ಬಸವ ಭವನ ನಿರ್ಮಿಸಲು ಮುಂದಾಗಿರುವ ಮಂಡ್ಯ ಶಾಸಕರಿಗೆ ಅಭಿನಂದನಾ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ :

ನಗರಸಭೆಯ ಶಾಸಕರ ಕಚೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ವಿವಿಧ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಬಸವ ಭವನ ನಿರ್ಮಾಣಕ್ಕೆ ಮುಂದಾಗಿರುವ ಶಾಸಕರ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ವೀರಶೈವ ಲಿಂಗಾಯತ ವೇದಿಕೆ ಅಧ್ಯಕ್ಷ ಸುಂಡಹಳ್ಳಿ ಸೋಮಶೇಖರ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಡಲಾಗದೆ ಕೈಚೆಲ್ಲಿದ್ದ ‘ಬಸವ ಭವನ’ ನಿರ್ಮಾಣದ ಯೋಜನೆಗೆ ಸಂಕಲ್ಪತೊಟ್ಟಿರುವ ಶಾಸಕ ಪಿ. ರವಿಕುಮಾರಗೌಡ ಅವರ ಜನಪರ ಕಾಳಜಿ ಶ್ಲಾಘನೀಯ ಎಂದು ಹೇಳಿದರು.

ಅವರು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನೂರಾರು ಬಾರಿ ಮನವಿ ಮಾಡಿದ್ದರೂ ಜಿಲ್ಲೆಯಲ್ಲಿ ತಮ್ಮ ಹೆಸರು ಉಳಿಸುವಂತಹ ಯಾವುದೇ ಜನೋಪಯೋಗಿ ಕೆಲಸವನ್ನು ಯಡಿಯೂರಪ್ಪ ಅವರು ಮಾಡದೆ ಸಮುದಾಯದ ಭರವಸೆಯನ್ನು ಹುಸಿಮಾಡಿದ್ದರು.

ಇದೀಗ ಜಿಲ್ಲಾ ಕೇಂದ್ರವಾದ ಮಂಡ್ಯನಗರದಲ್ಲಿ 1 ಕೋಟಿ ರೂ. ಆರಂಭಿಕ ಅನುದಾನದೊಂದಿಗೆ ಬಸವ ಭವನ ನಿರ್ಮಾಣ ಮಾಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರ ಬಸವಪ್ರಜ್ಞೆ ಎಲ್ಲಾ ಜನಪ್ರತಿನಿಧಿಗಳಿಗೂ ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿಕೆ, ಸಾಂಸ್ಕೃತಿಕ ನಾಯಕ ಘೋಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ಸರ್ಕಾರ ನಡೆಸುತ್ತಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಹಲವಾರು ಬಾರಿ ವಿವಿಧ ಸಂಘಟನೆಗಳು ಬಸವ ಭವನ ಹಾಗೂ ಅಶ್ವಾರೂಢ ಬಸವೇಶ್ವರರ ಪುತ್ಥಳಿ ನಿರ್ಮಾಣದಂತಹ ಮಹತ್ತರ ಕಾರ್ಯಕ್ಕೆ ಮನವಿ ನೀಡಿದ್ದರ ಫಲವಾಗಿ ಶಾಸಕರ ಸಾರಥ್ಯದಲ್ಲಿ ಜಿಲ್ಲೆಯ ಶರಣರ ಬಹುದಿನಗಳ ಬೇಡಿಕೆ ಈಡೇರುತ್ತಿದೆ ಎಂದರು.

ಇದುವರೆಗೆ ಲಿಂಗಾಯತ ಸಮುದಾಯದ ಭಾವನೆಗಳಿಗೆ ಸಕಾರಾತ್ಮಕವಾಗಿ ಯಾವ ರಾಜಕಾರಣಿಗಳು ಸ್ಪಂದಿಸಿರಲಿಲ್ಲ. ಆದರೆ, ಯಾವುದೇ ಪಕ್ಷ, ಜಾತಿ, ಧರ್ಮವನ್ನು ನೋಡದೆ ಅಭಿವೃದ್ಧಿಯ ಪಥದಲ್ಲಿ ಸಾಗಿರುವ ಶಾಸಕರಾದ ಪಿ. ರವಿಕುಮಾರಗೌಡ ಅವರು ಎಲ್ಲಾ ಸಮುದಾಯಗಳ ಏಳ್ಗೆಗೆ ದುಡಿಯುತ್ತಿರುವ ಅಪರೂಪದ ಶಾಸಕರು ಎಂದು ಬಣ್ಣಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್. ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ಉದ್ದೇಶಿತ ‘ಬಸವ ಭವನ’ ಶರಣಬಂಧುಗಳ ಕಲ್ಯಾಣಕಾರ್ಯಗಳು, ಸಭೆ ಸಮಾರಂಭಗಳು ಯಶಸ್ವಿಯಾಗಿ ನಡೆಯಲು ವಿಶಾಲವಾದ ಸ್ಥಳದಲ್ಲಿ ನಿರ್ಮಾಣವಾಗಬೇಕು ಹಾಗೂ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ ಸೇರಿದಂತೆ ಯಾವುದೇ ತೊಂದರೆಗಳಿಲ್ಲದಂತೆ ಸಮಾಜದ ಜನತೆಗೆ ಅನುಕೂಲಕರವಾದ ವಾತಾವರಣದಲ್ಲಿ ನಿರ್ಮಾಣವಾಗಬೇಕಿರುವುರಿಂದ ಮಂಡ್ಯ ನಗರದ ವೀರಶೈವ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಕಟ್ಟಡವನ್ನು ಕಟ್ಟಬೇಕೆಂಬುದು ಒತ್ತಾಯಿಸಿ ಮನವಿ ನೀಡಿದರು.

ಶಾಸಕರ ಹಾಗೂ ಸರ್ಕಾರದ ಅನುದಾನ ಸದುಪಯೋಗವಾಗಬೇಕು ಹಾಗೂ ಸಮುದಾಯದ ಜನತೆಗೆ ಸದ್ಭಳಕೆಯಾಗುವ ಸದುದ್ದೇಶದಿಂದ ‘ಬಸವ ಭವನ’ ಗುದ್ದಲಿಪೂಜೆಯನ್ನು ವೀರಶೈವ ಹಾಸ್ಟೆಲ್ ಆವರಣದಲ್ಲಿ ನೆರವೇರಿಸಿ ವೀರಶೈವ ಲಿಂಗಾಯತರ ಅಭಿವೃದ್ಧಿಗೆ ಮುಂದಾಗಬೇಕೆಂದು ಕೋರಿದರು.

ಮಂಡ್ಯದ ಬನ್ನೂರು ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳ ಹಿಂಭಾಗದ ಜಾಗ ಬಸವ ಭವನ ನಿರ್ಮಾಣಮಾಡಲು ಹಲವಾರು ತಾಂತ್ರಿಕ ಕಾರಣಗಳಿಂದ ಸೂಕ್ತವಾಗಿರುವುದಿಲ್ಲ. ನಿವೇಶನದ ಮೇಲ್ಬಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಬಸವ ಭವನ ನಿರ್ಮಿಸುವಷ್ಟು ನಿವೇಶನ ವಿಶಾಲವಾಗಿರುವುದಿಲ್ಲ.

ಪ್ರತಿನಿತ್ಯ ನೂರಾರು ವಾಹನ ಸಂಚಾರದ ದಟ್ಟಣೆ ಇರುವುದರಿಂದ ಉದ್ದೇಶಿತ ಯೋಜನೆ ಸಫಲವಾಗುವುದಿಲ್ಲ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಪಿ. ರವಿಕುಮಾರಗೌಡ, ಜಗಜ್ಯೋತಿ ಬಸವಣ್ಣನವರ ತತ್ವ ಸಿದ್ಧಾಂತಗಳು ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಅಣ್ಣನವರ ಹೆಸರಿನ ಭವನವೂ ವಿಶಾಲವಾಗಿರಬೇಕೆಂಬ ಆಲೋಚನೆಯೂ ತಮ್ಮದಾಗಿದ್ದು ಎಲ್ಲರೊಡನೆ ಚರ್ಚಿಸಿ ನಿರ್ಧಾರಿಸಲಾಗುವುದು ಎಂದರು.

ಜೆಎಲ್‌ಎಂ ಅಧ್ಯಕ್ಷ ಎಂ. ಶಿವಕುಮಾರ, ಪ್ರಧಾನಕಾರ್ಯದರ್ಶಿ ಶಿವರುದ್ರಪ್ಪ, ಜಿಲ್ಲಾ ನಿರ್ದೇಶಕರಾದ ಮೆಣಸಗೆರೆ ಶಿವಲಿಂಗಪ್ಪ, ತೇಜಸ್ ಅಂತನಹಳ್ಳಿ, ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟಿ ಮಲ್ಲಿಕಾರ್ಜುನಯ್ಯ, ರುದ್ರಪ್ಪ, ಕನ್ನಟ್ಟಿ ನಾಗರಾಜು, ನಾಗಮಂಗಲ ಗಿರೀಶ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *