ಧಾರವಾಡ:
ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ, ಧಾರವಾಡ ಇದರ ಅಡಿಯಲ್ಲಿ ನವೆಂಬರ್ ೨೮, ೨೦೨೫ರಂದು ಸಂಜೆ ೫ ಗಂಟೆಗೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರ ೮೭ನೇ ಜನ್ಮದಿನದ ಪ್ರಯಕ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಹುಬ್ಬಳ್ಳಿಯ ಹಿರಿಯ ಸಂಶೋಧಕರಾದ ಡಾ. ಬಿ. ವಿ. ಶಿರೂರ ಅವರಿಗೆ ೨೦೨೫ನೇ ಸಾಲಿನ ‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೊಧನ ಪ್ರಶಸ್ತಿ’ ಮತ್ತು ಧಾರವಾಡದ ಶಾಸ್ತ್ರೀಯ ಮತ್ತು ಹಿಂದುಸ್ತಾನಿ ಸಂಗೀತ ಕಲಾವಿದರಾದ ವಿದುಷಿ ಸುಜಾತ ಗುರವ ಕಮ್ಮಾರ ಅವರಿಗೆ ‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ವಚನ ಸಂಗೀತ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ನಿರ್ಧರಿಸಲಾಗಿದೆ.

ಹಾಗೂ ‘ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ’ ೪೦ ಸಂಪುಟಗಳ ಮರುಲೋಕಾರ್ಪಣೆ ಮಾಡಲಾಗುವುದು.
ಹಿರಿಯ ವಿದ್ವಾಂಸರಾದ ಡಾ. ಹಂ.ಪ. ನಾಗರಾಜಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ ೪೦ ಸಂಪುಟಗಳ ಮರುಲೋಕಾರ್ಪಣೆ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಚಾರ್ಯರಾದ ಡಾ. ಬಸವರಾಜ ಜಗಜಂಪಿ ಅವರು ಅತಿಥಿಗಳಾಗಿ ಆಗಮಿಸುವರು.
ಉಮಾದೇವಿ ಎಂ. ಕಲಬುರ್ಗಿ ಅವರು ಹಾಗೂ ಪ್ರತಿಷ್ಠಾನದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಸುಜಾತ ಗುರವ ಕಮ್ಮಾರ ಅವರು ವಚನ ಗಾಯನ ಪ್ರಸ್ತುತ ಪಡಿಸುವರು.

‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿ-೨೦೨೫’ರ ಪುರಸ್ಕೃತರು
(೫೦,೦೦೦/- ನಗದು ಮತ್ತು ಪ್ರಶಸ್ತಿ ಫಲಕ)
ಡಾ. ಬಿ. ವಿ. ಶಿರೂರ, ವಿಶ್ರಾಂತ ಪ್ರಾಧ್ಯಾಪಕರು, ಹುಬ್ಬಳ್ಳಿ,
‘ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ವಚನ ಸಂಗೀತ ಪ್ರಶಸ್ತಿ-೨೦೨೫’ರ ಪುರಸ್ಕೃತರು
(೨೫,೦೦೦/- ನಗದು ಮತ್ತು ಪ್ರಶಸ್ತಿ ಫಲಕ)
ವಿದುಷಿ ಸುಜಾತ ಗುರವ ಕಮ್ಮಾರ, ಧಾರವಾಡ
ಈ ಇಬ್ಬರು ಸಾಧಕರಿಗೆ ನಡೆಯಲಿರುವ ಸಮಾರಂಭದಲ್ಲಿ ನಗದು ಪ್ರಶಸ್ತಿ ಮತ್ತು ಫಲಕವನ್ನು ಪ್ರದಾನ ಮಾಡಿ ಗೌರವಿಸಲಾಗುವುದು.
ಈ ಸಮಾರಂಭಕ್ಕೆ ಸಂಶೋಧಕರು, ಸಾಹಿತಿಗಳು, ಗಣ್ಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಕೋರಿದ್ದಾರೆ.
