ಡಾ. ತಾರಾನಾಥ ಅವರಿಗೆ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ಹಿರಿಯ ಸಂಶೋಧಕ ಡಾ. ಎನ್. ಎಸ್. ತಾರಾನಾಥ ಅವರಿಗೆ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ  ಪ್ರದಾನ ಮಾಡಲಾಯಿತು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಧಾರವಾಡದ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಸಂಶೋಧನೆ ಎನ್ನುವುದು ಅಗ್ನಿಗರ್ಭವಿದ್ದಂತೆ. ಈ ಕ್ಷೇತ್ರದಲ್ಲಿ ತೊಡಗಿರುವವರಿಗೆ ಸಮಾಧಾನ ಚಿತ್ತತೆ ಬಹಳ ಅವಶ್ಯ. ಸಂಶೋಧನಾ ಕ್ಷೇತ್ರವು ಸೀಮಿತವಾದ ವಲಯವಾಗಿದೆ. ಸಂಶೋಧಕರದ್ದು ಸಣ್ಣ ಸಂಸಾರವಾಗಿದೆ. ಏಕೆಂದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹಳ ಕಡಿಮೆ. ಈ ಕ್ಷೇತ್ರವನ್ನು ಹಚ್ಚಿಕೊಳ್ಳುವವರು ಕಡಿಮೆ. ಹೀಗಾಗಿ ಎಲ್ಲರೂ ಒಟ್ಟಿಗೆ ತೊಡಗಿಕೊಳ್ಳುವುದು ಯೋಗವಾಗಿದೆ ಎಂದರು.

ಸಂಶೋಧನೆಗಳು ಸಮಾಜಕ್ಕೆ ಅಗತ್ಯ. ಸಮಾಜಕ್ಕೆ ಉಪಕಾರವಾಗುವ, ಅಂತರಂಗ, ಬಹಿರಂಗಗಳಿಗೆ ಪ್ರಭಾವ ಬೀರುವ ಅಂಶಗಳನ್ನು ಅದು ಒಳಗೊಂಡಿರಲಿದೆ. ಸಂಶೋಧನೆಗಳು ನಿರ್ಭಿಡೆಯಿಂದ ಕೂಡಿದ್ದು, ಅವುಗಳ ವ್ಯಾಖ್ಯಾನಗಳು ಬಹಳ ವಿಶ್ವಾಸದಿಂದ ಇರಲಿವೆ ಎಂದರು.

ಎಲ್ಲಿಯವರೆಗೆ ವ್ಯಕ್ತಿಯು ಜ್ಞಾಪಕದಲ್ಲಿ ಇರುತ್ತಾನೆ ಎಂದರೆ ಆತನ ಬರವಣಿಗೆಗಳು ಸತ್ವವಿರುವ ತನಕ. ವ್ಯಕ್ತಿಯ ಆಕಾರ ಮರೆತು ಹೋಗಬಹುದು, ಆತನ ಉಪನ್ಯಾಸಗಳು ಮರೆತು ಹೋಗಬಹುದು, ಆದರೆ ಆತ ಕಪ್ಪು ಬಿಳಿಪಿನಲ್ಲಿ ಉಳಿಸಿ ಹೋಗುವ ಅಕ್ಷರಗಳು ಹೆಚ್ಚುಕಾಲ ಜೀವಂತವಾಗಿ ಇರಲಿವೆ. ಇದೇ ಅವನು ಗಳಿಸಿಕೊಂಡ ಪರಮಾರ್ಥವಾಗಿರಲಿದೆ ಎಂದು ಹೇಳಿದರು.

ಡಾ. ಎಂ.ಎಂ. ಕಲಬುರ್ಗಿ ಅವರ ಸಂಶೋಧನೆಗಳು ಸಾಹಿತ್ಯ ವಿಶ್ಲೇಷಣೆ, ಸಾಮಾಜಿಕ ವಿಮರ್ಷೆಗಳನ್ನು ಒಳಗೊಂಡಿದ್ದವು. ತನ್ಮೂಲಕ ಅವರು ರಾಜ್ಯಾದ್ಯಂತ ಗುಡುಗಾಡಿದರು. ಪ್ರಾಚೀನ ಸಾಹಿತ್ಯ, ಮಧ್ಯಯುಗದ ಸಾಹಿತ್ಯವನ್ನು ಕುರಿತು ಅವರು ಸಂಶೋಧನೆಗಳನ್ನು ನಡೆಸಿದರು. ಇದು ಕೆಲವರಿಗೆ ಇಷ್ಟವಾಗಲಿಲ್ಲ.

ಹೊರೆ ಹೊರುವವರಿಗೆ ಹೊರೆಯನ್ನು ಹೊರೆಸುವುದೇ ಜಾಸ್ತಿ. ಅದೇ ರೀತಿ ತಾರಾನಾಥರೂ ಕೂಡ ನಿಘಂಟಿನ ಕೆಲಸ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ತನ್ಮೂಲಕ ಕನ್ನಡದ ಕೈಂಕರ್ಯ ಮಾಡಿದ್ದಾರೆ. ಮೂಲಾಧಾರಗಳನ್ನು ಕಟ್ಟುವ ಗಟ್ಟಿಗೊಳಿಸುವ ಕಾರ್ಯ ನಿರ್ವಹಿಸಿದ್ದಾರೆ ಎಂದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ. ಎನ್. ಕೆ. ಲೋಲಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ. ಎನ್. ಎಂ. ತಳವಾರ ಅಭಿನಂದನ ನುಡಿಗಳನ್ನು ಆಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ. ಡಿ. ಸುದರ್ಶನ್, ಡಾ. ಎಂ.ಎಂ. ಕಲಬುರ್ಗಿ ಪ್ರತಿಷ್ಠಾನದ ಸದಸ್ಯರಾದ ಡಾ. ಸಿದ್ಧನಗೌಡ ಪಾಟೀಲ, ಶ್ರೀವಿಜಯ ಎಂ. ಕಲ್ಬುರ್ಗಿ, ಡಾ. ವಿಜಯ ಕರಿಕಲ್, ಡಾ. ಹನುಮಾಕ್ಷಿ ಗೋಗಿ, ಎಸ್‌.ಡಿ. ಶಶಿಕಲಾ, ಸ್ವರ್ಣಗೌರಿ ತಾರಾನಾಥ ಹಾಜರಿದ್ದರು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
Leave a comment

Leave a Reply

Your email address will not be published. Required fields are marked *