ನ್ಯಾಮತಿ
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ವಚನಗಳ ಗಾಯನ ತರಬೇತಿ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
‘ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಚನಗಳ ಗಾಯನ ತರಬೇತಿ ಶಿಬಿರ ನಡೆಸಿ, ಜಿಲ್ಲಾ ಕೇಂದ್ರದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗುವುದು’ ಎಂದು ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ಗೌರವ ಸಲಹೆಗಾರರಾದ ಯಶಾ ದಿನೇಶ ತಿಳಿಸಿದರು.

12ನೇ ಶತಮಾನದ ಶರಣೆಯರು ರಚಿಸಿರುವ ವಚನಗಳು ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಿದ್ದು, ಅವುಗಳನ್ನು ಕಲಿಯುವುದರ ಜೊತೆಗೆ ಅನುಷ್ಠಾನ ಮಾಡಬೇಕು’ ಎಂದು ಸಲಹೆ ನೀಡಿದರು.
ಇದೇ ವೇಳೆ ಕದಳಿ ವೇದಿಕೆಯ ಚಟುವಟಿಕೆಗಳಿಗಾಗಿ ₹ 5000 ನೆರವು ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಾಸೋಹಿಗಳಾದ ನ್ಯಾಮತಿ ಗುರು ಶಿಷ್ಯರ ಸಂಗಮ ಟ್ರಸ್ಟಿನ ಉಪಾಧ್ಯಕ್ಷರಾದ ಬಿ.ಹೆಚ್. ಮಂಜಪ್ಪ “ಪ್ರಾಥಮಿಕ ಶಾಲೆಯಲ್ಲಿ ಓದಿದಂತಹ ವಚನಗಳ ಅನುಷ್ಠಾನಗೊಳಿಸುವ ಕ್ರಿಯೆ ಇಂದು ಆಗಬೇಕು ಎಂದು ಹೇಳಿದರು.

ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ಮಮತಾ ನಾಗರಾಜ, “ವಚನಗಳನ್ನು ಪಾಲಿಸಿದರೆ ಇವುಗಳ ಅವಶ್ಯಕತೆ ಇರುವುದಿಲ್ಲ, ಆದ್ದರಿಂದ 900 ವರ್ಷಗಳಾದರೂ ಪ್ರಸ್ತುತವಾಗಿರುವ ವಚನಗಳನ್ನು ನಾವು ನಿರಂತರವಾಗಿ ಅಧ್ಯಯನ ಮಾಡಬೇಕು. ವಚನಗಳನ್ನು ನಾವು ಪಾಲಿಸಿದಲ್ಲಿ ಕೋರ್ಟು ಕಚೇರಿಗಳು ಬೇಕಾಗಿಲ್ಲ.
ಬಸವಣ್ಣನವರನ್ನು ಪೂಜಿಸುವುದಲ್ಲ. ಅವರ ವಚನಗಳನ್ನು ಕಲಿತು, ಅನುಷ್ಠಾನಕ್ಕೆ ತರಬೇಕು. ವಚನ ಕಲಿಕೆ ಪ್ರತಿದಿನ ಅಭ್ಯಾಸವಾಗಬೇಕು. ಮಕ್ಕಳಿಗೆ ವಚನಗಳ ಮಹತ್ವ ತಿಳಿಸುವ ಜವಾಬ್ದಾರಿ ಪೋಷಕರಿಗೆ ಇರಬೇಕು,” ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಶಿವಯೋಗಿ, ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಅಂಬಿಕಾ ಬಿದರಕಟ್ಟೆ ಇದ್ದರು.
50 ಶಿಬಿರಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆಯ ಸದಸ್ಯರಿಂದ ಪ್ರಾರ್ಥನೆ, ಸ್ವಾಗತ ಉಷಾ ದೇವರಾಜ್, ವಂದನಾರ್ಪಣೆ ಭಾಗ್ಯ, ನಿರೂಪಣೆ ಸುಮಲತಾ ಇವರಿಂದ ನೆರವೇರಿತು.