ಕೂಡಲಸಂಗಮ :
ಸಚಿವ ಸ್ಥಾನಕ್ಕೆ ನಾನು ಪ್ರಬಲ ಆಕಾಂಕ್ಷಿ ಇದ್ದೀನಿ, ನಾನು ಮಂತ್ರಿ ಆಗುತ್ತೇನೆ ಎಂಬ ನಿರೀಕ್ಷೆಯೂ ಇದೆ. ನಾನು ನಮ್ಮ ನಾಯಕರಲ್ಲಿ ಮಂತ್ರಿ ಸ್ಥಾನ ನೀಡುವಂತೆ ವಿನಂತಿ ಮಾಡಿದ್ದೇನೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕೂಡಲಸಂಗಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳೇ ಹೈಕಮಾಂಡ್ ಅನುಮತಿ ಪಡೆದು ಸಂಪುಟ ಪುನರ್ರಚನೆ ಮಾಡೋದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ, ನವಂಬರ್ ಕ್ರಾಂತಿ ಆಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅದು ನನ್ನ ಲೆವೆಲ್ನಲ್ಲಿ ಅಲ್ಲ. ಆ ಬಗ್ಗೆ ನಾ ಮಾತಾಡೋದಿಲ್ಲ. ಅದು ಹೈಕಮಾಂಡ್ ಲೆವಲ್. ನನ್ನ ಲೆವಲ್ ಇರೋದನ್ನು ಮಾತ್ರ ನಾ ಮಾತಾಡೀನಿ ಎಂದು ಜಾರಿಕೊಂಡರು.
ಸಮಾಜದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಿ ಎಂದು ಕೇಳೋದಿಲ್ಲ. ಸಚಿವ ಸ್ಥಾನದಿಂದ ಸಮಾಜ ಉದ್ಧಾರ ಆಗೋದಿಲ್ಲ ಎಂಬ ಬವಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ತಿರುಗೇಟು ನೀಡಿದ ಕಾಶಪ್ಪನವರ, ಯಾವುದೋ ಒಬ್ಬ ಖಾವಿಧಾರಿ ಹೇಳಿದ ಮಾತಿಗೆ ಯಾರೂ ಕ್ಯಾರೆ ಅನ್ನೋದಿಲ್ಲ, ಕೇರ್ ಮಾಡೋದಿಲ್ಲ.
ಹಿಂದೆ ಸಿ.ಸಿ. ಪಾಟೀಲರಿಗೆ ಮಂತ್ರಿಸ್ಥಾನ ಕೊಡಿ ಎಂದು ರಾತ್ರಿ ನಾಲ್ಕು ಗಂಟೆಗೆ ಹೋಗಿದ್ರಲ್ಲಾ. ಅನೇಕ ನಾಯಕರಿಗೆ ಮಂತ್ರಿ ಸ್ಥಾನ ಕೊಡಿ. ಟಿಕೇಟ್ ಕೊಡಿ ಎಂದು ಹೇಳಿದವರಿಗೆ ಈಗ ಬೇಡವಾಯಿತೆ. ಬೇಕಾದಾಗ ಒಂದು, ಬೇಡವಾದಾಗ ಒಂದು. ಇವರು ಹೇಳಿದರೇ ಮಾತ್ರ ಮಂತ್ರಿ ಆಗ್ತೀವಾ ನಾವು ? ನಮ್ಮ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇದ್ದಾರೆ. ಹೈಕಮಾಂಡ್ ಇದೆ. ಅವರ ಮೇಲೆ ವಿಶ್ವಾಸವಿದೆ. ವಿಶ್ವಾಸ, ಪಕ್ಷ ಸಿದ್ಧಾಂತದ ಮೇಲೆ ನಾವು ಇದ್ದೇವೆ ಎಂದರು.
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗಳ ಬಳಿ ನನ್ನ ನೇತೃತ್ವದಲ್ಲಿಯೇ ೩೦೦ ಸಮಾಜದ ಮುಖಂಡರು ಬೇಟಿಯಾಗಿದ್ದೇವೆ. ಮುಖ್ಯಮಂತ್ರಿಗಳು ಸ್ಪಷ್ಟವಾಗಿಯೇ ಹೇಳಿದ್ದಾರೆ, ಹಿಂದುಳಿದ ವರ್ಗದ ಪೂರ್ಣ ಪ್ರಮಾಣದ ವರದಿ ಬರಲಿ. ಪರಿಶೀಲಿಸಿ ನೀಡುವ ಭರವಸೆ ನೀಡಿದ್ದಾರೆ ಎಂದರು.
