ಬಸವಕಲ್ಯಾಣ:
೪೬ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೫ ನಿಮಿತ್ಯ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಅವರ ‘ಕಲ್ಯಾಣ ದರ್ಶನ ಪ್ರವಚನ’ ಬಸವಭಕ್ತರನ್ನು ಆಕರ್ಷಿಸುತ್ತಿದೆ.
ರವಿವಾರ ನಡೆದ ‘ಕಲ್ಯಾಣ ದರ್ಶನ ಪ್ರವಚನ’ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರು ಸಕಲ ಜೀವಾತ್ಮರ ಕಲ್ಯಾಣ ಬಯಸಿದ ಮಹಾನುಭಾವರು. ೧೨ನೇ ಶತಮಾನದ ಕಲ್ಯಾಣ ಸರ್ವ ಸಮಾನತೆಯ ಕಲ್ಯಾಣವಾಗಿತ್ತು. ದೇಶದ ಎಲ್ಲ ದಾರಿಗಳು ಕಲ್ಯಾಣದ ಕಡೆ ಬರುತ್ತಿದ್ದವು.
ಬಸವಣ್ಣನವರ ಸಮಗ್ರ ಕ್ರಾಂತಿಯನ್ನು ನೋಡಲು ಜಗತ್ತಿನ ಎಲ್ಲ ಭಾಗಗಳಿಂದ ಶರಣರು ಕಲ್ಯಾಣಕ್ಕೆ ಆಗಮಿಸಿದರು. ಕಲ್ಯಾಣ ನೆಲದಲ್ಲಿ ಜಗತ್ತಿನ ಮೊದಲನೆಯ ಸಂಸತ್ತು ಎಂದು ಖ್ಯಾತಿ ಪಡೆದ ಅನುಭವಮಂಟಪ ರೂಪ ತಾಳಿತ್ತು.
ಅರಿವು, ಆಚಾರ, ಅನುಭಾವ, ಕಾಯಕ, ದಾಸೋಹ ಮುಂತಾದ ಮೌಲ್ಯಗಳ ನಿಜಾಚರಣೆಯಿಂದ ಕಲ್ಯಾಣ ಕೈಲಾಸವಾಗಿ ಕಂಗೋಳಿಸಿತ್ತು. ಈ ವೈಭವ ಮತ್ತೊಮ್ಮೆ ಕಾಣುವ ಉದ್ದೇಶದಿಂದ ಕಲ್ಯಾಣ ದರ್ಶನ ಪ್ರವಚನ ಏರ್ಪಡಿಸಲಾಗಿದೆ ಎಂದು ಆಶೀರ್ವಚನ ನೀಡಿದರು.
ಗುರುಬಸವ ಪಟ್ಟದ್ದೇವರು, ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಅತ್ತಿವೇರಿಯ ಬಸವೇಶ್ವರಿ ಮಾತಾಜಿ ಅವರಿಂದ ಪ್ರವಚನ ನಡೆಯಿತು. ನವೆಂಬರ್ 27ರವರೆಗೆ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಪ್ರತಿದಿನ ಸಂಜೆ 5ರಿಂದ ಪ್ರವಚನ ನಡೆಯಲಿದೆ.
ಬಸವಕಲ್ಯಾಣದ ನಿವೃತ್ತ ನ್ಯಾಯಾಧೀಶ ಸುಭಾಶಚಂದ್ರ ನಾಗರಾಳೆ ಸಮಾರಂಭದ ಉದ್ಘಾಟಿಸಿದರು. ಮಲ್ಲಿಕಾರ್ಜುನ ಚಿರಡೆ ಅವರಿಂದ ಬಸವ ಗುರುಪೂಜೆ ನಡೆಯಿತು. ಸುಧೀರ ಕಾಡಾದಿ, ಗುರುನಾಥ ಗಡ್ಡೆ ಮುಖ್ಯ ಅತಿಥಿಗಳಾಗಿದ್ದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ಪತಂಗೆ ಸ್ವಾಗತಿಸಿದರು. ಚಂದ್ರಕಾಂತ ಅಕ್ಕಣ್ಣ ಶರಣು ಸಮರ್ಪಣೆ ಮಾಡಿದರು. ಅಂಬರೀಷ ಭಿಮಾಣಿ ನಿರೂಪಿಸಿದರು. ರಾಜಕುಮಾರ ಹೂಗಾರ ಅವರಿಂದ ವಚನ ಸಂಗೀತ ಜರುಗಿತು.
