಧಿಗಳಾದ ನಿಮಗೆ ಸಹಿಸಿಕಳ್ಳಲಾಗದೇ ಇಂತಹ ಕೆಳಮಟ್ಟದ ಹೇಳಿಕೆ ನೀಡಿದ್ದಿರಿ ಎಂದು ಸ್ಪಷ್ಟವಾಗಿ ಅರ್ಥವಾಗುತ್ತಿದೆ.