ಮೈಸೂರು:
ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು ಇಷ್ಟಲಿಂಗ ಪೂಜಾ ಕಾರ್ಯಕ್ರಮವನ್ನು ಕೆ.ಆರ್. ನಗರ ತಾಲ್ಲೂಕಿನ ಲಾಲನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಜಂಗಮಮೂರ್ತಿ ಮಾತಾಜಿ ಜಯದೇವಿತಾಯಿ ಸಾನಿಧ್ಯ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಮಾತಾಜಿ ಅನುಭಾವ ನೀಡುತ್ತ, ಪ್ರತಿಯೊಬ್ಬರು ಸೃಷ್ಟಿಕರ್ತನ ಅರಿವಿನ ಜನ್ಮಕ್ಕೆ ಬರಬೇಕಿದೆ, ಇದರ ಬಗ್ಗೆ ಬಸವಣ್ಣನವರು ಜಗತ್ತಿಗೆ ಮೊದಲು ತಿಳಿಸಿದರು. ಗರ್ಭಲಿಂಗ ದೀಕ್ಷಾ ಕಾರ್ಯವು ಗರ್ಭದಲ್ಲಿರುವ ಮಗುವಿಗೆ ಸಂಸ್ಕಾರ ನೀಡುವುದಾಗಿದೆ. ಈ ಕ್ರಿಯೆಯನ್ನು ಗುರು ಬಸವಣ್ಣನವರು ಚೆನ್ನಬಸವಣ್ಣನವರಿಗೆ ನೀಡಿದ್ದರು ಎಂದು ಹೇಳಿ ಎಲ್ಲರಿಗೆ ಅದರ ಬಗ್ಗೆ ಅರಿವು ಮೂಡಿಸಿದರು. ಗಣಚಾರಿ ಚೌಹಳ್ಳಿ ಲಿಂಗರಾಜಣ್ಣನವರು ಗರ್ಭಲಿಂಗ ದೀಕ್ಷಾ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದರು.

ಉದ್ಘಾಟಕರಾದ ಸಿದ್ದಲಿಂಗಸ್ವಾಮಿ ಅವರು ಲಿಂಗಾಯತ ಧರ್ಮದ ಸಂಸ್ಕಾರಗಳು ಜಗತ್ತಿಗೆ ಮಾದರಿಯಾಗಿವೆ. ಎಲ್ಲರಲ್ಲೂ ಪ್ರೀತಿ ಪ್ರೇಮ ಸಹಬಾಳ್ವೆ ನಡೆಸಲು ಲಿಂಗಾಯತ ಉತ್ತಮ, ಸಹಕಾರಿ ಧರ್ಮವಾಗಿದೆ ಎಂದರು. ವೇದಿಕೆಯ ಕಾರ್ಯಕ್ರಮದಲ್ಲಿ ಮೊದಲಿಗೆ ಬಸವ ಷಟ್ಸ್ಥಲ ಧ್ವಜಾರೋಹಣ ನಡೆದು ನಂತರ ಬಸವ ಪುತ್ಥಳಿಗೆ ಮಹನೀಯರಿಂದ ಪುಷ್ಪಾರ್ಪಣೆ ನಡೆಯಿತು.

ಅದ್ಯಕ್ಷತೆಯನ್ನು ಚೌಹಳ್ಳಿ ಲಿಂಗರಾಜಣ್ಣ ಅವರು ವಹಿಸಿದ್ದರು. ನಿರೂಪಣೆ ಜಗದೀಶ ಚಿಕ್ಕಮಠ, ವಚನ ಪ್ರಾರ್ಥನೆ ಕುಮಾರಿ ಚೂಡಾಮಣಿ, ಸ್ವಾಗತ ಗುರುಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಚನ್ನಪ್ಪ, ಧ್ವಜಾರೋಹಣವನ್ನು ನಂಜನಗೂಡು ಶರಣ ಸಂಸ್ಕೃತಿ ಪ್ರಚಾರ ವೇದಿಕೆ ಅಧ್ಯಕ್ಷ ಕಾ.ಸು ನಂಜಪ್ಪ ಅವರು, ಉದ್ಘಾಟನೆಯನ್ನು ನಿವೃತ್ತ ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಿ.ಜಿ. ಸಿದ್ದಲಿಂಗಸ್ವಾಮಿ ಅವರು ನಡೆಸಿದರು. ಕಾರ್ಯಕ್ರಮದ ಆಯೋಜನೆಯನ್ನು ಮೈಸೂರಿನ ರತ್ನಮ್ಮ ಮತ್ತು ಜಯಣ್ಣ ದಂಪತಿ ಮಾಡಿ, ಕೊನೆಗೆ ಎಲ್ಲರಿಗೂ ಶರಣು ಸಮರ್ಪಣೆ ಗೈದರು.
ವಕೀಲರಾದ ಹರಪನಹಳ್ಳಿಯ ನಂಜುಂಡಸ್ವಾಮಿ ಅವರು, ವಿಶ್ವ ಬಸವಸೇನೆಯ ಕಾರ್ಯಕರ್ತರು, ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ವಿವಿಧ ಬಸವಪರ ಸಂಘಟನೆಗಳ ಮುಖಂಡರು ಬಾಗವಹಿಸಿದ್ದರು.

ಈ ರೀತಿಯ ಕಾರ್ಯಕ್ರಮಗಳ ಮುಖಾಂತರ ಅರಿವು ಜಾಗೃತಿಯು ಹೆಚ್ಚಬೇಕಿದೆ.