ಶಹಾಪುರ:
ನಗರದಲ್ಲಿ ಬರುವ ಡಿಸೆಂಬರ್ ಕೊನೆಯ ವಾರ ನಡೆಯುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ 5ನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶರಣ ಸಾಹಿತಿ, ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಆಯ್ಕೆಯಾಗಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಅಧ್ಯಕ್ಷತೆಯಲ್ಲಿ ಜರುಗಿದ ರಾಜ್ಯ ಪರಿಷತ್ ಸಭೆಯಲ್ಲಿ ಹೆಸರು ಅಂತಿಮಗೊಳಿಸಲಾಯಿತು.
ಸಮ್ಮೇಳನ ಸರ್ವಾಧ್ಯಕ್ಷತೆಗೆ ಸಮ್ಮೇಳನ ನಡೆಯುವ ಆಯಾ ಜಿಲ್ಲೆಯವರನ್ನೇ ಆಯ್ಕೆ ಮಾಡುವ ಮೂಲಕ ಆಯಾ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕೆಂಬ ಹಿನ್ನೆಲೆಯಲ್ಲಿ ಸತ್ಯಂಪೇಟೆ ಅವರ ಆಯ್ಕೆ ಮಾಡಲಾಯಿತು ಎಂದು ಹುಲಿಕಲ್ ನಟರಾಜ್ ಸಭೆಯಲ್ಲಿ ಪ್ರಕಟಿಸಿದರು.
ಸಮ್ಮೇಳನವು ಮುಂದಿನ ತಿಂಗಳು ಡಿ. 28, 29 ಮತ್ತು 30 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಭರದ ಸಿದ್ದತೆಗಳು ನಡೆಯುತ್ತಿವೆ.
ಸರ್ವಾಧ್ಯಕ್ಷರಾಗಿ ವಿಶ್ವಾರಾಧ್ಯರ ಆಯ್ಕೆಗೆ ಯಾದಗಿರಿ ಜಿಲ್ಲಾ ಸಮಿತಿ ಸ್ವಾಗತ ವ್ಯಕ್ತಪಡಿಸಿದ್ದು, ರಾಜ್ಯ ಸಮಿತಿ ಆಯ್ಕೆ ಸೂಕ್ತವಾಗಿದೆ ಎಂದು ಜಿಲ್ಲಾಧ್ಯಕ್ಷ ಗುಂಡಪ್ಪ ಕಲ್ಬುರ್ಗಿ ಅಭಿಪ್ರಾಯಪಟ್ಟಿದ್ದು, ಜಿಲ್ಲೆಯ ವೈಚಾರಿಕ ಸಾಹಿತಿಯೊಬ್ಬರ ಆಯ್ಕೆ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
