ಕುಂಕುಮಧಾರಿ ಲಿಂಗಾಯತ ನಾಯಕರಿಗೆ ಬಸವ ಸಂಘಟನೆಗಳು ಪಾಠ ಕಲಿಸಬೇಕಾಗಿದೆ
ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.
ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.
ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಶರಣ ತತ್ವ ಚಿಂತಕ ಡಾ. ಟಿ ಆರ್ ಚಂದ್ರಶೇಖರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.
1) ಅಭಿಯಾನದ ಮೇಲೆ, ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಕೋಪತಾಪ ಬಂದಿರುವುದು ಏಕೆ?
ಕಾರಣ ಸ್ಪಷ್ಡ. ಅವರ ಮೂಲಕ್ಕೆ ಉರಿ ಬಿದ್ದಿದೆ. ಸ್ವಾತಂತ್ರ್ಯದ ನಂತರ ಪ್ರಥಮ ಭಾರಿಗೆ ಕರ್ನಾಟಕದಲ್ಲಿ ಲಿಂಗಾಯತರು ಒಗಟ್ಟಾಗಿ (ಅನೇಕ ಇತಿಮಿತಿಗಳ ನಡುವೆ) ಬಸವ ತತ್ವದಡಿಯಲ್ಲಿ ರಾಜ್ಯದಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಲಿಂಗಾಯತ ಮಠಾಧೀಶರು ಜನರ ಬಳಿಗೆ ಹೋಗುತ್ತಿದ್ದಾರೆ. ಇದರಿಂದ ಹಿಂದುತ್ವವಾದಿಗಳಿಗೆ, ಲಿಂಗಾಯತದ ಹೆಸರಿನಲ್ಲಿ ಹಿಂದುತ್ವವನ್ನು ಅಪ್ಪಿಕೊಂಡಿರುವ ‘ಅರೆಬರೆ’ ಲಿಂಗಾಯತ ನಾಯಕರಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಅವೈದಿಕ ಬಸವ ಸಿದ್ಧಾಂತಕ್ಕೆ ಬದ್ಧವಾಗಿರುವ ಲಿಂಗಾಯತರ ಬಗ್ಗೆ ಅವರು ಭಯಬೀತರಾಗಿದ್ದಾರೆ. ಹಿಂದುತ್ವಕ್ಕೆ ತಾತ್ವಿಕವಾಗಿ ಲಿಂಗಾಯತ ಧರ್ಮ ಎದುರಾಗಿರುವುದರ ಬಗ್ಗೆ ಅವರಿಗೆ ಅಂಜಿಕೆ ಆರಂಭವಾಗಿದೆ. ಈಗ ಲಿಂಗಾಯತಕ್ಕೆ ಶ್ರಮಿಸುತ್ತಿರುವವರು ಅಧಿಕಾರ, ಹಣ, ಅಂತಸ್ತುಗಳಿಗೆ ಬಲಿಯಾಗುವವರಲ್ಲ. ಯಡಿಯೂರಪ್ಪನವರ ಗ್ಯಾಂಗನ್ನು ಆಡಿಸಿದಂತೆ ಬಸವ ಪ್ರಣೀತ ಲಿಂಗಾಯತರನ್ನು ತಮ್ಮ ಅಡಿಯಾಳುಗಳನ್ನಾಗಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿದೆ.
2) ಲಿಂಗಾಯತರ ಮೇಲೆ ಕೆಲವು ಸ್ವಾಮಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಈಗ ತಾಲ್ಲೂಕುಗಳಲ್ಲಿ ಲಿಂಗಾಯತರ ವಿರುದ್ಧ ಸಮಾವೇಶ, ಹೋರಾಟ ಮಾಡುವ ಬೆದರಿಕೆ ಹಾಕಿದ್ದಾರೆ. ಇವರ ಉದ್ದೇಶವೇನು?
ಈ ಬೆಳವಣಿಗೆಯಿಂದ ಒಂದು ಸ್ಪಷ್ಟವಾಗಿದೆ. ಈಗ ‘ಲಿಂಗಾಯತ ವರ್ಸಸ್ ಹಿಂದುತ್ವ’ ಎಂದು ಘೋಷಣೆ ಮುಂದೆ ಮಾಡಿಕೊಂಡು ಹಿಂದುಗಳನ್ನು ಸಂಘಟಿಸುವುದಕ್ಕೆ ಆರೆಸ್ಸೆಸ್ ಬೀದಿಗಿಳಿದಿದೆ.
ಅವರು ಕಾಂಜಿಪಿಂಜಿ ನಾಯಕರುಗಳನ್ನು ಮುಂದಿಟ್ಟುಕೊಂಡು ತಾಲ್ಲೂಕು ಮಟ್ಟದಲ್ಲಿ ಸಮಾವೇಶ ಮಾಡಿಸಲು ಹೊರಟಿದ್ದಾರೆ, ಅದು ಕಳೆದ ವರ್ಷ ಸೇಡಂನ ಕಾರ್ಯಕ್ರಮದಂತೆ ಪುಸ್ ಆಗುತ್ತದೆ. ನಾನು ಮತ್ತೆ ಮತ್ತೆ ಹೇಳುತ್ತಿರುವಂತೆ ಇಂದಿನ ಲಿಂಗಾಯತರು ‘ಇಟ್ಟಿಗೆ ಹೊರುವವರಲ್ಲ. ವಚನ ಕಟ್ಟುಗಳನ್ನು ಹೊತ್ತು ಹೋರಾಟಮಾಡುವವರು.
ಲಿಂಗಾಯತದ ವಿರುದ್ಧ ಮಾತಾಡುತ್ತಿರುವ ಪಟಾಲಂಗೆ “ಬಸವಾದಿ ಶರಣರ ಹಿಂದೂ ಸಮಾವೇಶ” ಮುಖ್ಯವಲ್ಲ. ಆರ್ಎಸ್ಎಸ್ನ ವಿಶ್ವಾಸವನ್ನು ಉಳಿಸಿಕೊಳ್ಳುವುದೇ ಅವರ ಉದ್ದೇಶ. ಈ ನಾಯಕರ ಬದ್ಧತೆಯ ಬಗ್ಗೆಯೂ ಆರ್ಎಸ್ಎಸ್ಗೆ ವಿಶ್ವಾಸವಿಲ್ಲ ಎಂದು ಕೇಳಿದ್ದೇನೆ.
ಸೇಡಂ ಕಾರ್ಯಕ್ರಮದಂತೆ ಬಸವಾದಿ ಶರಣರ ಹಿಂದೂ ಸಮಾವೇಶ ಪುಸ್ ಆಗುತ್ತದೆ.

3) ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಮೇಲೆ ಬಳಕೆಯಾಗುತ್ತಿರುವ ಭಾಷೆಗೆ ನಿಮ್ಮ ಪ್ರತಿಕ್ರಿಯೆ ಏನು?
ಆರ್ಎಸ್ಎಸ್ ಪರಿಭಾಷೆ ಮತ್ತು ಕನ್ನೇರಿ ಸ್ವಾಮಿಯ ಪರಿಭಾಷೆ ಒಂದೇ ಎಂಬುದು ನಮಗೆ ಈಗ ಖಚಿತವಾಗಿದೆ. ಆರ್ಎಸ್ಎಸ್ನವರು ಮೂಲತಃ ಕಟ್ಟಾ ಮಿಸೋಜಿನಿಸ್ಟ್ ಮನೋಭಾವದವರು. ಇವರು ಹೆಣ್ಣನ್ನು ‘ತಾಯಿ’ ‘ಜನನಿ’ ಎಂದು ಪರಿಗಣಿಸುತ್ತಾರೆ ವಿನಾ ಅವಳೊಬ್ಬ ಸ್ವತಂತ್ರ ವ್ಯಕ್ತಿ, ನಾಗರಿಕಳು ಎಂದು ಒಪ್ಪಿಕೊಳ್ಳುವುದಿಲ್ಲ. ಹೆಣ್ಣನ್ನು ಸಂಕೇತವಾಗಿಟ್ಟುಕೊಂಡ ಬೈಗುಳಗಳ ಬಗ್ಗೆ ಅವರಿಗೆ ವಿರೋಧವೇನಿಲ್ಲ. ಸನಾತನ ಪ್ರಣಾಳಿಕೆಯಲ್ಲಿ-ಮನುವಾದಿ ಸಿದ್ಧಾಂತದಲ್ಲಿ ಹೆಣ್ಣಿನ ಬಗ್ಗೆ ಗೌರವವೇನಿಲ್ಲ. ಹೆಣ್ಣಿಗೆ ಸ್ವತಂತ್ರ ಬದುಕಿದೆ ಎಂಬುದನ್ನು ವೈದಿಕತೆ ಒಪ್ಪುವುದಿಲ್ಲ.
ಬಸವಣ್ಣ ಹೆಣ್ಣನ್ನು ಹೇಗೆ ಪರಿಭಾವಿಸಿಕೊಂಡಿದ್ದರು ನೋಡಿ:
“ಕೂಳ ಸೊಕ್ಕು ತಲೆಗೇರಿ ರಾಣಿವಾಸದೊಡನೆ ಸರಸಬೇಡ, ಕೂಡಲಸಂಗಮದೇವ ಕರಸಿತನಯ್ಯಾ”
“ಅನ್ಯ ವಧುವೆಂಬುದು ನಿಮ್ಮ ರಾಣಿವಾಸ, ಅದೇ ದಿಬ್ಯ, ಕೂಡಲಸಂಗಮದೇವ”
“ಲಿಂಗಜಂಗಮ ಒಂದೆ ಎಂದು ನಂಬಿದ ಬಳಿಕ ಅವರಂಗನೆಯರು ಲಿಂಗದ ರಾಣಿವಾಸ”
“ಮೊಲೆಯುಂಬ ಭಾವತಪ್ಪಿ ಅಪ್ಪಿದರೆ, ತಲೆಯ ಕೊಂಬ ಕೂಡಲಸಂಗಮದೇವಾ”
“ಅಯ್ಯಾ ಎಂದರೆ ಸ್ವರ್ಗ: ಎಲವೋ ಎಂದರೆ ನರಕ” ಎಂಬುದು ಬಸವ ಪರಿಭಾಷೆ. ಸಿದ್ಧರಾಮಣ್ಣನವರ ಪ್ರಕಾರ “ಒಬ್ಬರ ಮನವ ನೋಯಿಸದವನೇ, ಒಬ್ಬರ ಘಾತವ ಮಾಡದವನೇ ಪರಮಪಾವನ”. ಈ ತತ್ವಕ್ಕೆ ಆರ್ಎಸ್ಎಸ್ನಲ್ಲಿ, ಮನುಸ್ಮೃತಿಯಲ್ಲಿ ಅವಕಾಶವಿಲ್ಲ.
4) ಲಿಂಗಾಯತ ಪೂಜ್ಯರ ಮೇಲೆ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಉದ್ದೇಶವೇನು? ನಿಮ್ಮ ಪ್ರತಿಕ್ರಿಯೆ.
ಇತ್ತೀಚಿಗೆ ಪ್ರಜಾವಾಣಿಯಲ್ಲಿ ಲೇಖಕರೊಬ್ಬರು ‘ಆರ್ಎಸ್ಎಸ್ ಸುಳ್ಳನ್ನು ಸೃಷ್ಟಿಸುವ ಬ್ರಹ್ಮ’ ಎಂದು ದಾಖಲೆ ಸಮೇತ ತೋರಿಸಿದ್ದಾರೆ. ಶತಮಾನಗಳಿಂದ ಸುಳ್ಳನ್ನು ಸೃಷ್ಟಿಸುವುದನ್ನು ಚಾತುರ್ವರ್ಣವು ತನ್ನ ವೃತ್ತಿಯನ್ನಾಗಿ ಮಾಡಿಕೊಂಡಿದೆ. ಎಲ್ಲ ಬಗೆಯ ಮಾಧ್ಯಮಗಳನ್ನು ಗುತ್ತಿಗೆ ಹಿಡಿದಿರುವ ಬ್ರಾಹ್ಮಣ್ಯವು ಇವರ ಸುಳ್ಳುಗಳನ್ನು ಅಪ್ಪಟ ನಿಜವೆನ್ನುವಂತೆ ಬಿತ್ತರಿಸುತ್ತಿವೆ.
ನ್ಯಾಯಾಲಯಗಳೇ ಛೀಮಾರಿ ಹಾಕಿದರೂ ಇವರಿಗೆ ಬುದ್ಧಿ ಬರುತ್ತಿಲ್ಲ. ಏಕೆಂದರೆ ಇವರಿಗೆ ನ್ಯಾಯಾಲಯದಲ್ಲಿಯೂ ನಂಬಿಕೆಯಿಲ್ಲ. ಧರ್ಮವನ್ನು ಒಡೆಯುತ್ತಿದ್ದಾರೆ ಎಂಬುದು ಅವರ ಒಂದು ಪ್ರಮುಖ ಸುಳ್ಳು. ವರ್ಣಾಶ್ರಮದ ಆಧಾರದ ಮೇಲೆ ಧರ್ಮವನ್ನು ಒಡೆದವರಾರು? ಮಹಿಳೆಯರಿಗೆಲ್ಲಾ ಶೂದ್ರ ಸ್ಥಾನ ಕೊಟ್ಟು ಧರ್ಮವನ್ನು ಒಡೆದವರಾರು?
5) ಈ ದಾಳಿಯ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಪರವಾಗಿ ಬಸವ ಸಂಘಟನೆಗಳು ನಿಲ್ಲಬೇಕೆ? ಅವರೇನು ಮಾಡಬೇಕು?
ಈ ಬಗ್ಗೆ ಅನುಮಾನಕ್ಕೆ ಅವಕಾಶವಿಲ್ಲ. ಬಸವ ಸಂಘಟನೆಗಳು ಲಿಂಗಾಯತ ಸ್ವಾಮೀಜಿಗಳ ಬೆನ್ನೆಲುಬಾಗಿ ನಿಂತಿದ್ದಾರೆ. ಇಟ್ಟಿಗೆ ಹೊರುವ ಕೆಲಸವನ್ನು ಲಿಂಗಾಯತರಿಗೆ ವಹಿಸಿಕೊಟ್ಟ ಕುಂಕುಮಧಾರಿ ಲಿಂಗಾಯತ ನಾಯಕರಿಗೆ ಪಾಠ ಕಲಿಸುವ ಜವಬ್ದಾರಿಯನ್ನು ಬಸವ ಸಂಘಟನೆಗಳು ಇಂದು ನಿರ್ವಹಿಸಬೇಕಾಗಿದೆ.
6) ಈ ಬೆಳವಣಿಗೆಗಳಿಂದ ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆಯೇ? ಅದನ್ನು ಉಳಿಸಿಕೊಳ್ಳುವುದು ಹೇಗೆ? .
ಸಂಶಯವೇ ಇಲ್ಲ. ಹಿಂದುತ್ವವಾದಿಗಳ ದಾಳಿಯು ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ನಮ್ಮ ಸಂವಿಧಾನವು ಬೇಕಾದ ನಮಗೆ ಧರ್ಮವನ್ನು ಆಯ್ದುಕೊಳ್ಳುವ, ಆಚರಿಸುವ ಹಾಗೂ ಪ್ರಸಾರ ಮಾಡುವ ಹಕ್ಕನ್ನು ನೀಡಿದೆ. ಅದಕ್ಕೆ ಆರೆಸ್ಸೆಸ್ ನವರು ಅಡ್ಡಿ ಬರುತ್ತಿದ್ದಾರೆ.
ಇದಕ್ಕೆ ಹೋರಾಟವೊಂದೆ ದಾರಿ. ಬಸವಣ್ಣನವರು ನಮಗೆ ವಿಪ್ರ ಕರ್ಮದಿಂದ ಬಿಡುಗಡೆಯಾಗುವ ಜವಾಬ್ದಾರಿ ನೀಡಿದ್ದಾರೆ. ಲಿಂಗಾಯತರು ವೈದಿಕತೆ ಬಿಡದಿದ್ದರೆ ಬಸವಣ್ಣ ಉಳಿಯುವುದಿಲ್ಲ.
7) ಸಾರ್ವಜನಿಕ ಸಂವಾದದಲ್ಲಿ ನಾವು ಸಭ್ಯತೆಯನ್ನು ಕಳೆದುಕೊಳ್ಳಬೇಕೆ? ನಮ್ಮ ಸೈದ್ಧಾಂತಿಕ ವಿರೋಧೀಗಳ ಮೇಲೆ ಇದೇ ಭಾಷೆ ಬಳಸಬೇಕೇ?
ಸಭ್ಯತೆ ಬಸವ ಸಂವಿಧಾನದ ಮೂಲ ಸೂತ್ರ. ಭಾವುಕರಾಗಿ ನಾವು ಸಂಯಮ ಕಳೆದುಕೊಳ್ಳುವುದು ಬೇಡ. ಹಿಂದುತ್ವವಾದಿಗಳ ಭಾಷೆಯನ್ನು ನಾವೂ ಬಳಸಿದರೆ ನಮಗೂ ಅವರಿಗೂ ವ್ಯತ್ಯಾಸವೆಲ್ಲಿ ಉಳಿಯುತ್ತದೆ?
‘ಅಪ್ಪ, ಅಣ್ಣ, ಅಯ್ಯಾ, ಅವ್ವಾ’ ಇವು ನಮ್ಮ ಪರಿಭಾಷೆ. ಬಸವಣ್ಣನವರು ಆದೇಶಿಸಿರುವಂತೆ ಕೊಲುವೆನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದು. ಇದನ್ನು ನಾವು ಪಾಲಿಸಬೇಕು.
8) ಈ ಸಮಯದಲ್ಲಿ ಬಸವಾದಿ ಶರಣರಿದ್ದರೆ ಏನು ಮಾಡುತ್ತಿದ್ದರು?
ಬಸವ ಸಂವಿಧಾನ ನಮಗೆ ದಾರಿ ದೀಪ. ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಭಾರತೀಯ ಸಂವಿಧಾನವೂ ನಮಗೆ ಅಷ್ಟೇ ಮುಖ್ಯ. ಅವುಗಳ ಮಾರ್ಗದರ್ಶನದಲ್ಲಿ ನಾವು ನಡೆಯೋಣ. ಇದನ್ನೇ ಬಸವಾದಿ ಶರಣು ಮಾಡುತ್ತಿದ್ದರು.
							
			
                                
                             
ಈ ಹಿಂದುತ್ವವಾದಿಗಳು, ಬಸವಾದಿ ಶರಣರ ಹೆಸರನ್ನು ಮುಂದಿಟ್ಟುಕೊಂಡು,ಅವರ ಬೇಳೆಯನ್ನು ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ. ನಾವು ಹೋರಾಟಕ್ಕೆ ಅಣಿಯಾಗದಿದ್ದರೆ ಲಿಂಗಾಯತರಿಗೆ ಉಳಿಗಾಲವಿಲ್ಲ.ಇವರು ಮಾಡುತ್ತಿರುವ ಸಮಾವೇಶ ಬಸವಾದಿ ಶರಣರದಲ್ಲ.ಅದರ ಹಿಂದಿನ ಗುರಿಯೇ ಬೇರೆಯಾಗಿದೆ.
ಲಿಂಗಾಯತರು ವೈದಿಕತೆ ಬಿಡದಿದ್ದರೆ ಬಸವಣ್ಣ ಉಳಿಯುವುದಿಲ್ಲ ಎಂಬ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ಇಂದು ಹಲವು ಕಾರಣಗಳಿಗಾಗಿ ಲಿಂಗಾಯತರು ಯಾವುದೇ ಕಾರಣಕ್ಕೆ ಹಿಂದುತ್ವ ಬಾಹುಬಂಧನದಿಂದ ಹೊರಗೆ ಹೋಗಬಾರದು ಮತ್ತು ಹೋಗಲು ಬಿಡಬಾರದು ಅನ್ನುವ ಹಟಕ್ಕೆ ಬಿದ್ದಿದ್ದಾರೆ. Aa ಕಾರಣದಿಂದ ಲಿಂಗಾಯತರನ್ನೇ ಉಪಯೋಗಿಸಿಕೊಂಡು ಲಿಂಗಾಯತರನ್ನೇ ಒಡೆಯುವ ಕೆಲಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಕೈಹಾಕಿದ್ದಾರೆ, ಅದು ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡುತ್ತಿಲ್ಲ ಎಂದು ಈಗ ದಶ ದಿಕ್ಕುಗಳಿಂದಲೂ ದಾಳಿ ನಡೆಸುತ್ತಿದ್ದಾರೆ. ಲಿಂಗಾಯತ ಮಠಾಧೀಶರುಗಳನ್ನೇ ಗುರಿಯಾಗಿಸಿಕೊಂಡು ವೈಯುಕ್ತಿಕ, ಮಾನಹಾನಿಕರ, ಅಸಂವಿಧಾನಿಕ, ದ್ವೇಷ ಭಾಷೆಯ ಪ್ರಯೋಗ ಮಾಡುತ್ತಿದ್ದಾರೆ. ಲಿಂಗಾಯತರಿಗೆ ಇದು ಸಂಘರ್ಷದ ಸಮಯ. ಒಗ್ಗಟ್ಟಾಗಿ ಇವರ ಎಲ್ಲಾ ತರಹದ ದಾಳಿಗಳನ್ನು ಎದುರಿಸಬೇಕು ಮತ್ತು ನಮ್ಮ ಸ್ಮಿತೆಯನ್ನು ಕಾಪಾಡಿಕೊಳ್ಳಬೇಕು.
ಲಿಂಗಾಯತರು ಬಹು ಪಾಲು ಕೃಷಿ ಹಿನ್ನೆಲೆಯಿಂದ ಬಂದವರು ಮತ್ತು ಕೃಷಿ ಭೂಮಿ ಇಂದು ಪಾಲಾಗಿ ಕೃಷಿ ಮಾಡಲು ಭೂಮಿ ಲಭ್ಯ ವಿಲ್ಲದ ಕಾರಣ ಜೀವನ ನಡೆಸಲು ಸಾಧ್ಯ ವಿಲ್ಲ ದಂತಾಗಿದೆ ಆದಕಾರಣ ಜನಸಾಮಾನ್ಯರು ಯಾವುದೇ ರೀತಿಯ ಜಾತಿ ವೈಷಮ್ಯ ಕೆ ಒಳಗಾಗದೆ ತಮ್ಮ ವೈಯಕ್ತಿಕ ಶ್ರಮ ರಿಂದ ಮುಂದೆ ಬರಬೇಕು ಮತ್ತು ಯಾವುದೇ ರಾಜಕೀಯ ಪಕ್ಷಗಳಿಂದ ಮತ್ತು ಮಠಗಳಿಂದ ಪ್ರ ಯೋಜನೆ ವಿಲ್ಲ.
ಲಿಂಗಾಯತರು ಭೌಗೋಳಿಕವಾಗಿ ಹಿಂದೂಗಳೆಂದು ಲಿಂಗಾಯತ ಮಠಾಧೀಶರೆ ನಿರ್ಣಯ ತೆಗೆದುಕೊಂಡಿದ್ದಾರೆ. ಹಿಂದೂತ್ವ ವಾದಿಗಳಿಗೆ ಇಷ್ಟು ಸಾಕಲ್ವೆ ?
ಬಸವ ಸಂಸ್ಕೃತಿ ಅಭಿಯಾನ ಯಶಸ್ವಿ ಕಂಡ ಕಾರಣ ವೈದಿಕರಿಗೆ ಬುಡದಲ್ಲಿ ಉರಿಬಿದ್ದಿದೆ