ಬೆಳಗಾವಿ:
ನಾವು ಗಳಿಸಿದ ಆಸ್ತಿ, ಸಂಪತ್ತು, ಹಣ, ಆಭರಣ ಇವು ಯಾವುದೂ ಶಾಶ್ವತವಲ್ಲ. ನಮ್ಮ ಜೀವಿತದ ಸಂದರ್ಭದಲ್ಲಿ ಹಾಗೂ ಜೀವನದ ನಂತರವೂ ನಮ್ಮೊಂದಿಗೆ ಬರುವುದು ಇಷ್ಟಲಿಂಗ ಮಾತ್ರ. ಅದೊಂದೇ ಶಾಶ್ವತ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ರವಿವಾರ ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗೃಹದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಿದ್ದ ‘ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗದೀಕ್ಷೆ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು, ಭಕ್ತರು ಪೂಜೆಯನ್ನು ಕಾಯಕವನ್ನಾಗಿ ಮಾಡಿಕೊಳ್ಳದೇ ಕಾಯಕವನ್ನೇ ಪೂಜೆಯನ್ನಾಗಿ ಮಾಡಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಸಂಚಾರಿ ಗುರುಬಸವ ಬಳಗದ ಸಂಚಾಲಕ ಮಹಾಂತೇಶ ತೋರಣಗಟ್ಟಿ, ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.

ವೇದಿಕೆಯ ಮೇಲೆ ಸೊಲ್ಲಾಪುರದ ಶಿವಬಸವ ದೇವರು, ವಿಶ್ವನಾಥ ದೇವರು ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಸೇರಿದಂತೆ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ ವಿದ್ಯಾರ್ಥಿಗಳು, ನೂರಾರು ಶರಣ ಶರಣೆಯರು ಮಾಸಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು.

