ಚಿಂಚೋಳಿ:
ಶರಣರು ಹಾಗೂ ಸೂಫಿ ಸಂತರು ಸ್ಪವಿಮರ್ಶೆಗೆ ಒಳಗಾಗಿದ್ದಾರೆ. ಅವರು ಯಾರನ್ನು ದೂಷಣೆ ಮಾಡದೆ ತಮ್ಮನ್ನು ತಾವು ಆತ್ಮವಿಮರ್ಶೆಗೆ ಒಳಪಡಿಸಿಕೊಂಡಿದ್ದಾರೆ ಎಂದು ಕಲಬುರ್ಗಿಯ ಉಪನ್ಯಾಸಕಿ, ಸಾಹಿತಿ ಡಾ. ಕರುಣಾ ಜಮದರಖಾನಿ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣರು ಹಾಗೂ ಸೂಫಿ ಸಂತರು’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಈಸಕ್ಕಿ ಆಸೆ ನಿಮಗೇಕೆ….. ? ಎನ್ನುವ ಆಯ್ದಕ್ಕಿ ಲಕ್ಕಮ್ಮನ ವಚನ ಆರ್ಥಿಕ ಶಿಸ್ತಿಗೆ ಒಳಪಟ್ಟಿದೆ. ಆದರೆ ಇಂದಿನ ಮನುಕುಲ ವಿಪರೀತ ದುರಾಸೆಯಿಂದ ಹಪಾಹಪಿಸುತ್ತಿದೆ. ಇದರಿಂದಾಗಿ ಜಗತ್ತಿನಲ್ಲಿ ಅನೇಕ ಅವಘಡಗಳು ಸಂಭವಿಸುತ್ತಿವೆ. ಭ್ರಷ್ಟಾಚಾರ ಹೆಚ್ಚಾಗುತ್ತಿದೆ.
ಶರಣರು ಹಾಗೂ ಸೂಫಿ ಸಂತರು ಆಡಂಬರದ ಜೀವನ ನಡೆಸದೆ ಸರಳ ಸುಂದರ ಅನುಕರಣೀಯ ಬದುಕು ಸವೆಸಿದ್ದಾರೆ. ಅವರು ನಡೆ-ನುಡಿ ಒಂದಾಗಿಸಿಕೊಂಡಿದ್ದರು. ಹೀಗಾಗಿ ಶರಣರು ಹಾಗೂ ಸೂಫಿ ಸಂತರು 21ನೆಯ ಶತಮಾನದಲ್ಲೂ ಪ್ರಸ್ತುತವಾಗಿದ್ದಾರೆಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಲಬುರ್ಗಿ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನ್ಕೇರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ವೀರೇಶ ಬೇಮಳಗಿ ಸುಲೇಪೇಟ, ಕಲಬುರ್ಗಿಯ ಡಾ. ಸೋಮನಾಥ ಬಿರಾದರ, ಪ್ರಭಾರಿ ಉಪಪ್ರಾಂಶುಪಾಲ ಭೀಮರಾವ ಹೂಗಾರ ಮುಖ್ಯ ಅತಿಥಿಗಳಾಗಿದ್ದರು. ಪ್ರಭಾರಿ ಪ್ರಾಂಶುಪಾಲ ಡಾ. ಶಂಸುದ್ದೀನ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಶಾಲೆಗಳಿಗೆ ದಾಸೋಹ ಭಾವದಿಂದ ಕೊಡುಗೆ ನೀಡಿದ ನಿವೃತ್ತ ಶಿಕ್ಷಕ ಗುರುಲಿಂಗಪ್ಪ ಕೋರಿ, ಶಿಕ್ಷಕಿಯರಾದ ನಾಗರತ್ನ ಮಲ್ಲಿಕಾರ್ಜುನ ಚಿಮ್ಮನಚೋಡ, ಜ್ಞಾನೇಶ್ವರಿ ಸಜ್ಜನಶೆಟ್ಟಿ, ಚಂದ್ರಕಲಾ ಪೀರೆಡ್ಡಿ, ಜಯಶ್ರೀ ಕಟ್ಟಿಮನಿ, ಫಿರ್ದೋಸ್ ತಹಸೀನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವರಾಜ ಧೂಳಾಗುಂಡಿ, ವಿಶ್ವನಾಥ ಮಂಗಲಗಿ, ಕಾಲೇಜಿನ ಎಲ್ಲಾ ಉಪನ್ಯಾಸಕರು, ಶ್ರೀಶೈಲ ಕುಲಾಲ, ಮಂಜುನಾಥ್ ದುಬಲಗುಂಡಿ, ಚನ್ನಬಸಪ್ಪ ಪಸಾರ, ತಾರಕೇಶ್ವರಿ ವೀರಭದ್ರಪ್ಪ ತಾರಾಪೂರ ಸೇರಿ ಅನೇಕರು ಉಪಸ್ಥಿತರಿದ್ದರು.
ಶರಣಯ್ಯ ಸ್ವಾಮಿ ಅಲ್ಲಾಪುರ ಹಾಗೂ ವಿಶ್ವನಾಥ ಮಠಪತಿಯವರು ವಚನ ಸಂಗೀತ ನಡೆಸಿಕೊಟ್ಟರು. ಮಹೇಶ ಬೇಮಳಗಿ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಬಸವರಾಜ ಐನೋಳಿ ನಿರೂಪಿಸಿದರು. ಗಣಪತ ದೇವಕತ್ತೆ ವಂದಿಸಿದರು.
