ನಿಜವನರಿತು ನಿಶ್ಚಿಂತನಾಗು: ಮೋಳಿಗೆ ಮಹಾದೇವಿಯವರ ವಚನ ನಿರ್ವಚನ

ಗುಳೇದಗುಡ್ಡ:

ಶರಣ ಸಂಗಪ್ಪ ಕರಿಸಿದ್ದಪ್ಪ ಕೊಟ್ಟೂರು (ಕಳ್ಳಿಗುಡ್ಡ) ಅವರ ಮನೆಯಲ್ಲಿ ಬಸವಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ವಚನ ಚಿಂತನೆಗಾಗಿ ಶರಣೆ ಮೋಳಿಗೆ ಮಹಾದೇವಿ ಅವರ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ
ಪರುಷರಸ ಕೈಯಲ್ಲಿದ್ದು ಕೂಲಿ ಮಾಡಲೇತಕ್ಕೆ
ಕ್ಷುತ್ತು ನಿವೃತ್ತಿಯಾದವಂಗೆ
ಕಟ್ಟೋಗರದ ಹೊರೆಯ ಹೊರಲೇತಕ್ಕೆ
ನಿತ್ಯ ಅನಿತ್ಯವ ತಿಳಿದು ಮರ್ತೃ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ
ನಿಶ್ಚಯವ ತಾನರಿತು ಅತ್ತಣ ಇತ್ತಣ ಹೊತ್ತು
ಆ ಬಚ್ಚ ಬರಿಯ ಬೆಳಗ ನಿನ್ನ ನೀನೇ ನೋಡಿಕೊ
ಎನ್ನಯ್ಯ ಪ್ರಿಯ ಇಮ್ಮಡಿ
ನಿಃಕಳಂಕ ಮಲ್ಲಿಕಾರ್ಜುನಲ್ಲಿ.

 ಈ ವಚನದ ಚಿಂತನೆಯ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನ್ನಾಡಿದ ಪ್ರೊ. ಶ್ರೀಕಾಂತ ಗಡೇದ ಅವರು – ಅರಮನೆಯ ಮಹಾರಾಣಿ ಪದವಿಯನ್ನು ತೊರೆದು, ಕಲ್ಯಾಣಕ್ಕೆ ಬಂದು ಶರಣೆಯಾಗಿ ಮೋಳಿಗೆ ಮಹಾದೇವಿ ಎನೆಸಿಕೊಂಡಳು. ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಳು. ಇವರ ಸುಮಾರು 70 ವಚನಗಳು ಲಭ್ಯವಿವೆ.  ಕಾಯವೇ ಕೈಲಾಸ ಎಂದು ಹೇಳುತ್ತಾ ಜನರ ಕೆಟ್ಟ ಚಟಗಳನ್ನು ಬಿಡಿಸುವಲ್ಲಿ, ತಾತ್ವಿಕ ವಚನಗಳನ್ನು ಬರೆಯುವಲ್ಲಿ ಇವರ ಪಾತ್ರ ಹಿರಿದಾದುದು ಎಂದರು.

ಮಹಾಂತೇಶ ಸಿಂದಗಿಯವರು ಗಂಗಾದೇವಿ ಎಂಬ ಶರಣೆ ಮೋಳಿಗೆ ಮಹಾದೇವಿಯಾದದ್ದು, ಇಷ್ಟಲಿಂಗ ಪ್ರಭಾವದಿಂದಾಗಿ.  ಅಂತೆಯೇ ಅವರ ವಚನಗಳಲ್ಲಿ ಅಷ್ಟಾವರಣ ಪಂಚಾಚಾರ ಹಾಗೂ ಷಟಸ್ಥಲಗಳ ವಿವರಣೆ ಇದೆ.  ಈ ಇಷ್ಟಲಿಂಗ ಪರುಷವಿದ್ದಂತೆ ಜ್ಯೋತಿಯಿದ್ದಂತೆ ಇದರಿಂದ ನಮ್ಮ ಮನದ ಕತ್ತಲೆಯನ್ನು ಕಳೆದುಕೊಂಡು ಸ್ವರ್ಗ-ನರಕಗಳ ನಡುವಣ ಬೇಧವನ್ನು ಕಿತ್ತಸೆದರೆ ಆತನೇ ಮಹಾ ಮಾನವನಾಗುತ್ತಾನೆ. ನಿಜವನರಿದು ನಿಶ್ಚಂತನಾಗಬೇಕು ಎಂಬುದು ಈ ವಚನದ ಸಾರವಾಗಿದೆ ಎಂದರು.

ಪ್ರೊ. ಗಾಯತ್ರಿ ಕಲ್ಯಾಣಿ ಅವರು ಇದೇ ವಚನದ ಚಿಂತನೆಯಲ್ಲಿ ತೊಡಗಿ – ಕಾಣದ ದೇವರಿಗೆ ಕೈಮುಗಿಯುವುದಕ್ಕಿಂತ ಕಾಣುವ ಕರಸ್ಥಲದ ಲಿಂಗದಲ್ಲಿರುವ ಜ್ಯೋತಿಯನ್ನು ಪರುಷರಸವನ್ನು, ನಿಶ್ಚಯವೆನಿಸುವ ಲಿಂಗತ್ವವನ್ನು ಅರಿತುಕೊಂಡರೆ ಆತನೇ ಲಿಂಗವಾಗುತ್ತಾನೆ. ಎಲ್ಲ ಆಸೆ ಆಮಿಷಗಳಿಂದ ದೂರವಾಗುತ್ತಾನೆ. ಹೀಗಾದರೆ ಅದುವೇ ಲಿಂಗದ ಇರುವಿಕೆ ಎಂಬುದು ಈ ವಚನದಲ್ಲಿದೆ ಎಂದರು.

ವಚನದ ಚಿಂತನೆಯಲ್ಲಿ ಮುಂದುವರೆದು ಮಾತನಾಡಿದ ಪ್ರೊ. ಮಹಾದೇವಯ್ಯಸ್ವಾಮಿ ನೀಲಕಂಠಮಠ ಅವರು, ನಮಗೆ ಎಲ್ಲವೂ ಗೊತ್ತಿದೆ ಎಂಬ ಅಹಂಭಾವದಲ್ಲಿರುತ್ತೇವೆ. ಆದರೆ ಏನೂ ಗೊತ್ತಿರುವದಿಲ್ಲ, ಇರುವದನ್ನು ಬಿಟ್ಟು ಇಲ್ಲದುದರೆಡೆಗೆ ಸಾಗುತ್ತೇವೆ. ನಮ್ಮಲ್ಲಿದ್ದೂ ಇಲ್ಲದಂತಾಗುತ್ತೇವೆ. ಅಂತೆಯೇ ನಮ್ಮಲ್ಲಿರುವ ಲಿಂಗದ ಭಾವವಾಗಿದೆ. ಇದನ್ನೇ ವಚನಗಾರ್ತಿ ಶರಣೆ ಮೋಳಿಗೆ ಮಹಾದೇವಿ ತಾಯಿಯವರು ನಮ್ಮಲ್ಲಿ ಇಷ್ಟಲಿಂಗವೆಂಬ ದೇವರೇ ಇರುವಾಗ ಅದನ್ನರಿಯದೆ ಹೊರಗಿನ ಅನ್ಯದೈವಕ್ಕೆಳಸುತ್ತೇವೆ.  ಇದು ಸಲ್ಲದು. ತನ್ನಲ್ಲಿರುವ ಬೆಳಕನ್ನು ಸರಿಯಾಗಿ ಗ್ರಹಿಸಿದರೆ ಅದೇ ಬಯಲು; ಬಚ್ಚ ಬರಿಯ ಬಯಲು ಆಗುತ್ತದೆ ಎಂಬುದು ಈ ವಚನದಲ್ಲಿದೆ ಎಂದರು.

ಕೊನೆಯಲ್ಲಿ ಮಾತನಾಡಿದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು, ಶಿವಾಂಶಿಕನಾಗಿರುವ ಪ್ರತಿಯೊಬ್ಬರಲ್ಲಿಯೂ ಶಿವ ಪ್ರಕಾಶವೇ ತುಂಬಿದೆ. ಆದರೆ ನಿತ್ಯ ಅನಿತ್ಯವ ತಿಳಿಯಲಾರದೆ ಗೊಂದಲಕ್ಕೆ ಒಳಗಾಗಿ, ಶರೀರವೇ ತಾನೆಂಬ ಭಾವಕ್ಕೆ ಪಕ್ಕಾಗಿ ಅನ್ಯದೈವಕ್ಕೆರಗುತ್ತಿದ್ದಾನೆ.  ಇದು ಸಲ್ಲದು ಮತ್ತು ತಾನೇ ದೇವರ ಅಂಶ ಎಂಬುದನ್ನೇ ಮರೆತಿದ್ದಾನೆ.  ಇದರಿಂದ ಹೊರಬರಬೇಕಾದರೆ ನಿತ್ಯ-ಅನಿತ್ಯ ಎಂಬುದರ ಮರ್ಮವನ್ನು ಅರಿಯಬೇಕು.

ತನ್ನಲ್ಲಿರುವ ಪರವಸ್ತುವೇ ನಿತ್ಯ. ಅದಕ್ಕಿಂತ ಭಿನ್ನವಾಗಿರುವುದೆಲ್ಲ ಅಶಾಶ್ವತವಾಗಿರುವುದೆಲ್ಲವೂ ಅನಿತ್ಯ. ಅದರಲ್ಲಿರುವ ಸ್ವರ್ಗ-ಮರ್ತ್ಯ-ನರಕಗಳೆಲ್ಲವೂ ಅನಿತ್ಯವೇ. ಇದರ ಮರ್ಮವನ್ನು ತಿಳಿದು ತನ್ನಲ್ಲಿರುವ ಬೆಳಕೇ ಬಚ್ಚಬರಿಯ ಬೆಳಕೆಂದರಿದಾಗ ಮಹಾದೇವನಾಗುತ್ತಾನೆ ಎಂಬುದನ್ನು ವಚನಕಾರ್ತಿ ಹಲವು ದೃಷ್ಟಾಂತಗಳ ಮೂಲಕ ತಿಳಿಸಿದ್ದಾರೆ ಎಂದರು.

ಜಯಶ್ರೀ ಬರಗುಂಡಿ ಹಾಗೂ ಶ್ರೀದೇವಿ ಶೇಖಾ ಅವರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಕಾರ್ಯಕ್ರಮದ ಅನುಭಾವದ ನಂತರ ವಚನ ಮಂಗಲವಾಯಿತು.  ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕಾರ್ಯಕ್ರಮದ ಆಯೋಜಕರು ಸ್ವಾಗತಿಸಿ, ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.

ಮಹಾಮನೆ ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ಪಾಂಡಪ್ಪ ಕಳಸಾ, ಸುರೇಶ ರಾಜನಾಳ, ಚವ್ಹಾಣ ಸರ್, ಪುತ್ರಪ್ಪ ಬೀಳಗಿ, ಹುಚ್ಚೇಶ ಯಂಡಿಗೇರಿ, ಚಂದ್ರಶೇಖರ ತೆಗ್ಗಿ, ದಾಕ್ಷಾಯಣಿ ತೆಗ್ಗಿ, ವಿಶಾಲಾಕ್ಷೀ ಗಾಳಿ, ನೇತ್ರಾವತಿ ರಕ್ಕಸಗಿ,  ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *