ಹೈದರಾಬಾದ:
ಡಿ. 13 ರಿಂದ 18ರ ವರೆಗೆ ದುಬೈ ದೇಶದ ಜಾಕೋಬ್ ಹೊಟೇಲ್ ಸಭಾಂಗಣದಲ್ಲಿ ಆರನೇ ಅಂತರಾಷ್ಟ್ರೀಯ ಬಸವತತ್ವ ಸಮ್ಮೇಳನ ಹಾಗೂ ಮಹಾತ್ಮ ಬಸವೇಶ್ವರ, ಮಹಾತ್ಮಗಾಂಧಿ ಶಾಂತಿ ಯಾತ್ರಾ ಜರುಗಲಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಮಹಾಸ್ವಾಮಿಜಿ ತಿಳಿಸಿದರು.
ಹೈದರಾಬಾದ್ ನಗರದ ಶ್ರೀರಾಮ ಕಾಲೋನಿಯಲ್ಲಿರುವ ಮುಖಂಡರಾದ ಗಣಪತಿ ಚಿಂಚೋಳಿ ಅವರು ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೇಪಾಳ, ಭೂತಾನ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಮಾರಿಷಸ್ ನಲ್ಲಿ ಐದು ಬಸವತತ್ವ ಸಮ್ಮೇಳನ ಮಾಡಲಾಗಿದೆ. ದುಬೈನಲ್ಲಿ ಆರನೇ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಡಿ.14 ರಂದು ಭಾನುವಾರ ಸಮ್ಮೇಳನ ಜರುಗಲಿದ್ದು, ಈಗಾಗಲೇ ಭಾರತದಿಂದ ಸುಮಾರು ಐವತ್ತಕ್ಕೂ ಹೆಚ್ಚು ಜನರು ತಯಾರಾಗಿದ್ದು, ದುಬೈಗೆ ಬರುವವರ ಸಂಖ್ಯೆ ಹೆಚ್ಚಾಗಲಿದೆ ಎಂದರು.
ಬಸವೇಶ್ವರರನ್ನು ವಿಶ್ವಗುರು ಎಂದು ಕರೆಯಲಾಗುತ್ತದೆ. ಆದ್ದರಿಂದ ಬಸವ ತತ್ವವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಪಸರಿಸಬೇಕೆಂಬುದು ನಮ್ಮ ಮೂಲ ಉದ್ದೇಶವಾಗಿದೆ.
ಈಗಾಗಲೇ ದುಬೈನಲ್ಲಿರುವ ಭಾರತೀಯರಿಗೆ ಹಾಗೂ ಅಲ್ಲಿಯ ನಾಗರಿಕರಿಗೆ ಸಂಪರ್ಕಿಸಿ ಕಾರ್ಯಕ್ರಮದ ಸಕಲ ತಯಾರಿ ಮಾಡಲಾಗಿದೆ. ಪಾಸ್ ಪೋರ್ಟ್ ಇರುವ ಭಾರತೀಯ ಶರಣರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ಸಮ್ಮೇಳನ ರಾಷ್ಟ್ರೀಯ ಬಸವ ದಳ, ಚನ್ನಬಸವೇಶ್ವರ ಸಾಹಿತ್ಯಿಕ, ಸಾಮಾಜಿಕ ಮತ್ತು ಸಾಮಾಜಿಕ ಟ್ರಸ್ಟ್, ಗುರುಬಸವ ಫೌಂಡೇಶನ್ ಹೈದರಾಬಾದ್ ವತಿಯಿಂದ ಆಯೋಜಿಸಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಮೊ. ನಂ. 8073442105 ಗೆ ಸಂಪರ್ಕಿಸಲು ಪೂಜ್ಯ ಸ್ವಾಮೀಜಿ ಕೋರಿದ್ದಾರೆ. ಸ್ವಾಮೀಜಿ ಜೊತೆಗೆ ಗಣಪತಿ ಚಿಂಚೋಳಿ ಅವರು ಉಪಸ್ಥಿತರಿದ್ದರು.
