ಕನ್ನೇರಿ ಸ್ವಾಮಿಯಿಂದ ಕೀಳು ಮಟ್ಟದ ಭಾಷೆ ಪ್ರಯೋಗ: ಹೈಕೋರ್ಟ್‌ ಛೀಮಾರಿ 

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

‘ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕನ್ನೇರಿ ಮಠದ ಕಾಡುಸಿದ್ದೇಶ್ವರ ಸ್ವಾಮೀಜಿ ಬಳಸಿರುವ ನುಡಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಸ್ವಾಮೀಜಿ ಸಾಮಾನ್ಯರಿಗಿಂತಲೂ ಕೆಳ ಹಂತದ ಭಾಷೆ ಬಳಕೆ ಮಾಡಿದ್ದಾರೆ’ ಎಂದು ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

ವಿಜಯಪುರ ಜಿಲ್ಲೆಗೆ ಭೇಟಿ ನೀಡುವುದನ್ನು ಪ್ರತಿಬಂಧಿಸಿ ವಿಜಯಪುರ ಜಿಲ್ಲಾಧಿಕಾರಿ ಗುರುವಾರವಷ್ಟೇ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕಾಡುಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಸ್ವಾಮೀಜಿಯ ಹಿತದೃಷ್ಟಿಯಿಂದಲೇ ಅವರ ವಿಜಯಪುರ ಭೇಟಿಯನ್ನು ಪ್ರತಿಬಂಧಿಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ, ಜಿಲ್ಲಾ ಎಸ್‌ಪಿಯವರ ವರದಿಗಳನ್ನು ಆಧರಿಸಿಯೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ಸ್ಪಷ್ಟಪಡಿಸಿದರು.

‘ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. ಕನ್ನೇರಿ ಸ್ವಾಮೀಜಿಗಳ ಭಕ್ತರೇ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬೇಡ ಎಂದು ಹೇಳುತ್ತಿದ್ದಾರೆ. ಸ್ವಾಮೀಜಿ ಬಸವನಬಾಗೇವಾಡಿಗೆ ತೆರಳುವುದರಿಂದ ಅಲ್ಲಿ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿವೆ’ ಎಂದು ಶಶಿಕಿರಣ ಶೆಟ್ಟಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಇದಕ್ಕೂ ಮುನ್ನ ಅರ್ಜಿದಾರ ಸ್ವಾಮೀಜಿ ಪರ ಹೈಕೋರ್ಟ್‌ ವಕೀಲ ಪಿ.ಪ್ರಸನ್ನ ಕುಮಾರ್, ‘ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಸ್ವಾಮೀಜಿ ಅವರಿಗೆ ನಿರ್ಬಂಧ ಹೇರಿರುವುದು ಒಪ್ಪುವಂತಹುದಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ನ್ಯಾಯಪೀಠ, ‘ಸ್ವಾಮೀಜಿ 17ಕ್ಕೇ ಏಕೆ ಅಲ್ಲಿಗೆ ತೆರಳಬೇಕು. ಬೇರೊಂದು ದಿನ ಹೋಗಬಹುದಲ್ಲವೇ’ ಎಂದು ಪ್ರಶ್ನಿಸಿ, ‘ಈಗಾಗಲೇ ಸಮಾಜದಲ್ಲಿ ಅಶಾಂತಿಯ ವಾತಾವರಣ ತಾಂಡವವಾಡುತ್ತಿದೆ. ಆದಾಗ್ಯೂ, ಸ್ವಾಮೀಜಿಯವರ ವಿಜಯಪುರ ಜಿಲ್ಲೆ ಭೇಟಿಗೆ ವಿಧಿಸಿರುವ ನಿರ್ಬಂಧ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಲಿದೆ. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂಬುದು ತಿಳಿದು ಬಂದರೆ ಸ್ವಾಮೀಜಿ ಆದಂಥವರು ಅಂತಹ ಕಡೆ ನಾನು ಬರುವುದೇ ಇಲ್ಲ ಎಂದು ಹೇಳುವಲ್ಲಿ ಮೊದಲಿಗರಾಗಬೇಕು’ ಎಂದು ನುಡಿಯಿತು.

ಇದಕ್ಕೆ ಪ್ರಸನ್ನ ಕುಮಾರ್, ‘ಸ್ವಾಮೀಜಿಯವರ ಬಸವನ ಬಾಗೇವಾಡಿ ಭೇಟಿ ಪೂರ್ವನಿರ್ಧರಿತ. ನಾಳೆ (ಅ.17) ಬಸವನ ಬಾಗೇವಾಡಿಯಲ್ಲಿ ಸಮರ್ಥ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮವಿದೆ. ಅಲ್ಲಿ ಅವರ ಪ್ರವಚನವಿದೆ. ಮದುವೆ ದಿನ, ಗಂಡಿಗೇ ಮದುವೆಗೆ ಹೋಗಬೇಡ ಎಂದರೆ ಹೇಗೆ’ ಎಂದು ಕೇಳಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ನಾಳೆ (ಅ.17) ಬೆಳಿಗ್ಗೆ 10:30ಕ್ಕೆ ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತು. ಸ್ವಾಮೀಜಿ ಪರ ಕಲಬುರಗಿಯ ಹೈಕೋರ್ಟ್ ವಕೀಲ ಸಚಿನ್‌ ಎಂ.ಮಹಾಜನ್ ವಕಾಲತ್ತು ವಹಿಸಿದ್ದಾರೆ.

(ಕೃಪೆ – ಬಾರ್ ಅಂಡ್ ಬೆಂಚ್)

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *