ಚಿತ್ರದುರ್ಗ:
12ನೇ ಶತಮಾನದಲ್ಲಿನ ಶಿವಶರಣರು ಎನ್ನುವ ನಕ್ಷತ್ರ ಪುಂಜಗಳು ಕಲ್ಯಾಣದಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಅತ್ಯದ್ಭುತ ಸಾಧನೆ ಮಾಡಿಹೋಗಿದ್ದಾರೆ. ಅವರಲ್ಲಿ ಹುಂಜಿನ ಕಾಳಗದ ದಾಸಯ್ಯ ಹಾಗೂ ಸುಂಕದ ಬಂಕಣ್ಣನವರು ಮುಖ್ಯರು. ಅಂದು ಪ್ರಾಣಿ ಪಕ್ಷಿಗಳಿಗೆ ತರಬೇತಿ ನೀಡಿ ಸ್ಪರ್ಧೆ ಏರ್ಪಡಿಸುವ ಕಾಯಕ ಮಹತ್ವ ಪಡೆದಿತ್ತು. ಸುಂಕದ ಬಂಕಣ್ಣ ವಿವಿಧ ವ್ಯಾಪಾರ ವಹಿವಾಟು ನಡೆಸುವವರಿಂದ ನಿಗಧಿತ ಸುಂಕ ಅಥವಾ ಕರ ಪಡೆಯುವ ಮೂಲಕ ಬೊಕ್ಕಸಕ್ಕೆ ಆದಾಯ ಬರುವಂತೆ ನೋಡಿಕೊಳ್ಳುತ್ತಿದ್ದರು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನುಡಿದರು.
ಶ್ರೀಮಠದ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ ೩೩ ದಿನಗಳ ಕಾಲ ಹಮ್ಮಿಕೊಂಡಿರುವ ‘ವಚನ ಕಾರ್ತಿಕ’ದ ೬ನೇ ದಿನದ ಸಮಾರಂಭವು ಶ್ರೀಮಠದ ಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಲಾಗಿದ್ದು, ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಶಿವಶರಣರಾದ ಹುಂಜಿನ ಕಾಳಗದ ದಾಸಯ್ಯ ಅವರ ವಚನ ಮತ್ತು ವ್ಯಕ್ತಿತ್ವ ಕುರಿತು ಜಿ.ಪಂ.ನ ನಿವೃತ್ತ ಅಧಿಕಾರಿ, ಕಾನೂನು ಸಲಹೆಗಾರರೂ ಆಗಿರುವ ನಾಗರಾಜ ಸಂಗಮ್ ಮಾತನಾಡಿ ವ್ರತಭ್ರಷ್ಟರನ್ನು ಅಂದರೆ ಹಿಡಿದ ಕಾಯಕವನ್ನು ಉದಾಸೀನ ಮಾಡುವ, ವ್ರತ, ನೇಮ, ಸಂಸ್ಕಾರ, ಸನ್ನಡತೆ ಹೀನರನ್ನು ನಾನು ಸಹಿಸುವುದಿಲ್ಲ. ಸನ್ನಡತೆಯನ್ನು ರೂಢಿಸಿಕೊಳ್ಳೋಣ ಎನ್ನುವ ದಾಸಯ್ಯ ಅವರ ಆಶಯದ ಒಂದು ವಚನ ಚಂದ್ರಚೂಡೇಶ್ವರ ಲಿಂಗವೆ ಎಂಬ ಅಂಕಿತದಲ್ಲಿ ದೊರೆತಿದೆ. ಇಂತಹ ಅಪರೂಪದ ವಚನಕಾರರ ಜೀವನ ಚರಿತ್ರೆಯ ಇಂತಹ ಕಾರ್ಯಕ್ರಮಗಳಿಗೆ ಜನ ಬರಬೇಕು ಎಂದರು.
ಶಿವಶರಣ ಸುಂಕದ ಬಂಕಣ್ಣ ಅವರ ಕುರಿತಾಗಿ ಎಸ್.ಜೆ.ಎಂ. ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಕಣ್ಮೇಶ್ ಅವರು ವಿಷಯ ಪ್ರಸ್ತಾಪಿಸುತ್ತಾ, ಸುಂಕಿಗ ಕಾಯಕದ ಬಂಕಣ್ಣ ಅವರು ಬಂಕೇಶ್ವರಲಿಂಗ ಅಂಕಿತದಲ್ಲಿ ೧೦೮ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳಲ್ಲಿ ವ್ಯಾಪಾರ, ಸರಕು, ಸುಂಕ, ಸಾಕ್ಷಾತ್ಕಾರ, ಪರಮಾತ್ಮನ ಇರುವಿಕೆ ಹೇಗಿರುತ್ತದೆಂಬ ಚಿಂತನೆಗಳಿವೆ.

ಬಸವ ಪುರಾಣ ಹಾಗೂ ಶಿವತತ್ವ ಚಿಂತಾವಣಿಯಲ್ಲಿ ಅವರ ಜೀವನ ವೃತ್ತಾಂತ ದಾಖಲಾಗಿದೆ. ವ್ಯಾಪಾರ ಕೇವಲ ಲಾಭಕ್ಕಲ್ಲ. ಅದರಿಂದ ಬಂದದ್ದನ್ನು ಜಂಗಮ ದಾಸೋಹಕ್ಕೆ ಅರ್ಪಿತವಾಗಬೇಕೆಂಬ ಅಭಿಲಾಷೆಯು ಅವರಲ್ಲಿತ್ತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀಮಠದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಪ್ರಾಣಿ ಪಕ್ಷಿಗಳಿಗೂ ಮನಸ್ಸಿದೆ ಎನ್ನುವುದನ್ನು ಬಸವಾದಿ ಶರಣರು ಕಂಡುಕೊಂಡಿದ್ದರು. ಲೋಕದ ವ್ಯವಹಾರದ ಜತೆಗೆ ಅಲೌಕಿಕ ವಿಚಾರವನ್ನು ತಿಳಿದುಕೊಂಡರೆ ನಮ್ಮ ಸಾಧನೆಗೆ ಅದು ಮೆಟ್ಟಿಲಾಗಬಹುದು.
ನಿರಂತರವಾಗಿ ಬೆಳಕು ಕೊಡುವ ಸೂರ್ಯನಿಗೆ, ನಮ್ಮನ್ನು ಪೋಷಿಸುತ್ತಿರುವ ಭೂಮಿಗೆ ಎಂದಾದರೂ ತೆರಿಗೆ ಕಟ್ಟಿದ್ದೇವೆಯೇ ಎಂದು ಪ್ರಶ್ನಿಸಿದ ಶ್ರೀಗಳು, ಪ್ರಕೃತಿಯನ್ನು ನಾವು ಚೆನ್ನಾಗಿ ನೋಡಿಕೊಂಡಿರೆ ಮಾತ್ರ ನನ್ನ ಬದುಕು ಹಸನು ಇಲ್ಲದೇ ಹೋದರೆ ಮೂರಾಬಟ್ಟೆಯಾಗುತ್ತದೆ.

ಸುಂಕದ ಬಂಕಣ್ಣ ತೆರಿಗೆ ಪದ್ಧತಿಯಲ್ಲಿ ನಿಪುಣನಾಗಿ ಯಾವ ಯಾವುದರಿಂದ ತೆರಿಗೆ ತೆಗೆದುಕೊಳ್ಳಬಹುದೆಂಬ ಅಂದಾಜು ಮಾಡಿಕೊಂಡು ನಡೆಯುತ್ತಿದ್ದರು. ತೆರಿಗೆಯಿಂದ ಬಂದ ಹಣ ಯಾವ ರೀತಿ ಸದ್ವಿನಿಯಾಗಬೇಕೆಂದು ಶರಣರು ಶಿವಭಕ್ತಿ, ಶಿವಜ್ಞಾನ, ಶರಣಸಂಗ, ಶಿವಾನುಭಾವ, ಶರಣಸೇವೆ ಈ ಮೂಲಕ ಪ್ರಚಾರ ಮತ್ತು ಪ್ರಚಾರಕ್ಕಾಗಿ ನಾವು ವಿನಿಯೋಗಿಸಬೇಕೆಂದು ತಿಳಿಸಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಇಳಕಲ್‌ನ ಬಸವರಾಜ ದೇವರು, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಅಂಚೆ ನೌಕರರಾದ ತಿಪ್ಪೇಸ್ವಾಮಿ, ರಾಜಶೇಖರ್, ಮಹೇಂದ್ರಕುಮಾರ, ಜ್ಞಾನಮೂರ್ತಿ, ಖಾನಾಹೊಸಳ್ಳಿಯ ಭಕ್ತರು ಸೇರಿದಂತೆ ಸಾರ್ವಜನಿಕರು, ಶ್ರೀಮಠದ ಭಕ್ತರು, ಸಂಘ-ಸಂಸ್ಥೆಗಳವರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಮುರಾ ಕಲಾವಿದ ಉಮೇಶ ಪತ್ತಾರ ಇಬ್ಬರು ವಚನಕಾರರ ರಚನೆಯ ವಚನ ಗಾಯನ ಮಾಡಿದರು. ದರ್ಶನ್ ಹಾಗೂ ವಿಶ್ವನಾಥ ದೇವರು ಅವರು ಹುಂಜಿನ ಕಾಳಗದ ದಾಸಯ್ಯ ಹಾಗೂ ಸುಂಕದ ಬಂಕಣ್ಣ ಅವರುಗಳ ವಚನ ಪಠಣ ಮಾಡಿದರು. ಎಸ್.ಜೆ.ಎಂ. ಔಷಧ ವಿಜ್ಞಾನ ಮಹಾವಿದ್ಯಾಲಯದ ಬಸವರಾಜ ಹರ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಡಾ. ಪೂಜಾ ಡಿ.ಸಿ. ಶರಣು ಸಮರ್ಪಣೆ ಮಾಡಿದರು.
