ಚಿತ್ರದುರ್ಗ:
ಗೌತಮ ಸಂಸಾರ, ರಾಜ್ಯಭಾರ ಎಲ್ಲ ವೈಭವವನ್ನು ತ್ಯಜಿಸಿ ಕೆಲ ಕಾರಣಗಳಿಗೆ ಉತ್ತರ ಹುಡುಕಲು ಕೆಲವರ್ಷಗಳ ತಪಸ್ಸನ್ನಾಚರಿಸಿ ಜ್ಞಾನೋದಯವಾಗಿ ಬುದ್ಧನೆನಿಸಿಕೊಂಡದ್ದು ಒಂದು ಇತಿಹಾಸ. ನಂತರದಲ್ಲಿ ಬಸವಣ್ಣ ಸಂಸಾರದಲ್ಲಿದ್ದು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಬಾಲ್ಯದಲ್ಲಿನ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಹೊಸ ವಿಚಾರಗಳಿಗೆ ಅನುಭವ ಮಂಟಪದ ಮೂಲಕ ಅವಕಾಶ ನೀಡಿ ದೇಶವೇ ಕಲ್ಯಾಣದತ್ತ ನೋಡುವಂತೆ ಮಾಡಿದ್ದು ಮತ್ತೊಂದು ಚರಿತ್ರೆ.
ಅದರಂತೆ ಈ ನಾಡಿನಲ್ಲಿ ೧೮-೧೯ನೇ ಶತಮಾನದಲ್ಲಿ ಬಸವಣ್ಣನ ನಿಜವಾರಸುದಾರರಾಗಿ ಅವರ ಇಡೀ ತತ್ವವನ್ನು ಆಚರಣೆಗೆ ತಂದವರು ಅಥಣಿ ಮುರುಘೇಂದ್ರ ಶಿವಯೋಗಿಗಳು ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಸಾಧಕ ಶ್ರೀಗಳಾಗಿರುವ ಬಸವ ಮುರುಘೇಂದ್ರ ಸ್ವಾಮೀಜಿ ಅವರು ದಾರ್ಶನಿಕರ ವಿಚಾರಧಾರೆಯನ್ನು ಮೆಲುಕು ಹಾಕಿದರು.
ಅವರು ಹೊಳಲ್ಕೆರೆ ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ ಬಸವೋತ್ಸವ ಹಾಗೂ ಮುರುಘೇಂದ್ರ ಶಿವಯೋಗಿಗಳವರ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಗ್ರಾಮದ ವೀರಭದ್ರೇಶ್ವರಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಭಕ್ತರ ಸಭೆಯಲ್ಲಿ ಮಾತನಾಡುತ್ತ, ಬೆಳಗಾವಿ ನಾಡಿನ ಪುಣ್ಯಪುರುಷ ಚಿತ್ರದುರ್ಗ ಅದು ಹೊಳಲ್ಕೆರೆ ತಾಲ್ಲೂಕಿನ ಈಚಘಟ್ಟ ಗ್ರಾಮಕ್ಕೆ ಅವರ ವಿಚಾರಧಾರೆ ಬಂದಿದೆ ಎಂದರೆ ನಿಮ್ಮೂರಿನ ಭಾಗ್ಯವೇ ಸರಿ. ಇವರು ಅಂತಿಂಥವರಲ್ಲ. ನೋಡಲು ಸಾಮಾನ್ಯರಂತೆ ಕಂಡರೂ ಒಳಗಿನ ಚೈತನ್ಯ ಅಸಮಾನ್ಯವಾದುದಾಗಿತ್ತು.

ಬುದ್ಧರಂತೆ ತಪಸ್ಸಿಗೆ ಹೆಚ್ಚಿನ ಮಹತ್ವ ನೀಡಿ ಅದರಿಂದ ಪ್ರಭಾವ ಹೊಂದಿ ಅನೇಕರ ಬಾಳಿನಲ್ಲಿ ಬೆಳಕು ಭರವಸೆ ಮೂಡಿಸಿದ ಘನಮಹಿಮರು. ಅಂತಹ ಚರಿತ್ರ ಪುರುಷರ ಜಯಂತ್ಯುತ್ಸವದ ಅಂಗವಾಗಿ ಬೆಂಗಳೂರಿನ ವಿಜಯನಗರದ ಹಂಪಿ ಕ್ರೀಡಾಂಗಣದಲ್ಲಿ (ಚಂದ್ರಶೇಖರ್ ಆಜಾದ್ ವೇದಿಕೆಯಲ್ಲಿ) ನವೆಂಬರ್ ೧೪, ೧೫ ಮತ್ತು ೧೬ರಂದು ಮೂರುದಿನಗಳ ಕಾಲ ಬಸವೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ತಮ್ಮ ಬದುಕಿನಲ್ಲಿ ಬಸವಣ್ಣನವರನ್ನು ಉಸಿರಾಗಿಸಿಕೊಂಡ ಕಾರಣ ಜಯಂತಿ ಜತೆಗೆ ಬಸವೋತ್ಸವ ಎನ್ನುವ ಹೆಸರಿನೊಂದಿಗೆ ಈ ಕಾರ್ಯಕ್ರಮವನ್ನು ಅಥಣಿಯ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳವರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಗ್ರಾಮದ ಹಾಗೂ ಸುತ್ತಮುತ್ತಲಿನ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಸಲಹೆ ಮಾಡಿದರು.
ಮತ್ತೊಂದು ವಿಚಾರ ಎಂದರೆ ಈ ಹಿಂದೆ ೨೦೨೪ ಆಗಸ್ಟ್ ೫ರಂದು ಈ ಗ್ರಾಮದಲ್ಲಿ ಚಿತ್ರದುರ್ಗ ಬೃಹನ್ಮಠದಿಂದ ನಡೆದ ಅನುಭಾವ ಶ್ರಾವಣ ಕಾರ್ಯಕ್ರಮದಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳವರ ವ್ಯಕ್ತಿತ್ವ ಸಾಧನೆಯ ಚಿಂತನ ಕಾರ್ಯಕ್ರಮ ನಡೆದಿದ್ದು ಸಹ ಔಚಿಪೂರ್ಣವಾಗಿದೆ ಎಂದು ಸ್ಮರಿಸಿಕೊಂಡರು.
ಮೆರವಣಿಗೆ
ಈ ಸಂದರ್ಭದಲ್ಲಿ ಗ್ರಾಮದ ಮಾಜಿ ಛೇರ‍್ಮನ್ ವೀರಭದ್ರಪ್ಪ ಟಿ., ಎಂ.ಜೆ. ನಂಜಪ್ಪಯ್ಯ, ದಗ್ಗೆ ಮಂಜುನಾಥ್, ಎಪಿಎಂಸಿಯ ಪದಾಧಿಕಾರಿ ಯು.ಎಸ್. ಅಂಕಳಪ್ಪ, ಪ್ರಕಾಶ್ ಜಿ.ಟಿ., ಮಲ್ಲಿಕಾರ್ಜುನಪ್ಪ ಡಿ.ಎಂ., ಪರಮೇಶ್ ಯು.ಬಿ., ಬಸಣ್ಣ, ತಿಪ್ಪೇಸ್ವಾಮಿ ಎನ್. ಉಜ್ಜಿನಸ್ವಾಮಿ ಯು.ಆರ್., ಮಂಜುನಾಥ ಕೆ., ಪ್ರಸನ್ನ ಯು.ಎ., ಡಿ.ಎಂ. ವೀರಭದ್ರಪ್ಪ, ಪ್ರಧಾನ ಅರ್ಚಕ ವೀರಭದ್ರಪ್ಪ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇದಕ್ಕು ಮುನ್ನ ಗ್ರಾಮದ ಪ್ರಧಾನ ಬೀದಿಯಲ್ಲಿ ವಾದ್ಯಗಳ ಮೂಲಕ ಶ್ರೀ ಮುರಘೇಂದ್ರ ಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆಯು ಬಸವ ಮುರುಘೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಯು.ಎಸ್. ತಿಪ್ಪೇಸ್ವಾಮಿ ಸ್ವಾಗತಿಸಿದರು.
