ವಿಜಯಪುರ
ದೇಶದ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಬೂಟು ಎಸೆದ ಪ್ರಕರಣವನ್ನು ಖಂಡಿಸಲು ಅಕ್ಟೊಬರ್ 16ರಂದು ವಿಜಯಪುರ ಬಂದ್‌ಗೆ ಆಚರಿಸಲಾಗುತ್ತಿರುವ ವಿಜಯಪುರ ಬಂದ್ ಆಚರಣೆಯಲ್ಲಿ ಸಂವಿಧಾನದ ಮೇಲೆ ನಂಬಿಕೆ ಇರುವವರು, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ವಿಶ್ವಾಸ ಉಳ್ಳುವರು, ದೇಶಾಭಿಮಾನಿಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳುವರೆಂದು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಅಹಿಂದ ಒಕ್ಕೂಟದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘ ಪರಿವಾರಕ್ಕೆ ಮುಸ್ಲಿಂರು ಟಾರ್ಗೆಟ್ ಅಲ್ಲ, ದಲಿತರೇ ಮೂಲ ಟಾರ್ಗೆಟ್, ದಲಿತರನ್ನು ದಮನ ಮಾಡುವ ವ್ಯವಸ್ಥಿತ ಪ್ರಯತ್ನವನ್ನು ಸಂಘ ಪರಿವಾರ ಮಾಡುತ್ತಲೇ ಇದೆ, ಇಂದಿಗೂ ಸಂಘ ಪರಿವಾರದ ಮನಸ್ಥಿತಿ ಬದಲಾಗಿಲ್ಲ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಪರಿವಾರ, ಸನಾತನವಾದಿಗಳಿಗೆ ಸಮಾನತೆ ಬೇಕಾಗಿಲ್ಲ, ದಲಿತರಿಗೆ ಸಮಾನತೆ ಕೊಡುವುದಾದರೆ ಸ್ವಾತಂತ್ರ‍್ಯವೇ ಬೇಡ ಎಂದು ಸಂಘ ಪರಿವಾರದ ಪ್ರಮುಖರೇ ಬ್ರಿಟಿಷರಿಗೆ ಹೇಳಿದ್ದರು, ಈ ಒಂದು ಅಂಶದ ಮೇಲೆಯೇ ಸಂಘ ಪರಿವಾರಕ್ಕೆ ದಲಿತರ ಶ್ರೇಯೋಭಿವೃದ್ಧಿ ಬೇಕಾಗಿಲ್ಲ ಎಂದು ತೋರುತ್ತದೆ ಎಂದರು.
ನಾವು ಸೇರಿದಂತೆ ದೇಶವಾಸಿಗಳೆಲ್ಲರೂ ಸನಾತನಿಗಳೇ, ನಾನು ಸಹ ಸನಾತನಿಯೇ, ಆದರೆ ಸಂಘ ಪರಿವಾರದ ನಕಲಿ ಸನಾತನವಾದಿ ನಾನಲ್ಲ, ಸನಾತನದ ನೈಜ ಅರ್ಥವನ್ನೇ ಸಂಘ ಪರಿವಾರ ಹಾಳು ಮಾಡುತ್ತಿದೆ, ಪಥಸಂಚಲನೆಯಿಂದ ದೇಶಕ್ಕೆ ಏನು ಪ್ರಯೋಜನ, ಲಾಠಿ ಹಿಡಿಯುವುದು ಎಂದರೆ ಏನು ಎಂದು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಷೂ ಎಸೆದ ಪ್ರಕರಣ ಅತ್ಯಂತ ನೋವು ತರಿಸಿದೆ, ಇದನ್ನು ಖಂಡಿಸಿ ಇದೇ ದಿ.೧೬ ರಂದು ವಿಜಯಪುರ ಬಂದ್ ಕರೆ ನೀಡಲಾಗಿದೆ, ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಿ ಎಂದರು.
ಸಂಘ ಪರಿವಾರ ನಿಷೇಧಿಸುವ ತಾಕತ್ತು ಸರ್ಕಾರಕ್ಕೆ ಇದೆ, ಆದರೆ ಇದು ಸಮಯವಲ್ಲ, ಈ ಹಿಂದೆಯೂ ಅನೇಕ ಬಾರಿ ಸಂಘ ಪರಿವಾರ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು ಎಂದರು.
ತ್ರಿವರ್ಣ ಧ್ವಜಕ್ಕೂ ಸಹ ಸಂಘ ಪರಿವಾರ ಗೌರವ ನೀಡುವುದಿಲ್ಲ, ಸಂಘದ ಆಡಿಟ್ ಸಹ ನಡೆಯುವುದಿಲ್ಲ, ನಮ್ಮ ಶತ್ರುರಾಷ್ಟ್ರ ಪಾಕ್ ಪರ ಬೇಹುಗಾರಿಕೆ ನಡೆಸುವಲ್ಲಿ ಅನೇಕ ಸಂಘ ಪರಿವಾರದವರು ಭಾಗಿಯಾಗಿದ್ದು ಸಹ ಬೆಳಕಿಗೆ ಬಂದಿದೆ ಎಂದರು.
ಶರಣ ಚಿಂತಕ ಜೆ.ಎಸ್. ಪಾಟೀಲ ಮಾತನಾಡಿ, ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ನಡೆದಿರುವ ಷೂ ದಾಳಿಯನ್ನು ಪ್ರತಿಯೊಬ್ಬರು ಖಂಡಿಸಬೇಕು, ಇದು ಬಹುತ್ವ ಸಂಸ್ಕೃತಿಯ ಮೇಲೆ ನಡೆದ ದಾಳಿಯಾಗಿದೆ, ಪಕ್ಷಬೇಧ ಮರೆತು ಬಂದ್ ಬೆಂಬಲಿಸಬೇಕು ಎಂದು ಕೋರಿದರು.
ಹೋರಾಟಗಾರ ಪ್ರಭುಗೌಡ ಪಾಟೀಲ ಮಾತನಾಡಿ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಎಲ್ಲ ಪಕ್ಷಗಳ ಪ್ರಮುಖರಿಗೂ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಲಾಗಿದೆ ಎಂದರು.
ಜೆ.ಎಲ್.ಎಂ. ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ, ಡಾ. ರವಿಕುಮಾರ ಬಿರಾದಾರ, ಡಾ, ಪ್ರಭು ಪಾಟೀಲ, ಎಂ.ಎಸ್. ಪಾಟೀಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.