ಕನ್ನೇರಿ ಸ್ವಾಮಿ ವಿವಾದವನ್ನು ಸಂಘಪರಿವಾರ ವ್ಯವಸ್ಥಿತವಾಗಿ ಬೆಳೆಸುತ್ತಿದೆ
ಬೆಂಗಳೂರು
ಲಿಂಗಾಯತ ಸಮಾಜದ ಜೊತೆ ನಡೆಯುತ್ತಿರುವ ಘರ್ಷಣೆಯನ್ನು ಸುಲಭದಲ್ಲೇ ಇತ್ಯರ್ಥಗೊಳಿಸಲು ಕನ್ನೇರಿ ಸ್ವಾಮಿಗೆ ಅನೇಕ ಅವಕಾಶಗಳಿದ್ದವು. ಈ ನಿಟ್ಟಿನಲ್ಲಿ ಕೆಲವು ಲಿಂಗಾಯತ ಪೂಜ್ಯರು, ಪ್ರಮುಖರು ಪ್ರಯತ್ನಿಸಿದ್ದರೂ ಅವರಿಗೆ ಸಿಕ್ಕಿದ್ದು ಕನ್ನೇರಿ ಸ್ವಾಮಿಯ ಭಂಡತನದ ಉತ್ತರ ಮಾತ್ರ.
ಇದರ ಸರಳ ಅರ್ಥ, ಕನ್ನೇರಿ ಸ್ವಾಮಿಗೆ ಜೊತೆ ಜೊತೆಯಾಗಿ ನಿಂತಿರುವ ಸಂಘ ಪರಿವಾರಕ್ಕೆ ಈ ಉರಿ ತಣ್ಣಗಾಗುವುದು ಬೇಕಿಲ್ಲ. ಸಣ್ಣದಾಗಿ ಉರಿಗೆ ತುಪ್ಪ ಹಾಕುವ ಕೆಲಸ ನಿರಂತರವಾಗಿ ಸಾಗುತ್ತಿದೆ.
ಕನ್ನೇರಿ ಸ್ವಾಮಿಯ ವಿವಾದ ಭುಗಿಲೇಳುತ್ತಿದ್ದಂತೆಯೇ ರಿಪಬ್ಲಿಕ್ ಕನ್ನಡ, ಸುವರ್ಣಗಳಂತಹ ಆರೆಸ್ಸೆಸ್ ಟಿವಿ ಚಾನಲುಗಳನ್ನು ಬಳಸಿಕೊಂಡು ಅವರನ್ನು ಮಹಾನ್ ನಾಯಕರಂತೆ ದೊಡ್ಡದಾಗಿ ಬಿಂಬಿಸಲಾಯಿತು.
ನಂತರ ಈಶ್ವರಪ್ಪ, ಸೂಲಿಬೆಲೆ, ಯತ್ನಾಳರಂತಹ ಏಜೆಂಟರ ಮೂಲಕ ಕನ್ನೇರಿ ಯಜ್ಞಕ್ಕೆ ಮತ್ತಷ್ಟು ತುಪ್ಪ ಸುರಿಸಲಾಯಿತು.
ವಿವಿಧ ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿಯ ಮೇಲಿರುವ ನಿರ್ಬಂಧದ ವಿರುದ್ಧ ಹಿಂದುತ್ವ ಸಂಘಟನೆಗಳಿಂದ ಸರಣಿ ಪ್ರತಿಭಟನೆ, ಮೆರವಣಿಗೆಗಳು ಶುರುವಾದವು.
ಇವೆಲ್ಲಾ ಚೀರಾಡಿದ್ದು ಕನ್ನೇರಿ ಸ್ವಾಮಿಗೆ ವಿಧಿಸಿರುವ ನಿರ್ಬಂಧದ ಬಗ್ಗೆ. ವಿವಾದದ ಮೂಲ ಕಾರಣವಾಗಿರುವ ಅವರ ಪದಬಳಕೆಯ ಬಗ್ಗೆ ಎಲ್ಲೂ ಚಕಾರವಿಲ್ಲ.
ಬೆಳಗಾವಿಯಲ್ಲಿ ಕನ್ನೇರಿ ಸ್ವಾಮಿ ಪರ ಸೂಲಿಬೆಲೆ ಗ್ಯಾಂಗ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇದೇ ವಿಷಯದ ಮೇಲೆ ಪತ್ರಕರ್ತರಿಂದ ಪ್ರಶ್ನೆಗಳು ಬಂದವು. ಮಾತಿನ ಚಕಮಕಿ ನಡೆದು, ಗೊಂದಲ ಸೃಷ್ಟಿಯಾದರೂ ಯಾರೂ ಕನ್ನೇರಿ ಸ್ವಾಮಿಯ ಭಾಷಾ ಪಾಂಡಿತ್ಯ ತಪ್ಪು ಎಂದು ಹೇಳುವ ಗೋಜಿಗೆ ಹೋಗಲಿಲ್ಲ.
ಕನ್ನೇರಿ ಸ್ವಾಮಿ ಹೇಳಿದ್ದು ತಪ್ಪು ಎಂದು ಒಪ್ಪಿಕೊಂಡರೆ ವಿವಾದ ಅಲ್ಲಿಗೆ ಮುಗಿಯುತ್ತದೆ. ಅವರ ಆಕ್ರೋಶ, ಪ್ರತಿಭಟನೆಗಳೆಲ್ಲ ಗಾಳಿ ಬಿಟ್ಟ ಟ್ಯೂಬಿನಂತೆ ಮಲಗುತ್ತವೆ.
ಸಂಘ ಪರಿವಾರದ್ದು ಕುತಂತ್ರದ ಆಕ್ರೋಶ ಎಂದು ಕನ್ನೇರಿ ಸ್ವಾಮಿಗೆ ಛೀಮಾರಿ ಹಾಕಿರುವ ಕೋರ್ಟುಗಳ ತೀರ್ಪಿನಿಂದ ತಿಳಿಯುತ್ತದೆ. ನೀವು ಒಳ್ಳೆಯ ಪ್ರಜೆಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದರೆ, ನಿಮ್ಮದು ಖಾವಿಧಾರಿಗೆ ಯೋಗ್ಯ ನಡೆಯಲ್ಲ ಎಂದು ಹೈಕೋರ್ಟ್ ಹೇಳಿದೆ.
ಕೋರ್ಟುಗಳ ಖಂಡನೆ ಕೇಳಿ ಸಂಘ ಪರಿವಾರದವರು ಸುಮ್ಮನಾಗಿದ್ದರೆ ವಿವಾದ ತಣ್ಣಗಾಗಿಬಿಡುತ್ತಿತ್ತು. ಆದರೆ ಈಗ ನ್ಯಾ. ನಾಗಪ್ರಸನ್ನ ಪೀಠಕ್ಕೆ ಹೋಗಿ ಧಾರವಾಡದ ನಿರ್ಬಂಧ ತೆರವುಗೊಳಿಸಿ, ಮತ್ತೆ ಸ್ವಲ್ಪ ತುಪ್ಪ ಎರಚಿದ್ದಾರೆ.
ಕನ್ನೇರಿ ಸ್ವಾಮಿ ವಿವಾದದ ಬೆಂಕಿ ಹಚ್ಚಿದ್ದು ಸಂಘಪರಿವಾರವೇ?
ಇವರು ಈ ವಿವಾದವನ್ನು ಪೋಷಿಸುತ್ತಿರುವ ರೀತಿ ನೋಡಿದರೆ ಮತ್ತೊಂದು ಅನುಮಾನ ಹುಟ್ಟುತ್ತದೆ. ಕನ್ನೇರಿ ಸ್ವಾಮಿ ಬಾಯಿಯಿಂದ ಬಂದ ನುಡಿಮುತ್ತುಗಳು ಮಾತಿನ ಭರದಲ್ಲಿ ಬಂದಿದ್ದೇ ಅಥವಾ ಅವುಗಳನ್ನು ಯಾರಾದರು ಬರೆದು ಗಿಣಿಪಾಠ ಮಾಡಿ ಹೇಳಿಸಿದ್ದಾರೆಯೇ?
ಇಲ್ಲಿ ಒಂದು ಮುಖ್ಯ ವಿಷಯ ಗಮನಿಸಬೇಕು.
ಅಕ್ಟೊಬರ್ 9 ಕನ್ನೇರಿ ಸ್ವಾಮಿ ತಮ್ಮ ಭಾಷಣದಲ್ಲಿ ಅಭಿಯಾನದಲ್ಲಿ ಲಿಂಗಾಯತ ಪೂಜ್ಯರು ಮದ್ಯ, ಮಾಂಸ ತಿನ್ನಲು ಜನರಿಗೆ ಹೇಳಿದರು ಎಂದು ಆರೋಪಿಸಿದರು. ಇದು ಅಸಂಬದ್ಧವಾದ ಸುಳ್ಳು ಎಂದು ಮೇಲುನೋಟಕ್ಕೆ ಒಂದು ಮಗುವಿಗೂ ಕಾಣುತ್ತದೆ.
ಆದರೆ ಇದೇ ಸುಳ್ಳನ್ನ ಈಶ್ವರಪ್ಪ, ಯತ್ನಾಳ, ಸೂಲಿಬೆಲೆ ಗ್ಯಾಂಗಿನವರೆಲ್ಲ ಮತ್ತೇ ಮತ್ತೇ ಹೇಳಲು ಶುರು ಮಾಡಿದರು. ಇದೇ ಸುಳ್ಳನ್ನು ಸಂಘ ಪರಿವಾರದವರು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ.
ಕನ್ನೇರಿ ಸ್ವಾಮಿಯಿಂದ ಈ ಸುಳ್ಳು ಆಕಸ್ಮಿಕವಾಗಿ ಬಂದಿದ್ದರೆ ಅದು ಬಹುಷಃ ಅಲ್ಲೇ ನಿಂತುಹೋಗುತ್ತಿತ್ತು. ಆದರೆ ಅದು ಸಿಕ್ಕಸಿಕ್ಕಲ್ಲಿ ಪುನರಾವರ್ತನೆಯಾಗುತ್ತಿರುವ ರೀತಿಯನ್ನು ನೋಡಿದರೆ ಯಾರೋ ಈ ಸ್ಕ್ರಿಪ್ಟ್ ಬರೆದು ಬೊಂಬೆಯಾಟ ಆಡಿಸುತ್ತಿದ್ದಾರೆ ಎಂದು ಅನಿಸುತ್ತದೆ.
ಯಾವ ಕಾರಣದಿಂದ ಈ ವಿವಾದ ಬೆಳೆಸಿ, ಬಳಸಿಕೊಳ್ಳುತ್ತಿದ್ದಾರೆ? ಲಿಂಗಾಯತ ಪೂಜ್ಯರನ್ನು, ಸಮಾಜವನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ? ಇವರ ಉದ್ದೇಶವೇನು? ಇದು ನಮ್ಮ ಮುಂದಿರುವ ಪ್ರಶ್ನೆ.
ಸಂಘರ್ಷದ ದಿನಗಳು 1: ಬಸವ ವಿರೋಧಿಗಳ ‘ಬಸವಾದಿ ಶರಣರ ಹಿಂದೂ ಸಮಾವೇಶ’
ಸಂಘರ್ಷದ ದಿನಗಳು 2: ಕನ್ನೇರಿ ಸ್ವಾಮಿಯ ಜೊತೆ ಸೋಮಣ್ಣ ಸಂಧಾನ ವಿಫಲ

ನಿಸ್ಸಂದೇಹವಾಗಿ ಇದು ಆರೆಸ್ಸೆಸ್ ಸಂಚು. ಲಿಂಗಾಯತರು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು
ನಾವು ಅವರ ಮಾತು ಹೇಳುವದು ಕೇಳುವದು ಬಿಟ್ಟು ನಮ್ಮ ಕಾರ್ಯ ಗುರಿಯನ್ನು ಸಾಧಿಸಲು ಶಿದ್ಧ ರಾಗಿ ತಕ್ಕ ಉತ್ತರ ನೀಡಿ ಬಸವ ಧರ್ಮದ ದಾರಿಗೆ ಬೆಳಕು ಹಿಡಿದು ಮುಂದೆ ಸಾಗೋಣ ಜಯ್ ಬಸವ 🙏🏻ಶರಣು ಶರಣು 🙏🏻
ಇದು ಹಿಂದುತ್ವವಾದಿಗಳ ಅಜೆಂಡಾ ವಾಗಿದೆ. ಲಿಂಗಾಯತರ ಏಳಿಗೆಯನ್ನು ತಡೆಯುವ ಒಳಸಂಚು.ಹಾಗೂ ಕನ್ನೇರಿ ಸ್ವಾಮಿಯ ಭಂಢತನ ಬೆಂಬಲಿಸುವ ಚೇಲಾಗಳದ್ದೇ ಕೆಲಸ.
ಶರಣು ಶರಣಾರ್ಥಿ. ಸನಾತನಿಗಳಿಗೆ ನಿಜಕ್ಕೂ ಆತ್ಮಗೌರವ ಅಂತ ಇದ್ದರೆ, ಕನ್ನೇರಿ ಸ್ವಾಮಿ ಯನ್ನು ದೂರ ಇಡಬೇಕು. ಕನ್ನೇರಿ ಬಳಸುವ ಭಾಷೆ ಯಿಂದ ಮರ್ಯಾದೆ ಎಂತವರಿಗೂ ಬೀದಿಪಾಲು ಆಗುತ್ತದೆ.